

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯನ್ನು ಅರಬ್ ರಾಷ್ಟ್ರ ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ನಡುವೆ ಕರ್ನಾಟಕದ ಕ್ರಿಕೆಟಿಗರು ಕೂಡ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಕಿಂಗ್ಸ್ ಇಲೆವೆನ್ ತಂಡವನ್ನು ಮುನ್ನಡೆಸಲಿರುವ ಕೆಎಲ್ ರಾಹುಲ್, ತಂಡದ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿರುವ ರಾಬಿನ್ ಉತ್ತಪ್ಪ, ಆರ್ಸಿಬಿ ತಂಡದ ಪರ ಕಣಕ್ಕಿಳಿಯಲಿರುವ ದೇವದತ್ ಪಡಿಕಲ್ ಮುಂತಾದ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಸೋಮವಾರ ಬ್ಯಾಟಿಂಗ್ ಅಭ್ಯಾಸದ ವಿಡಿಯೋವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದು, 'ನನ್ನ ಕಿವಿಗೆ ಸಂಗೀತ ಕೇಳಿಸುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ತಂಡವೊಂದರ ನಾಯಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರಿಗೆ ಕರ್ನಾಟಕದವರೇ ಆದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ಸಾಥ್ ನೀಡಲಿದ್ದಾರೆ. 2018ರ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ ಬರೋಬ್ಬರಿ 11 ಕೋಟಿ ರೂ. ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕರ್ನಾಟಕದ ಒಟ್ಟು 5 ಆಟಗಾರರನ್ನು ಒಳಗೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಒಟ್ಟು 12 ಕನ್ನಡಿಗರು ಆಡಲಿದ್ದು, ಈ ಪೈಕಿ 5 ಆಟಗಾರರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವುದು ವಿಶೇಷ. ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆಲ್ರೌಂಡರ್ ಕೆ. ಗೌತಮ್ ಮತ್ತು ಸ್ಪಿನ್ನರ್ ಜೆ. ಸುಚಿತ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಇತರ ಕನ್ನಡಿಗರು.
ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಕೂಡ ಈಗಾಗಲೆ ಐಪಿಎಲ್ನಲ್ಲಿ ಆಡುವ ಬಗ್ಗೆ ಕಾತರ ಹಂಚಿಕೊಂಡಿದ್ದು, ಐಪಿಎಲ್ನಲ್ಲಿ ಆಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇನೆ ಎಂದು ಈಗಾಗಲೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೋರ್ವ ಬ್ಯಾಟ್ಸ್ಮನ್ ಕರುಣ್ ನಾಯರ್ ಕೂಡ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕೆಕೆಆರ್ ತಂಡದಿಂದ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವ ರಾಬಿನ್ ಉತ್ತಪ್ಪ ಕೂಡ ಬೆಂಗಳೂರಿನಲ್ಲಿ ಮಳೆಯಿಂದಾಗಿ ಒಳಾಂಗಣ ಅಭ್ಯಾಸ ಆರಂಭಿಸಿದ್ದು, ಇದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್ಪ್ರವಾಹ ಹರಿಸಿ ಗಮನ ಸೆಳೆದಿದ್ದ ಯುವ ಎಡಗೈ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಈ ಬಾರಿ ಆರ್ಸಿಬಿ ಪರ ಮಿಂಚುವ ಸಿದ್ಧತೆಯಲ್ಲಿದ್ದು, ಯುಎಇಯಲ್ಲಿ ಐಪಿಎಲ್ ಟೂರ್ನಿ ಆಡಲು ಕಾತರದಿಂದ ಇರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅವರು ಆರ್ಸಿಬಿ ಕಿಟ್ನೊಂದಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಮತ್ತೋರ್ವ ಕನ್ನಡಿಗ ಪವನ್ ದೇಶಪಾಂಡೆ ಕೂಡ ಈ ಬಾರಿ ಆರ್ಸಿಬಿ ಪರ ಆಡಲಿದ್ದಾರೆ.
ಮನೀಷ್ ಪಾಂಡೆ (ಸನ್ರೈಸರ್ಸ್), ಪ್ರಸಿದ್ಧಕೃಷ್ಣ (ಕೆಕೆಆರ್), ಶ್ರೇಯಸ್ ಗೋಪಾಲ್ (ರಾಜಸ್ಥಾನ)ಮತ್ತು ಅನಿರುದ್ಧ ಜೋಷಿ (ರಾಜಸ್ಥಾನ) ಈ ಬಾರಿ ಐಪಿಎಲ್ನಲ್ಲಿ ಕಣಕ್ಕಿಳಿಯಲಿರುವ ಇತರ ಕನ್ನಡಿಗರಾಗಿದ್ದಾರೆ.