

ಸೌಥಾಂಪ್ಟನ್: ಕಳೆದ ವರ್ಷದಿಂದಲೂ ಭರ್ಜರಿ ಫಾರ್ಮ್ ನಲ್ಲಿರುವ ಸ್ಫೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ ಇದೇ ಲಯ ಮುಂದುವರಿಸಿದ್ದಾರೆ. ಶನಿವಾರ ಭಾರತ ಆಟಗಾರರ ನಡುವಿನ ಅಭ್ಯಾಸದ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 94 ಎಸೆತಗಳಲ್ಲಿ ಅಜೇಯ 121 ರನ್ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ. ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಕುರಿತು ಬಿಸಿಸಿಐ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಟೆಸ್ಟ್ ಪಂದ್ಯಕ್ಕೆ ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡುವಂತೆ ಸ್ಫೋಟಿಸಿ ರಿಷಭ್ ಪಂತ್ ಗಮನಸೆಳೆದರು.
ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ನಡುವೆ ಡಬ್ಲ್ಯುಟಿಸಿ ಫೈನಲ್ ಪಂದ್ಯದ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟರೂ, ರಿಷಭ್ ಪಂತ್ ಮೊದಲ ಆಯ್ಕೆ ಯಾಗಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ ಶುಭಮಾನ್ ಗಿಲ್ 135 ಎಸೆತಗಲ್ಲಿ 85 ರನ್ ಕಲೆಹಾಕಿದ್ದಾರೆ. ಗಿಲ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ನಡುವೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.
ಜೂನ್ 18 ರಿಂದ 22 ರವರೆಗೆ ಸೌಥಾಂಪ್ಟನ್ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ನಡೆದರೆ, ಆಗಸ್ಟ್ 4 ರಿಂದ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.