'ಕ್ಯಾಪ್ಟನ್ ಕೂಲ್'​ ತಂಡಕ್ಕೆ ಬೇಕಿದೆ ರಿಷಭ್ ಸಾಮರ್ಥ್ಯ! ಈ 3 ಕಾರಣಗಳು ಹೇಳ್ತಿವೆ CSK ಉದ್ದೇಶ

ವಿಜಯವಾಣಿ - 2024-11-18T180909.129
Published on

ನವದೆಹಲಿ: ಐಪಿಎಲ್​ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭಗೊಂಡಿದ್ದು, ಇದೇ ನವೆಂಬರ್​ 24-25ರಂದು ನಡೆಯಲಿರುವ ಆಕ್ಷನ್​ನತ್ತ ಎಲ್ಲಾ ಫ್ರಾಂಚೈಸಿಗಳ ಚಿತ್ತ ಮೂಡಿದೆ. ಒಂದೆಡೆ ಬಹುಬೇಡಿಕೆಯ ಸ್ಟಾರ್ ಆಟಗಾರರೇ ಹರಾಜಿನಲ್ಲಿರುವುದು ತಂಡಗಳಿಗೆ ಪ್ಲಸ್​ ಪಾಯಿಂಟ್​ ಆಗಿವೆ. ಇದರ ಮಧ್ಯೆ ಕೆಲವು ಸ್ಟಾರ್ ಪ್ಲೇಯರ್​ಗಳನ್ನು ಆಯಾ ಫ್ರಾಂಚೈಸಿಗಳನ್ನು ಟಾರ್ಗೆಟ್​ ಮಾಡಿಕೊಂಡಿದ್ದು, ತಮ್ಮ ಬಳಿಯಿರುವ ಬಜೆಟ್​ನಡಿ ಹೇಗಾದರೂ ಆ ಆಟಗಾರರನ್ನು ಖರೀದಿಸುವುದು ಮಹತ್ವದ ಗುರಿಯಾಗಿದೆ. ಪ್ರಸ್ತುತ ಈ ಸಾಲಿನಲ್ಲಿ ಐದು ಬಾರಿ ಚಾಂಪಿಯನ್ಸ್​ ಪಟ್ಟ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂಚೂಣಿಯಲ್ಲಿದೆ.

ವರದಿಗಳ ಪ್ರಕಾರ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ರೂವಾರಿ, ದಿಗ್ಗಜ ಕ್ರಿಕೆಟಿಗ ಎಂ.ಎಸ್​. ಧೋನಿ ಅವರು, ಡೆಲ್ಲಿ ಕ್ಯಾಪಿಟಲ್ಸ್​ನಿಂದ ಹರಾಜಿಗೆ ಬಂದಿರುವ ರಿಷಭ್ ಪಂತ್​ರನ್ನು ತಂಡಕ್ಕೆ ಕರೆದುಕೊಳ್ಳಲು ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಹಲವು ವರದಿಗಳು ಇದೇ ವಿಷಯವನ್ನು ಒತ್ತಿ ಹೇಳಿತ್ತು. ರಿಷಭ್ ಪಂತ್ ಬ್ಯಾಟಿಂಗ್ ಸಾಮರ್ಥ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೀಗಾಗಿ ಪಂತ್​ ತಂಡವನ್ನು ಪ್ರವೇಶಿಸಿದರೆ, ಸಿಎಸ್​ಕೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಲಾಗಿದೆ. ಅಸಲಿಗೆ ಈ ಮೂರು ಕಾರಣಗಳು ತಂಡಕ್ಕೆ ಪಂತ್​ ಅವಶ್ಯಕತೆ ಏನು ಎಂಬುದನ್ನು ವಿವರಿಸಿದೆ.

ಭವಿಷ್ಯದ ಕ್ಯಾಪ್ಟನ್​

ಕಳೆದ ಸೀಸನ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿರುವ ರಿಷಬ್ ಪಂತ್​, ನಾಯಕನಾಗಿ ಟೀಮ್​ ಸದಸ್ಯರೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತನ್ನದೇ ಅದ್ಭುತ ಬ್ಯಾಟಿಂಗ್ ವೈಖರಿ ಹೊಂದಿರುವ ಪಂತ್, ಎದುರಾಳಿಗಳ ವಿರುದ್ಧ ಮೈದಾನಕ್ಕಿಳಿದರೆ, ರನ್​ಗಳ ಸುರಿಮಳೆಯನ್ನೇ ಹರಿಸುತ್ತಾರೆ. ತಮ್ಮ ಜವಾಬ್ದಾರಿಯುತ ಆಟದ ಜತೆಗೆ ಕ್ಯಾಪ್ಟನ್ಸಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪಂತ್​, ಸಿಎಸ್​ಕೆಗೆ ಬಂದ್ರೆ, ಮುಂದಿನ ದಿನಗಳಲ್ಲಿ ಈ ಎರಡು ವಿಷಯಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ತಂಡಕ್ಕಿದೆ.

ಶಾಂತ ಸ್ವಭಾವ

ಉತ್ತಮ ಪ್ರದರ್ಶನದ ಜತೆಗೆ ಮಹೇಂದ್ರ ಸಿಂಗ್ ಧೋನಿ ಅವರಂತೆ ಹೆಚ್ಚು ಕೋಪ, ಆತಂಕಕ್ಕೆ ಒಳಗಾಗದೆ, ಮೈದಾನಕ್ಕಿಳಿಯುವ ಪಂತ್​, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಅಪಘಾತದಿಂದ ಮರಳಿದ ಬಳಿಕ ಫ್ರಾಂಚೈಸಿಗೆ ಭರವಸೆ ಮೂಡಿಸಿದ ರಿಷಬ್, 13 ಪಂದ್ಯಗಳ ಪೈಕಿ 446 ರನ್​ಗಳನ್ನು ಕಲೆಹಾಕಿದ್ದು, 155.40 ಸ್ಟ್ರೈಕ್​ರೇಟ್​ ಅನ್ನು ಹೊಂದಿದ್ದರು. ಇದು ಅವರ ಸಾಮರ್ಥ್ಯ ಮತ್ತು ಉದ್ದೇಶಗಳನ್ನು ಒತ್ತಿ ಹೇಳಿದೆ. ಈ ವಿಷಯವನ್ನು ಸಿಎಸ್​ಕೆ ಸೂಕ್ಷ್ಮವಾಗಿ ಗಮನಿಸಿದೆ.

ಫಿಟ್​ ಬ್ಯಾಟರ್​, ವಿಕೆಟ್ ಕೀಪರ್​

ಕೇವಲ ಬ್ಯಾಟಿಂಗ್​ನಲ್ಲಿ ಅಬ್ಬರಿಸದ ಪಂತ್​, ತಮ್ಮ ವಿಕೆಟ್​ ಕೀಪಿಂಗ್​ ಕೌಶಲ್ಯಗಳಿಂದ ಮೈದಾನದಲ್ಲಿ ಹೆಚ್ಚು ಗಮನಸೆಳೆಯುತ್ತಾರೆ. ಬ್ಯಾಟಿಂಗ್​ನಲ್ಲಿ ಅಬ್ಬರ ತೋರಿಸಿದರೆ, ಕೀಪಿಂಗ್​ನಲ್ಲಿಯೂ ತಮ್ಮ ಬುದ್ಧಿಶಕ್ತಿಯನ್ನು ಪ್ರದರ್ಶಿಸುತ್ತಾರೆ. ಕೆಲವೊಮ್ಮೆ ಮಹೇಂದ್ರ ಸಿಂಗ್ ಧೋನಿರನ್ನು ಅನುಕರಿಸಲು ಯತ್ನಿಸುವ ಪಂತ್​, ಅವರಂತೆಯೇ ಆಡಲು ಪ್ರಯತ್ನಿಸುವುದು ಗಮನಾರ್ಹ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರುವ ಸಿಎಸ್​ಕೆ, ಭವಿಷ್ಯದಲ್ಲಿ ವಿಕೆಟ್ ಕೀಪರ್​ ಆಗಿ ಧೋನಿ ಅವರ ಸ್ಥಾನವನ್ನು ತುಂಬಲು ರಿಷಬ್​ರಿಂದ ಸಾಧ್ಯವಿದೆಯೇ ಎಂಬುದನ್ನು ಕಂಡುಕೊಳ್ಳಲು ಚಿಂತನೆ ನಡೆಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net