

ಕೋಲ್ಕತ: ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ಲಖನೌ ಸೂಪರ್ಜೈಂಟ್ಸ್ ತಂಡದ ಹೊಸ ನಾಯಕರಾಗಿ ಸೋಮವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಎಲ್ಎಸ್ಜಿ ಸೇರಿದ್ದ ಪಂತ್, ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಲು ಶೇ. 200 ಪ್ರಯತ್ನ ಪಡುವುದಾಗಿ ಹೇಳಿದರು.
ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ತಂಡದ ಹೊಸ ನಾಯಕನನ್ನು ಹೆಸರಿಸಿ, "ನಾವು ಹೊಸ ಭರವಸೆ ಮತ್ತು ಆಕಾಂಕ್ಷೆಯೊಂದಿಗೆ ಈ ಬಾರಿ ಕಣಕ್ಕಿಳಿಯಲಿದ್ದೇವೆ. ಹೊಸ ಆತ್ಮವಿಶ್ವಾಸವೂ ಬಂದಿದೆ' ಎಂದರು. ಐಪಿಎಲ್ 18ನೇ ಆವೃತ್ತಿಗೆ ಇನ್ನು ಆರ್ಸಿಬಿ, ಕೆಕೆಆರ್ ಮತ್ತು ಡೆಲ್ಲಿ ತಂಡಗಳಷ್ಟೇ ನಾಯಕನ ಹೆಸರನ್ನು ಘೋಷಿಸುವುದು ಬಾಕಿ ಉಳಿದಿದೆ.
2016ರಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ನಲ್ಲಿ ಆಡಿರುವ 26 ವರ್ಷದ ಪಂತ್, 2021ರಲ್ಲಿ ನಾಯಕರಾಗಿ ನೇಮಕಗೊಂಡಿದ್ದರು. 2022ರ ಅಂತ್ಯದ ಕಾರು ಅಪಘಾತದ ಬಳಿಕ 2023ರ ಆವೃತ್ತಿ ತಪ್ಪಿಸಿಕೊಂಡಿದ್ದ ಪಂತ್, 2024ರಲ್ಲಿ ಮತ್ತೆ ಡೆಲ್ಲಿ ನಾಯಕರಾಗಿ ಪುನರಾಗಮನ ಕಂಡಿದ್ದರು.