

ನವದೆಹಲಿ: ಇತ್ತೀಚೆಗಷ್ಟೇ ಐಪಿಎಲ್ನಿಂದ ನಿವೃತ್ತಿಯಾದ ಕ್ರಿಕೆಟಿಗ ಅಂಬಟಿ ರಾಯುಡು ಹೊಸ ಇನ್ನಿಂಗ್ಸ್ ಆರಂಭಿಸಲು ಸಿದ್ದರಾಗಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಅವರು ಸದ್ಯದಲ್ಲೇ ರಾಜಕೀಯ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಯುಡು ಮಾತನಾಡುತ್ತಾ, ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದರು. ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದರು. ಜನರ ಸೇವೆ ಮಾಡುವುದು ಉತ್ತಮ ಕೆಲಸಗಳಲ್ಲಿ ಒಂದು. ಹೀಗಾಗಿ ರಾಜಕೀಯಕ್ಕೆ ಸೇರುವ ಬಗ್ಗೆ ಅನೇಕ ದಿನಗಳಿಂದ ಯೋಚಿಸುತ್ತಿದ್ದೇನೆ. ಯಾವುದೇ ಪಕ್ಷಕ್ಕೆ ಸೇರುವ ಮೊದಲು ಜನರನ್ನು ಭೇಟಿ ಮಾಡಬೇಕು ಎಂದು ಅಂಬಟಿ ರಾಯುಡು ಹೇಳಿಕೊಂಡಿದ್ದರು.
ಅಂಬಟಿ ರಾಯುಡು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯವರು. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಡೆಯಲಿದೆ. ಹೀಗಾಗಿ ಒಂದು ವೇಳೆ ರಾಯುಡು ರಾಜಕೀಯಕ್ಕೆ ಪ್ರವೇಶಿಸಿದ್ದೇ ಆದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎನ್ನಲಾಗಿದೆ.
ಇತ್ತೀಚೆಗೆ ಅಂಬಟಿ ರಾಯುಡು ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ರಾಜಕೀಯ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ 2024ರ ಆಂಧ್ರ ವಿಧಾನಸಭೆ ಚುನಾವಣೆಯ ಮುಂಚಿತವಾಗಿ ರಾಯುಡು ವೈಎಸ್ಆರ್ಸಿಪಿ ಪಕ್ಷಕ್ಕೆ ಸೇರ್ಪಡೆಗೊಂಡರೂ ಅಚ್ಚರಿಯೇನಿಲ್ಲ. (ಏಜೆನ್ಸೀಸ್)