ಅಫ್ಘಾನಿಸ್ತಾನ ವಿರುದ್ಧ ಸೋಲು! ಆಸಿಸ್​ ದಿಗ್ಗಜ ರಿಕ್ಕಿ ಪಾಂಟಿಂಗ್ ಸ್ಥಿತಿ​ ನೋಡಿ ಅಯ್ಯೋ ಪಾಪ ಎಂದ ನೆಟ್ಟಿಗರು

Ricky Poning
Published on

ನವದೆಹಲಿ: ಕ್ರಿಕೆಟ್​ನಲ್ಲಿ ಈಗಷ್ಟೇ ಬೆಳೆಯುತ್ತಿರುವ ಅಫ್ಘಾನಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ. ಈ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ನ್ಯೂಜಿಲೆಂಡ್​ಗೆ ಆಘಾತ ನೀಡಿದ ರಶೀದ್​ ಖಾನ್​ ಪಡೆ, ಭಾನುವಾರ (ಜೂನ್​ 23) ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಸೆಮಿಸ್ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಫ್ಘಾನ್ನರು ಅದ್ಭುತ ಆಟ ಪ್ರದರ್ಶಿಸಿದರು.

ಈ ಪಂದ್ಯದಲ್ಲಿ ಆಸೀಸ್ ತಂಡವನ್ನು 21 ರನ್​ಗಳಿಂದ ಮಣಿಸಿದ ಅಫ್ಘಾನಿಸ್ತಾನ ಐತಿಹಾಸಿಕ ಜಯ ದಾಖಲಿಸಿತು. ಯಾವುದೇ ಕ್ರಿಕೆಟ್​ ಮಾದರಿಯಲ್ಲಿ ಆಸಿಸ್​​ ವಿರುದ್ಧ ಅಫ್ಘಾನಿಸ್ತಾನ ಗಳಿಸಿದ ಮೊದಲ ಜಯ ಇದಾಗಿದೆ. ತಮ್ಮ ತಂಡ ಹೀನಾಯವಾಗಿ ಸೋತ ಬಳಿಕ ಆಸೀಸ್ ದಂತಕತೆ ರಿಕ್ಕಿ ಪಾಂಟಿಂಗ್ ಕಾಮೆಂಟರಿ ಬಾಕ್ಸ್‌ನಲ್ಲಿ ತುಂಬಾ ದುಃಖಿತರಾದರು. ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಟಿ20 ವಿಶ್ವಕಪ್ ಅಂಗವಾಗಿ ಭಾನುವಾರ ನಡೆದ ಸೂಪರ್ 8 ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 21 ರನ್​ಗಳಿಂದ ಆಫ್ಘಾನ್​ ಪಡೆ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 6 ಓವರ್‌ಗಳಲ್ಲಿ 148 ರನ್ ಗಳಿಸಿತು. ಆರಂಭಿಕರಾದ ಗುರ್ಬಾಜ್ (60) ಮತ್ತು ಜದ್ರಾನ್ (53) ರನ್ ಗಳಿಸಿ ಮಿಂಚಿದರು. ಆಸೀಸ್ ಬೌಲರ್‌ಗಳ ಪೈಕಿ ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದರು. ಆ ಬಳಿಕ 149 ರನ್​​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಆಸೀಸ್ ತಂಡವನ್ನು ಅಫ್ಘಾನ್ ಬೌಲರ್​ಗಳು ಕಾಡಿದರು. ಅವರ ಬೌಲಿಂಗ್ ಎದುರು ನಿಲ್ಲಲಾಗದೆ ಆಸೀಸ್ 127 ರನ್ ಗಳಿಗೆ ಕುಸಿಯಿತು. ಗುಲ್ಬದಿನ್ ನೈಬ್ 4 ವಿಕೆಟ್ ಹಾಗೂ ನವೀನ್ ಉಲ್ ಹಕ್ 3 ವಿಕೆಟ್ ಪಡೆದು ಆಸೀಸ್ ತಂಡವನ್ನು ಸೋಲಿಸಿದರು. ಮ್ಯಾಕ್ಸ್​ವೆಲ್ (59) ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತಿದ್ದರಿಂದ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ಭಾವುಕರಾದರು. ಕೊನೆಯ ವಿಕೆಟ್ ಬಿದ್ದಾಗ ದುಃಖಿತರಾದರು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಮತ್ತೊಬ್ಬ ವೀಕ್ಷಕ ವಿವರಣೆಗಾರ ಇಯಾನ್ ಸ್ಮಿತ್ ಅಫ್ಘಾನಿಸ್ತಾನದ ಯಶಸ್ಸನ್ನು ತಮ್ಮದೇ ಶೈಲಿಯಲ್ಲಿ ಕೊಂಡಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಿಕ್ಕಿ ಪಾಂಟಿಂಗ್​ ಸ್ಥಿತಿಯನ್ನು ನೋಡಿ ನೆಟ್ಟಿಗರು ಅಯ್ಯೋ ಪಾಪ ಎನ್ನುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net