

ಬೆಂಗಳೂರು: ಭಾರತದ ವಿಕೆಟ್‌ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಬ್ ಪಂತ್, ಯಾವುದೇ ಬೆಂಬಲವಿಲ್ಲದೆ ಮೆಟ್ಟಿಲುಗಳನ್ನು ಏರುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಕ್ರಿಕೆಟ್ ಜಗತ್ತಿಗೆ ತಮ್ಮ ಚೇತರಿಕೆಯ ಸುದ್ದಿಯನ್ನು ನೀಡಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಗೆ ಒಳಗಾಗುತ್ತಿರುವ ಪಂತ್, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪೋಸ್ಟ್ನಲ್ಲಿ, "ನಾಟ್ ಬ್ಯಾಡ್ ರಿಷಭ್, ಕೆಲವೊಮ್ಮೆ ಸರಳ ವಿಷಯಗಳು ಕಷ್ಟವಾಗಬಹುದು” ಎಂದು ಬರೆದುಕೊಂಡಿದ್ದಾರೆ.
ಚಿಕ್ಕ ವೀಡಿಯೊ ಕ್ಲಿಪ್‌ನ ಮೊದಲ ಭಾಗದಲ್ಲಿ ಪಂತ್, ಮೆಟ್ಟಿಲುಗಳನ್ನು ಹತ್ತಲು ಹೆಣಗಾಡುತ್ತಿರುವ ಕಾಲವನ್ನು ತೋರಿಸುತ್ತದೆ. ಆಗ ರೇಲಿಂಗ್‌ಗಳ ಬೆಂಬಲದ ಅಗತ್ಯವಿತ್ತು. ಆದರೆ ಎರಡನೇ ಭಾಗದಲ್ಲಿ ಅವರು ನಿರ್ಭೀತವಾಗಿ ಮೆಟ್ಟಿಲುಗಳನ್ನು ಏರುವುದನ್ನು ನಾವು ಕಾಣಬಹುದು.
IPL ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ "ಮುಂದುವರಿಯಿರಿ ರಿಷಬ್" ಎಂದು ಬರೆದಿದ್ದಾರೆ. ಅವರ ಸಹೋದರಿ ಸಾಕ್ಷಿ ಪಂತ್ ಕೂಡ 'ಮೈ ಸ್ಟಾರ್' ಎಂದು ಕಾಮೆಂಟ್ ಮಾಡಿದ್ದಾರೆ.
ಅದಲ್ಲದೇ ಭಾರತದ ಮಹಿಳಾ ಆಲ್‌ರೌಂಡರ್ ಹರ್ಲೀನ್ ಡಿಯೋಲ್ "ಒಳ್ಳೇ ಹುಡುಗ, ಭಾಂಗ್ರಾ ಪ್ರದರ್ಶನಕ್ಕೆ ಸಿದ್ಧವಾಗಿ" ಎಂದು ಬರೆದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಗ್ಯೂ ಹೇಡನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಡಿಸೆಂಬರ್ 30, 2022 ರಂದು, ಮುಂಜಾನೆ 5:30 ರ ಸುಮಾರಿಗೆ, ಪಂತ್ ಅವರು ತಮ್ಮ ತವರು ರೂರ್ಕಿಗೆ ಹೋಗುತ್ತಿರುವಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಾಗ ಅದೃಷ್ಟವಶಾತ್ ಬದುಕುಳಿದಿದ್ದರು. ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಳ ಮತ್ತು ನರ್ಸನ್ ನಡುವೆ ಭೀಕರ ಕಾರು ಅಪಘಾತ ಸಂಭವಿಸಿತ್ತು.