

ಬೆಂಗಳೂರು: ನಾಯಕಿ ಹರ್ಮಾನ್ಪ್ರೀತ್ ಕೌರ್ (55 ರನ್, 34 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕ ಹಾಗೂ ಅಂತಿಮ ಎಸೆತದಲ್ಲಿ ಸಜೀವನ್ ಸಜನ (6*) ಸಿಡಿಸಿದ ಸಿಕ್ಸರ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ವುಮೆನ್ಸ್ ಪ್ರಿಮೀಯರ್ ಲೀಗ್ (ಡಬ್ಲುಪಿಎಲ್) 2ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ. ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹರ್ಮಾನ್ಪ್ರೀತ್ ಕೌರ್ ಬಳಗ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ವಿಕೆಟ್ಗಳಿಂದ ರೋಚಕ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೋತು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ಆರಂಭಿಕ ಆಘಾತದ ಬಳಿಕ ಯುವ ಬ್ಯಾಟುಗಾರ್ತಿ ಆಲಿಸ್ ಕ್ಯಾಪ್ಸಿ (75 ರನ್, 53 ಎಸೆತ, 8 ಬೌಂಡರಿ, 3 ಸಿಕ್ಸರ್) ಹೋರಾಟದಿಂದ 5 ವಿಕೆಟ್ಗೆ 171 ರನ್ ಪೇರಿಸಿತು. ಪ್ರತಿಯಾಗಿ ಹರ್ಮಾನ್ಪ್ರೀತ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ (57 ರನ್, 45 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕದಿಂದ ಮುಂಬೈ ಭರ್ತಿ 20 ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ಗಳಿಸಿ ಗೆದ್ದು ಬೀಗಿತು.
ಕ್ಯಾಪ್ಸಿ ಎಸೆದ ಅಂತಿಮ ಓವರ್ನಲ್ಲಿ 3 ಎಸೆತದಲ್ಲಿ 9 ರನ್ ಅಗತ್ಯವಿದ್ದಾಗ ಬೌಂಡರಿ ಸಿಡಿಸಿದ ಕೌರ್, ಮರುಎಸೆತದಲ್ಲಿ ವಿಕೆಟ್ ಕೈ ಚೆಲ್ಲಿದರು. ಅಂತಿಮ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಜೀವನ್ ಸಜನ ಸಿಕ್ಸರ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್ಗೆ 171 (ಶೆಫಾಲಿ 1, ಲ್ಯಾನಿಂಗ್ 31, ಕ್ಯಾಪ್ಸಿ 75, ರೋಡ್ರಿಗಸ್ 42, ಸೀವರ್ 33ಕ್ಕೆ2, ಕೆರ್ 43ಕ್ಕೆ 2). ಮುಂಬೈ ಇಂಡಿಯನ್ಸ್: 6 ವಿಕೆಟ್ಗೆ 173 (ಮ್ಯಾಥ್ಯೂಸ್ 0, ಯಸ್ತಿಕಾ 57, ಸೀವರ್ 19, ಹರ್ಮಾನ್ಪ್ರೀತ್ 55 , ಕೆರ್ 24, ಆರುಂಧತಿ 27ಕ್ಕೆ2, ಕ್ಯಾಪ್ಸಿ 23ಕ್ಕೆ 2).