

ಹೈದರಾಬಾದ್: ಇಂಗ್ಲೆಂಡ್ನ ಬರ್ವಿುಂಗ್ಹ್ಯಾಂನಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಿದ ಬಳಿಕ ತವರಿಗೆ ವಾಪಸಾಗಿರುವ ಸ್ಟಾರ್ ಷಟ್ಲರ್ ಪಿವಿ ಸಿಂಧು ಕ್ವಾರಂಟೈನ್ನಲ್ಲಿ (ಎಲ್ಲರ ಸಂಪರ್ಕದಿಂದ ದೂರ) ಉಳಿಯಲು ನಿರ್ಧರಿಸಿದ್ದಾರೆ. ಸಿಂಧು ತರಬೇತಿ ಪಡೆಯುತ್ತಿರುವ ಸಾಯ್-ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಕರೊನಾ ಭೀತಿಯಿಂದ ಈಗಾಗಲೇ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ತೆಲಂಗಾಣ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಕ್ರೀಡಾ ಚಟುವಟಿಕೆ ಸ್ಥಗಿತಗೊಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿವಿ ಸಿಂಧು ತಂದೆ ರಮಣ, ಒಂದು ವಾರದ ಬಳಿಕ ಪರಿಸ್ಥಿತಿ ಅವಲೋಕಿಸಿ ಸಿಂಧು ಅಭ್ಯಾಸ ಶುರು ಮಾಡಲಿದ್ದಾರೆ. ಅಭ್ಯಾಸ ಆರಂಭಿಸದಿದ್ದರೆ, ಒಲಿಂಪಿಕ್ಸ್ ಸಿದ್ಧತೆ ಕಷ್ಟವಾಗುತ್ತದೆ. ಈ ಮಹಾಕೂಟಕ್ಕೆ ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿದೆ’ ಎಂದಿದ್ದಾರೆ. ‘ಕ್ರೀಡಾ ಸಚಿವರೇ ಅಭ್ಯಾಸ ನಡೆಸಲು ಸೂಚಿಸಿದ್ದು, ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ರಮಣ ತಿಳಿಸಿದ್ದಾರೆ. -ಏಜೆನ್ಸೀಸ್
ವಿದೇಶದಿಂದ ಮರಳಿದ ಎಲ್ಲ ಕ್ರೀಡಾಪಟುಗಳಿಗೆ ಕ್ವಾರಂಟೈನ್
ಕೊವಿಡ್-19 ಪೀಡಿತ ದೇಶಗಳಿಂದ ತವರಿಗೆ ಮರಳುವ ಎಲ್ಲ ಕ್ರೀಡಾಪಟುಗಳಿಗೆ ಕ್ವಾರಂಟೈನ್ ಕಡ್ಡಾಯ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಚೀನಾ, ದಕ್ಷಿಣ ಕೊರಿಯಾ, ಇರಾನ್, ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ಮತ್ತಿತರ ದೇಶಗಳಿಂದ ಮರಳಿದ ಇತರರಿಗೆ ಇರುವ ಕಡ್ಡಾಯ ಐಸೋಲೇಶನ್ನಂಥ ಮಾರ್ಗಸೂಚಿಗಳನ್ನು ಕ್ರೀಡಾಪಟುಗಳೂ ಪಾಲಿಸಬೇಕೆಂದು ತಿಳಿಸಿದ್ದಾರೆ. ಕ್ರೀಡಾಕೂಟ ಗಳು ಮತ್ತು ತರಬೇತಿ ಮತ್ತಿತರ ಕ್ರೀಡಾ ಚಟುವಟಿಕೆ ಗಳಲ್ಲಿ ತೊಡಗಿದ್ದ ದೇಶದ ಹೆಚ್ಚಿನ ಕ್ರೀಡಾಪಟುಗಳು ಈಗ ತವರಿಗೆ ಮರಳುತ್ತಿದ್ದಾರೆ. ಅವರಲ್ಲಿ ಕುಸ್ತಿಪಟು ವಿನೇಶ್ ಪೋಗಟ್, ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಪ್ರಮುಖರು.