ಒಂದು ಶತಕದಿಂದ ಚೇಂಜ್​ ಆಯ್ತು ಲೆಕ್ಕಾಚಾರ; ರಿಷಭ್​ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಂಡ ಡೆಲ್ಲಿ ಕ್ಯಾಪಿಟಲ್ಸ್​

Rishabh-Pant
Published on

ನವದೆಹಲಿ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದ್ದು, ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ. 635 ದಿನಗಳ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ರಿಷಭ್​ ಪಂತ್​ ಭರ್ಜರಿ ಶತಕ ಸಿಡಿಸುವ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ. ಇತ್ತ ರಿಷಭ್​ ಪಂತ್​ ಶತಕ ಸಿಡಿಸುತ್ತಿದ್ದಂತೆ ಅತ್ತ ಐಪಿಎಲ್​ ಫ್ರಾಂಚೈಸಿಗಳು ಹೊಸ ಲೆಕ್ಕಾಚಾರ ಹಾಕಲು ಶುರು ಮಾಡಿದ್ದು, ರಿಷಭ್​ ಪಂತ್​ ಸಿಡಿಸಿದ ಶತಕವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ಇನ್ನೂ ತಿಂಗಳುಗಳು ಬಾಕಿ ಉಳಿದಿದ್ದು, 2025ರ ಟೂರ್ನಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಮೆಗಾ ಹರಾಜಿಗೆ ಸಂಬಂಧಿಸಿದಂತೆ ಬಿಸಿಸಿಐ ಇನ್ನೂ ಕೂಡ ನಿಯಮ ಬಿಡುಗಡೆ ಮಾಡದಿರುವುದು ಫ್ರಾಂಚೈಸಿಗಳನ್ನು ಚಿಂತೆಗೆ ದೂಡುವಂತೆ ಮಾಡಿದೆ. ಇದೆಲ್ಲದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯು ತನ್ನ ನಾಯಕ ರಿಷಬ್ ಪಂತ್ ಅವರನ್ನು ತಂಡದಿಂದ ಕೈ ಬಿಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಪಂತ್ ಅವರನ್ನು ಡೆಲ್ಲಿ ಫ್ರಾಂಚೈಸಿ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

Rishabh Pant

ಕ್ರಿಕ್​ಬಜ್​ ವರದಿ ಮಾಡಿರುವ ಪ್ರಕಾರ ಡೆ್ಲಲಿ ಕ್ಯಾಪಿಟಲ್ಸ್​ ತಂಡದ ಸಹ ಮಾಲೀಕ ಪಾರ್ತ್​ ಜಿಂದಾಲ್​ ಅವರನ್ನು ಕೆಲ ದಿನಗಳ ಹಿಂದೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಲ್ಲದೆ ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ರಿಷಬ್ ಪಂತ್ ಅದ್ಭುತ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ವರ್ಷವೂ ಡೆಲ್ಲಿ ಕ್ಯಾಪಿಟಲ್ಸ್ ಪರ ಪಂತ್ ಆಡುವುದು ಖಚಿತವಾಗಿದ್ದು, ಈ ವಿಚಾರ ಪಂತ್​ ಅಭಿಮಾನಿಗಳಿಗೆ ಸಂತಸದ ಸುದ್ದಿ ಎಂದು ಹೇಳಲಾಗಿದ್ದು, ಪಂತ್​ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಉಳಿಯುವುದು ಬಹುತೇಕ ಖಚಿತವಾಗಿದೆ ಎಂದು ಐಪಿಎಲ್​ನ ಉನ್ನತ ಸುದ್ದಿ ಮೂಲಗಳು ತಿಳಿಸಿವೆ.

2022ರಲ್ಲಿ ನಡೆದ ಮೆಗಾ ಹರಾಜಿನ ವೇಳೆ 16 ಕೋಟಿ ರೂಪಾಯಿಗೆ ಪಂತ್​ ಅವರನ್ನು ಡೆಲ್ಲಿ ಫ್ರಾಂಚೈಸಿ ರಿಟೇನ್​ ಮಾಡಿಕೊಂಡಿತ್ತು. ಪಂತ್ ಅವರ ಪ್ರಸ್ತುತ ಐಪಿಎಲ್ ಸಂಭಾವನೆಯು 16 ಕೋಟಿ ರೂಪಾಯಿಗಳು. ಆದರೆ ಮುಂದಿನ ಆವೃತ್ತಿಗೆ ಸಂಭಾವನೆ ಹೆಚ್ಚಾಗುವ ಸಾಧ್ಯತೆಯಿದೆ. ನವೆಂಬರ್​ ಅಂತ್ಯ ಅಥವಾ ಡಿಸೆಂಬರ್​ ಆರಂಭದಲ್ಲಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ನಂತರ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದ್ದು, ಲೆಕ್ಕಾಚಾರಗಳು ಹಾಗೆ ಉಳಿಯಲಿದೆಯಾ ಅಥವಾ ತಲೆಕೆಳಗಾಗಲಿದೆಯಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net