

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ದಿಢೀರ್ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯ ಉಳಿದ ಭಾಗ ಭಾರತದಲ್ಲಿ ನಡೆಯುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಅಲ್ಲದೆ, ಈಗಾಗಲೆ ಬಿಡುವಿಲ್ಲದೆ ಕೂಡಿರುವ ಹಾಲಿ ವರ್ಷದ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಐಪಿಎಲ್ಗೆ ಸಮಯ ಹೊಂದಾಣಿಕೆ ಮಾಡುವ ಬಗ್ಗೆಯೂ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಗಿದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಡುವೆ ಒಂದು ತಿಂಗಳ ಅಂತರವಿದೆ. ಈ ಅವಧಿಯಲ್ಲಿ ಐಪಿಎಲ್ ಪೂರ್ಣಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ಗಂಗೂಲಿ, ಆ ಸಮಯದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡು 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಆದರೆ ಈಗಿನ 14 ದಿನಗಳ ಕ್ವಾರಂಟೈನ್ ನಿರ್ಬಂಧಗಳಿಂದಾಗಿ ಇದು ಸಾಧ್ಯವಾಗುವುದು ಅನುಮಾನ. ಐಪಿಎಲ್ನ ಉಳಿದ ಭಾಗ ಭಾರತದಲ್ಲಂತೂ ನಡೆಯದು. ಐಪಿಎಲ್ಗೆ ಹೇಗೆ ಸಮಯ ಹೊಂದಾಣಿಕೆ ಮಾಡುತ್ತೇವೆ ಎಂದೂ ಈಗಲೆ ಹೇಳಲಾಗದು ಎಂದುತ್ತರಿಸಿದ್ದಾರೆ.
ಬಯೋಬಬಲ್ಗೆ ಕರೊನಾ ಪ್ರವೇಶಿಸುವ ಮುನ್ನವೇ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಬೇಕಾಗಿತ್ತು ಎಂಬ ಅಭಿಪ್ರಾಯವನ್ನು ಒಪ್ಪದ ಗಂಗೂಲಿ, ಹೇಳುವವರು ಏನು ಬೇಕಾದರೂ ಹೇಳಬಹುದು. ಮುಂಬೈ, ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆದಾಗ ಯಾವುದೇ ಪ್ರಕರಣಗಳು ಬರಲಿಲ್ಲ. ದೆಹಲಿ, ಅಹಮದಾಬಾದ್ನಲ್ಲಿ ಪಂದ್ಯಗಳು ನಡೆದಾಗ ಪ್ರಕರಣಗಳು ದಾಖಲಾದವು. ಇಂಗ್ಲಿಷ್ ಪ್ರೀಮಿಯರ್ ಲೀಗ್ ಪಂದ್ಯಗಳು ಕರೊನಾ ಅಬ್ಬರದ ನಡುವೆಯೇ ನಡೆದಿವೆ. ಅಲ್ಲಿ ಕೆಲವೊಂದು ಪಂದ್ಯಗಳೂ ಮರುನಿಗದಿಯಾಗಿವೆ. ಅದು 6 ತಿಂಗಳ ಕಾಲ ನಡೆಯುವ ಟೂರ್ನಿ. ಆದರೆ ಐಪಿಎಲ್ನಲ್ಲಿ ಆ ರೀತಿ ವೇಳಾಪಟ್ಟಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಯೋಬಬಲ್ನಲ್ಲಿ ಯಾವುದೇ ಪ್ರಕರಣಗಳು ಬರದಿದ್ದರೆ, ಈಗಲೂ ಐಪಿಎಲ್ ನಡೆಯುತ್ತಿತ್ತು. ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ಇರದಿದ್ದ ಕಾರಣ ಆಟಗಾರರಿಗೆ ಭೀತಿ ಇರಲಿಲ್ಲ. ಆದರೆ ಆಟಗಾರರಿಗೇ ಕರೊನಾ ಸೋಂಕು ಬಂದ ಬಳಿಕ ಟೂರ್ನಿಯನ್ನು ನಿಲ್ಲಿಸಲೇಬೇಕಾಯಿತು ಎಂದು ಹೇಳಿದ್ದಾರೆ.
ಈ ಮುನ್ನ ಡಿಸೆಂಬರ್-ಫೆಬ್ರವರಿಯಲ್ಲಿ ವಿಜಯ್ ಹಜಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಗಳು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಸರಣಿಗಳು ನಡೆದಾಗ ದೇಶದಲ್ಲಿ ಕರೊನಾ ಪ್ರಕರಣಗಳು ಸಾಕಷ್ಟು ಕಡಿಮೆ ಇದ್ದವು. ಹೀಗಾಗಿ ಆಗ ಬಯೋಬಬಲ್ನಲ್ಲಿ 760 ಆಟಗಾರರನ್ನು ಸೇರಿಸಿದ್ದರೂ ಯಾವುದೇ ತೊಂದರೆಯಾಗಲಿಲ್ಲ. ಆಗ ದೇಶದಲ್ಲಿ ದಿನಕ್ಕೆ 7 ಸಾವಿರ ಕರೊನಾ ಪ್ರಕರಣಗಳಷ್ಟೇ ಬರುತ್ತಿದ್ದವು. ಆದರೆ ಈಗ ಪ್ರತಿದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಗಂಗೂಲಿ ವಿವರಿಸಿದ್ದಾರೆ.