

ಚೆನ್ನೈ: ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಯುವ ಆಟಗಾರ ಡಿ. ಗುಕೇಶ್ ತಮಗೆ ಲಭಿಸಿದ 11.45 ಕೋಟಿ ರೂ. ಬಹುಮಾನ ಮೊತ್ತದಲ್ಲಿ 4.8 ಕೋಟಿ ರೂ. (ಶೇ. 30+ಶೇ.4 ಆರೋಗ್ಯ, ಶಿಕ್ಷಣ ಸೆಸ್) ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗಿದೆ. ಹೀಗಾಗಿ, ದೇಶಕ್ಕೆ ಹೆಮ್ಮೆ ತಂದಿರುವ ಗುಕೇಶ್ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ತಮಿಳುನಾಡಿನ ಕಾಂಗ್ರೆಸ್ ಸಂಸದೆ ಆರ್. ಸುಧಾ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ರವಿಶಾಸ್ತ್ರಿಗೆ ತೆರಿಗೆ ವಿನಾಯಿತಿ ನೀಡಿದ ವಿಶೇಷ ಸಂದರ್ಭಗಳನ್ನು ಅವರು ನೆನಪಿಸಿದ್ದಾರೆ. ಗುಕೇಶ್ ಕಟ್ಟಬೇಕಿರುವ ಭಾರಿ ತೆರಿಗೆಗಾಗಿ, ಈ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರನ್ನು ಅಭಿನಂದಿಸುವ ಮೂಲಕ ನೆಟ್ಟಿಗರು ಕಾಲೆಳೆದಿದ್ದರು.
ಆದರೆ ಇನ್ನೊಂದು ವರದಿಯ ಪ್ರಕಾರ, ಟೂರ್ನಿ ನಡೆದಿರುವುದು ಸಿಂಗಾಪುರದಲ್ಲಾಗಿರುವ ಕಾರಣ ಗುಕೇಶ್ ಅಲ್ಲೇ ತೆರಿಗೆ ಪಾವತಿಸಬೇಕಿದೆ. ಅಲ್ಲದೆ ಭಾರತ-ಸಿಂಗಾಪುರ ನಡುವಿನ ಅವಳಿ ತೆರಿಗೆ ತಪ್ಪಿಸುವ ಡಿಟಿಎಎ ಒಪ್ಪಂದದ ಪ್ರಕಾರ ಅವರು ಭಾರತದಲ್ಲಿ ತೆರಿಗೆ ಕಟ್ಟಬೇಕಿಲ್ಲ. ಸಿಂಗಾಪುರದಲ್ಲಿ ಗುಕೇಶ್ ಶೇ. 22 ಅಂದರೆ 2.52 ಕೋಟಿ ರೂ. ತೆರಿಗೆ ಪಾವತಿಸಬೇಕಿದೆ.