WPL 2024: ತವರು ಅಂಗಣದಲ್ಲಿ ಆರ್​ಸಿಬಿ ಮಹಿಳೆಯರಿಂದ ಶುಭಾರಂಭ; ಆಶಾ ಗೆಲುವಿನ ರೂವಾರಿ

rcb womens web
Published on

ಬೆಂಗಳೂರು: ವಿಕೆಟ್​ ಕೀಪರ್​-ಬ್ಯಾಟರ್​ ರಿಚಾ ಘೋಷ್​ (62 ರನ್​, 37 ಎಸೆತ, 12 ಬೌಂಡರಿ), ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಯುವ ಬ್ಯಾಟುಗಾರ್ತಿ ಎಸ್​.ಮೇನಾ (53 ರನ್​, 44 ಎಸೆತ, 7 ಬೌಂಡರಿ, 1 ಸಿಕ್ಸರ್​) ಅರ್ಧಶತಕದಾಟ ಹಾಗೂ ಶೋಭನಾ ಆಶಾ (22ಕ್ಕೆ 5) ಸ್ಪಿನ್​ ದಾಳಿಯ ನೆರವಿನಿಂದ ಆರ್​ಸಿಬಿ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲುಪಿಎಲ್​) 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಎದುರು 2 ರನ್​ಗಳಿಂದ ರೋಚಕವಾಗಿ ಗೆದ್ದು ಶುಭಾರಂಭ ಕಂಡಿದೆ.

ತವರು ಅಂಗಣ ಚಿನ್ನಸ್ವಾಮಿ ಅಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ಮೇನಾ-ರಿಚಾ ಜತೆಯಾಟದ ಬಲದಿಂದ 6 ವಿಕೆಟ್​ಗೆ 157 ರನ್​ ಕಲೆಹಾಕಿತು. ಪ್ರತಿಯಾಗಿ ಶೋಭನಾ ಆಶಾ ದಾಳಿಗೆ ತತ್ತರಿಸಿದ ಯುಪಿ 7 ವಿಕೆಟ್​ಗೆ 155 ರನ್​ಗಳಿಸಲಷ್ಟೇ ಶಕ್ತವಾಯಿತು. 4ನೇ ವಿಕೆಟ್​ಗೆ ಗ್ರೇಸ್​ ಹ್ಯಾರಿಸ್​ ಹಾಗೂ ಶ್ವೇತಾ ಸೆಹ್ರಾವತ್​ ಜೋಡಿ 46 ಎಸೆತದಲ್ಲಿ 77 ರನ್​ ಸಿಡಿಸಿ ಚೇಸಿಂಗ್​ಗೆ ಬಲ ತುಂಬಿತು. ಆಗ ದಾಳಿಗಿಳಿದ ಶೋಭನಾ ಒಂದೇ ಓವರ್​ನಲ್ಲಿ 3 ವಿಕೆಟ್​ ಕಿತ್ತು ಆರ್​ಸಿಬಿಗೆ ಗೆಲುವಿನ ಆಸೆ ಚಿಗುರಿಸಿದರು. ಅಂತಿಮ ಓವರ್​ನಲ್ಲಿ 11 ರನ್​ ಅಗತ್ಯವಿದ್ದಾಗ ಸೋಫಿ ಮೂಲಿನೆಕ್ಸ್​ (1,1,0, 0,4,2) 8 ರನ್​ ಮಾತ್ರ ಬಿಟ್ಟುಕೊಟ್ಟರು.

ಆರ್​ಸಿಬಿ: 6 ವಿಕೆಟ್​ಗೆ 157 (ಸೋಫಿ 1, ಸ್ಮೃತಿ 13, ಮೇನಾ 53, ಎಲ್ಲಿಸ್​ ಪೆರ್ರಿ 8, ರಿಚಾ ಘೋಷ್​ 62, ಮೂಲಿನೆಕ್ಸ್​ 9*, ಶ್ರೇಯಾಂಕಾ 8*, ರಾಜೇಶ್ವರಿ 24ಕ್ಕೆ 2). ಯುಪಿ ವಾರಿಯರ್ಸ್​: 7 ವಿಕೆಟ್​ಗೆ 155 (ಅಲಿಸಾ 5, ವೃಂದಾ 18, ತಾಲಿಹಾ 22, ಗ್ರೇಸ್​ 38 ಶ್ವೇತಾ 31, ದೀಪ್ತಿ 13*, ಆಶಾ 22ಕ್ಕೆ 5, ಮೂಲಿನೆಕ್ಸ್​ 36ಕ್ಕೆ 1, ವಾರೆಹ್ಯಾಂ 23ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net