ಐದನೇ ಟೆಸ್ಟ್​ ಪಂದ್ಯದಿಂದ ರಿಷಭ್​ ಔಟ್​​: ಇವರೇ ನೋಡಿ ಪಂತ್​ ಸ್ಥಾನ ತುಂಬುವ ಯುವ ಕ್ರಿಕೆಟಿಗ! Rishabh Pant

Rishabh Pant
Published on

Rishabh Pant : ಪ್ರವಾಸಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜುಲೈ 31 (ಗುರುವಾರ) ರಿಂದ ಲಂಡನ್‌ನ ದಿ ಓವಲ್‌ನಲ್ಲಿ ಆರಂಭವಾಗಲಿದೆ.

ಈ ಟೆಸ್ಟ್​ ಸರಣಿಯಲ್ಲಿ 2-1 ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ 5ನೇ ಟೆಸ್ಟ್​ ಪಂದ್ಯ ಗೆಲ್ಲುವುದು ಬಹಳ ಮುಖ್ಯ. ಆದರೆ, ಈ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ದೊಡ್ಡ ಆಘಾತ ಅನುಭವಿಸಿದೆ. ಅದೇನೆಂದರೆ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಉಪನಾಯಕ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಐದನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪ್ರಕಟಿಸಿದೆ.

ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದದಂದು ಭಾರತದ ಮೊದಲ ಇನ್ನಿಂಗ್ಸ್‌ ವೇಳೆ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಶಾಟ್ ಆಡುವಾಗ ರಿಷಭ್ ಪಂತ್ ಅವರ ಬಲಗಾಲಿಗೆ ಚೆಂಡು ತಗುಲಿ ಗಾಯವಾಯಿತು. ಈ ವೇಳೆ ಪಂತ್ ಅವರು ತೀವ್ರ ನೋವಿನಿಂದ ಬಳಲಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಗಿತ್ತು. ವಿಡಿಯೋದಲ್ಲಿ ಪಂತ್​ ಅವರ ಕಾಲು ಊದಿಕೊಂಡು, ರಕ್ತಸ್ರಾವವಾದ ದೃಶ್ಯವಿತ್ತು.

ನೋವಿನಿಂದ ನಡೆಯಲು ಸಾಧ್ಯವಾಗದ ಕಾರಣ ಗಾಲ್ಫ್ ಕಾರ್ಟ್‌ನಲ್ಲಿ ಮೈದಾನದಿಂದ ಹೊರಗೆ ಅವರನ್ನು ಕರೆದೊಯ್ಯಲಾಯಿತು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಕಾಲಿನಲ್ಲಿ ಗಂಭೀರ ಗಾಯವಾಗಿದ್ದು, ಕನಿಷ್ಠ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ನೋವಿನ ಹೊರತಾಗಿಯೂ ಪಂತ್ ಪಂದ್ಯದ ಎರಡನೇ ದಿನ ತಂಡಕ್ಕಾಗಿ ಬ್ಯಾಟ್​ ಬೀಸಿದರು. ಆದರೆ, ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಪಂತ್​ ಅವರನ್ನು ಐದನೇ ಟೆಸ್ಟ್‌ ಪಂದ್ಯದಿಂದ ಹೊರಗಿಡಲಾಗಿದೆ.

ಪಂತ್​ ಅವರ ಸ್ಥಾನದಲ್ಲಿ ಯುವ ಬ್ಯಾಟ್ಸ್‌ಮನ್ ಎನ್. ಜಗದೀಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ತಮಿಳುನಾಡಿನ ವಿಕೆಟ್ ಕೀಪರ್ ಕಮ್​ ಬ್ಯಾಟ್ಸ್‌ಮನ್. ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ​ ಅವರನ್ನು ಕರೆಸಿಕೊಳ್ಳಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಗದೀಶನ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು 52 ಪಂದ್ಯಗಳಲ್ಲಿ 47.50 ಸರಾಸರಿಯಲ್ಲಿ 3373 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಮತ್ತು 14 ಅರ್ಧಶತಕಗಳು ಸೇರಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net