ರಿಷಭ್​ ಪಂತ್​ ಶೀಘ್ರ ದೇಶೀಯ ಕ್ರಿಕೆಟ್​ಗೆ ವಾಪಸ್; ಜನವರಿಯಲ್ಲಿ ಟೀಮ್​ ಇಂಡಿಯಾದತ್ತ!​

pant web
Published on

ಬೆಂಗಳೂರು: ಕಳೆದ ವರ್ಷಾಂತ್ಯದಲ್ಲಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಶೀಘ್ರದಲ್ಲೇ ದೇಶೀಯ ಕ್ರಿಕೆಟ್​ನಲ್ಲಿ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಬಳಿಕ 2024ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್​ಸಿಎ) ಪುನಶ್ಚೇತನ ಶಿಬಿರದಲ್ಲಿರುವ ರಿಷಭ್​ ಪಂತ್​, ಈಗಾಗಲೆ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಬಿಸಿಸಿಐ ವೈದ್ಯಕಿಯ ತಂಡ ಅವರ ಫಿಟ್ನೆಸ್​ ಪ್ರಗತಿಯ ಮೇಲೆ ಕಣ್ಣಿಟ್ಟಿದೆ. ರಿಷಭ್​ ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಮುನ್ನ ದೇಶೀಯ ಕ್ರಿಕೆಟ್​ನಲ್ಲಿ ಆಡಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಲಿ ನಡೆಯುತ್ತಿರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಆಡಲು ಪಂತ್​ ಫಿಟ್​ ಆಗಿಲ್ಲ. ಆದರೆ, ಮುಂದೆ ನವೆಂಬರ್​ 23ರಿಂದ ನಡೆಯಲಿರುವ ವಿಜಯ್​ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿ ಅಥವಾ ಜನವರಿ 5ರಿಂದ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ತವರು ರಾಜ್ಯ ದೆಹಲಿ ಪರ ಆಡಿ ಫಿಟ್ನೆಸ್​ ಸಾಬೀತುಪಡಿಸುವ ನಿರೀಕ್ಷೆ ಇದೆ.

ಭಾರತ ತಂಡ ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಆದರೆ ಪಂತ್​ ಅದಕ್ಕೆ ಫಿಟ್​ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ, 2024ರ ಜನವರಿ 11ರಿಂದ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ಅವರು ಫಿಟ್​ ಆಗುವ ನಿರೀಕ್ಷೆ ಇಡಬಹುದು. ಬಳಿಕ ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಂತ್​ ಉಪಸ್ಥಿತಿ ಭಾರತ ತಂಡಕ್ಕೆ ಹೆಚ್ಚು ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net