

ವಿಜಯವಾಡ: ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇದೇ ಕ್ರೇಜ್‌ನೊಂದಿಗೆ ಸಿನಿಮಾವನ್ನು ಕೂಡ ಆರಂಭಿಸಿದ್ದಾರೆ. ಆದರೆ ಹರ್ಷ ಸಾಯಿ, ಜನರು ಅಂದುಕೊಂಡಷ್ಟು ಒಳ್ಳೆಯವರಲ್ಲ ಎಂದು ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಆರೋಪ ಮಾಡುತ್ತಲೇ ಬರುತ್ತಿದ್ದಾರೆ.
ರವಿ ಮಾರ್ಕ್ ಅಲಿಯಾಸ್ ಯುವಸಾಮ್ರಾಟ್ ರವಿ ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ರವಿ ಮಾರ್ಕ್ ಅವರು ಅಮೆರಿಕದಲ್ಲಿದ್ದರು. ಇದೀಗ ತವರಿಗೆ ಮರಳಿದ್ದಾರೆ. ಹರ್ಷ ಸಾಯಿ ಒಬ್ಬ ಮೋಸಗಾರ ಎಂದು ಆರೋಪಿಸಿ ಅನೇಕ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಇತ್ತೀಚೆಗೆ ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿ ಮಾರ್ಕ್ ಅವರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಹರ್ಷ ಸಾಯಿ ತನ್ನ ಹಿಂದೆ ಒಂದು ದೊಡ್ಡ ಮಾಫಿಯಾವನ್ನೇ ನಡೆಸುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಈತನ ಹಿಂದೆ ನೋಯ್ಡಾದ ದೊಡ್ಡ ಗ್ಯಾಂಗ್ ಇದೆ. ಸಾಫ್ಟ್ವೇರ್ ಕಂಪನಿಯಲ್ಲಿದ್ದುಕೊಂಡು ಅಕ್ರಮ ಬೆಟ್ಟಿಂಗ್ಗೆ ಉತ್ತೇಜನ ನೀಡುತ್ತಿದ್ದಾರೆ. 10,000 ಅಥವಾ 20,000 ಫಾಲೋವರ್ಸ್ಗಳನ್ನು ಹೊಂದಿದ್ದರೆ ಬೆಟ್ಟಿಂಗ್ ಕಂಪನಿಯು ಅವರನ್ನು ಸಂಪರ್ಕಿಸಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಲು ಉತ್ತೇಜಿಸುತ್ತದೆ. ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಹರ್ಷ ಸಾಯಿ ಕನಿಷ್ಠ 90 ಲಕ್ಷ ತೆಗೆದುಕೊಳ್ಳುತ್ತಾರೆ. ಈ ಹಣದಲ್ಲಿ 60 ಲಕ್ಷ ಜಿಎಸ್‌ಟಿ ಮತ್ತು ಉಳಿದ 40 ಲಕ್ಷ ಅವರ ಖಾತೆಗೆ ಹೋಗುತ್ತದೆ ಎಂದು ರವಿ ಮಾರ್ಕ್ ಆರೋಪಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡಲು ಹರ್ಷ ಸಾಯಿ ಬಡ ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಒಳ್ಳೆಯವನೆನಿಸಿದರೆ ಮಾತ್ರ ಜನ ನಂಬುತ್ತಾರೆ. ಜನ ನಂಬಿದಾಗ ಬೆಟ್ಟಿಂಗ್ ಆ್ಯಪ್ಗಳಲ್ಲಿ ಹಣ ಹೂಡುತ್ತಾರೆ. ಒಂದು ವಿಡಿಯೋದಲ್ಲಿ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದರೆ 40 ಲಕ್ಷ ರೂಪಾಯಿ ಸಿಗುತ್ತದೆ. ಇನ್ನೂ ಅಂತಹ ವಿಡಿಯೋಗಳಲ್ಲಿ ಎಷ್ಟು ಆ್ಯಪ್, ಎಷ್ಟು ಬಾರಿ ಪ್ರಚಾರ ಮಾಡಿದರೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು ರವಿ ಹೇಳಿದ್ದಾರೆ.
ಹರ್ಷ ಸಾಯಿ ಒಬ್ಬರೇ ಅಲ್ಲ, ಅಕ್ರಮ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಮೋಟ್ ಮಾಡಿ, ಜನರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ ಎಂದು ರವಿ ಹೇಳಿದರು. ಭಯ್ಯಾ ಸನ್ನಿ ಯಾದವ್ ಕೂಡ ಈ ಗುಂಪಿಗೆ ಸೇರಿರುವ ಆರೋಪವಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳಿಂದಾಗಿ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹರ್ಷ ಸಾಯಿ, ಭಯೋತ್ಪಾದಕನಿಗೆ ಸಮಾನ ಎನ್ನುವ ಮೂಲಕ ಯೂಟ್ಯೂಬರ್ ರವಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಹರ್ಷ ಸಾಯಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಗಿಂತಲೂ ಹೆಚ್ಚು ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)