

ಮುಂಬೈ: ಓಟಕ್ಕೆ ಪಿಟಿ ಉಷಾ, ಸೌಂದರ್ಯಕ್ಕೆ ಐಶ್ವರ್ಯಾ ರೈ ಮತ್ತು ದೇಹದಾರ್ಢ್ಯಕ್ಕೆ ಸಲ್ಮಾನ್ ಖಾನ್ ಹೆಸರು ತಟ್ಟನೆ ನೆನಪಾಗುವಂತೆ ಕ್ರಿಕೆಟ್ನಲ್ಲಿ ಫೀಲ್ಡಿಂಗ್ ಎಂದಾಕ್ಷಣ ಎಲ್ಲರಿಗೂ ತಕ್ಷಣ ನೆನಪಾಗುವುದು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್. ಚುರುಕಿನ ಫೀಲ್ಡಿಂಗ್ಗೆ ಹೆಸರಾದ ಜಾಂಟಿ ರೋಡ್ಸ್ 2003ರಲ್ಲೇ ನಿವೃತ್ತಿ ಹೊಂದಿದ್ದರೂ, ಈಗಲೂ ಅವರಿಗಿಂತ ಅದ್ಭುತ ಫೀಲ್ಡರ್ ಅನ್ನು ಕ್ರಿಕೆಟ್ ಲೋಕ ಕಂಡಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರೀಗ ಜಾಂಟಿ ರೋಡ್ಸ್ಗೆ ಪೈಪೋಟಿ ಒಡ್ಡಬಲ್ಲ ಫೀಲ್ಡರ್ ಒಬ್ಬರನ್ನು ಪತ್ತೆ ಹಚ್ಚಿದ್ದಾರೆ!
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅವರು ಇತ್ತೀಚೆಗೆ ಟ್ವಿಟರ್ ಒಂದನ್ನು ಪ್ರಕಟಿಸಿದ್ದರು. ಅದರಲ್ಲಿ ಬೆಕ್ಕು ಗಾಲ್ಫ್ ಚೆಂಡುಗಳನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವ ದೃಶ್ಯಗಳಿದ್ದವು. ಹುಡುಗಿಯೊಬ್ಬಳು ಗಾಲ್ಫ್ ಕ್ಲಬ್ನಿಂದ ಬಾರಿಸುವ ಚೆಂಡನ್ನು ಎದುರಲ್ಲೇ ಇರುವ ಬೆಕ್ಕು ಅದ್ಭುತವಾಗಿ ಕ್ಯಾಚ್ ಹಿಡಿಯುವ ವಿಡಿಯೋಗೆ ಸಚಿನ್ ತೆಂಡುಲ್ಕರ್ ಪ್ರತಿಕ್ರಿಯೆ ನೀಡಿದ್ದು, 'ಜಾಂಟಿ ರೋಡ್ಸ್, ನನ್ನ ಗೆಳೆಯ ನಿಮಗೆ ಗಂಭೀರವಾದ ಸ್ಪರ್ಧೆ ಇಲ್ಲಿದೆ' ಎಂದು ಟ್ವೀಟಿಸಿದ್ದಾರೆ.
ಜಾಂಟಿ ರೋಡ್ಸ್ 1993ರಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ 5 ಕ್ಯಾಚ್ಗಳನ್ನು ಹಿಡಿಯುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಫೀಲ್ಡರ್ ಎನಿಸಿರುವ ಜಾಂಟಿ ರೋಡ್ಸ್ ನಿವೃತ್ತಿಯ ನಂತರ ಹಲವು ತಂಡಗಳಿಗೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.