ವಿಶ್ವಕಪ್​ನಲ್ಲಿ 7ನೇ ಗೆಲುವಿನ ಬೇಟೆಗೆ ಸಜ್ಜಾದ ಟೀಮ್​ ಇಂಡಿಯಾ; ಇಂದು ವಾಂಖೆಡೆಯಲ್ಲಿ ಲಂಕಾ ಎದುರಾಳಿ

ind vs sl web
Published on

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ 12 ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ತಂಡಗಳಾದ ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಈ ಬಾರಿ ಲೀಗ್​ ಹಂತದಲ್ಲೇ ಅದೇ ತಾಣದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ಆದರೆ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಆಗಿನ ರೋಚಕ ಕಾದಾಟದ ನಿರೀಕ್ಷೆ ಇಲ್ಲ. ಸತತ 6 ಗೆಲುವಿನೊಂದಿಗೆ ಬೀಗುತ್ತಿರುವ ಭಾರತ ಹಾಟ್ ಫೇವರಿಟ್​ ತಂಡವಾಗಿ ಕಣಕ್ಕಿಳಿಯಲಿದ್ದರೆ, ಶ್ರೀಲಂಕಾ ತಂಡ ಆಗಿನಂತೆ ಈಗ ಬಲಿಷ್ಠವೆನಿಸಿಲ್ಲ. ಸೆಮೀಸ್​ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಲಂಕಾ ತಂಡ ಈ ಬಾರಿ ಹೆಚ್ಚಿನ ಒತ್ತಡ ಎದುರಿಸುತ್ತಿದೆ. ರೋಹಿತ್​ ಶರ್ಮ ಪಡೆ ವಾಂಖೆಡೆಯಲ್ಲಿ ಸತತ 7ನೇ ಗೆಲುವಿನೊಂದಿಗೆ ಸೆಮಿಫೈನಲ್​ ಪ್ರವೇಶವನ್ನು ಅಧಿಕೃತಗೊಳಿಸುವ ತವಕದಲ್ಲಿದೆ. ಲಂಕಾ ಗೆದ್ದರಷ್ಟೇ, ಉಳಿದಿರುವ ಅಲ್ಪಸ್ವಲ್ಪ ಸೆಮೀಸ್​ ಆಸೆಯನ್ನು ಜೀವಂತ ಉಳಿಸಿಕೊಳ್ಳಲಿದೆ.

ಚೆನ್ನೈನಲ್ಲಿ ಆಡಿದ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೆಲಿಯಾ ಎದುರು ಚೇಸಿಂಗ್​ ವೇಳೆ ಕೇವಲ 2 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ, ಅಲ್ಲಿಂದ ಪುಟಿದೆದ್ದು ಗೆದ್ದ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್​, ಇಂಗ್ಲೆಂಡ್​ ವಿರುದ್ಧದ ಪಂದ್ಯಗಳಲ್ಲಿ ಸರಾಗವಾಗಿ ಗೆಲುವು ಒಲಿಸಿಕೊಂಡಿದೆ. ಮೊದಲ 5 ಪಂದ್ಯಗಳಲ್ಲಿ ಚೇಸಿಂಗ್​ ಮೂಲಕ ಗೆದ್ದಿದ್ದ ಭಾರತ, 6ನೇ ಪಂದ್ಯದಲ್ಲಿ ಆಂಗ್ಲರೆದುರು ಸಾಧಾರಣ ಮೊತ್ತ ಪೇರಿಸಿದರೂ, ಅದನ್ನು ರಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ರೋಹಿತ್​ ಶರ್ಮ ಪಡೆ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಲು ಅರ್ಹವಾದ ಆಟವನ್ನೇ ಇದುವರೆಗೆ ಆಡುತ್ತ ಬಂದಿದೆ.

ಹಾರ್ದಿಕ್​ ಪಾಂಡ್ಯ ಗಾಯಗೊಂಡಿದ್ದು ಭಾರತ ತಂಡದ ಸಂಯೋಜನೆಗೆ ಹೊಡೆತ ನೀಡುವ ಭೀತಿ ಹುಟ್ಟಿಸಿದ್ದರೂ, ವೇಗಿ ಮೊಹಮದ್​ ಶಮಿ ಮಾರಕ ದಾಳಿ ಸಂಟಿಸುವ ಮತ್ತು ಸೂರ್ಯಕುಮಾರ್​ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಆಟವನ್ನೇ ಆಡುವ ಮೂಲಕ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಆಡುವ ಹನ್ನೊಂದರ ಬಳಗದಲ್ಲಿನ ಸಮತೋಲನ ಕಾಪಾಡಿಕೊಂಡ ಶ್ರೇಯ ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ಗೆ ಸಲ್ಲಬೇಕಾಗುತ್ತದೆ.

ಗಿಲ್​, ಶ್ರೇಯಸ್​ ಮೇಲೆ ಹೆಚ್ಚಿನ ನಿರೀಕ್ಷೆ

ಭಾರತ ತಂಡ ಟೂರ್ನಿಯಲ್ಲಿ ಬಲಿಷ್ಠ ಬ್ಯಾಟಿಂಗ್​ ನಿರ್ವಹಣೆ ತೋರುತ್ತಲೇ ಬಂದಿದೆ. ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಅಮೋಘ ಫಾರ್ಮ್​ನಲ್ಲಿದ್ದಾರೆ. ಈ ನಡುವೆ ಯುವ ಆರಂಭಿಕ ಶುಭಮಾನ್​ ಗಿಲ್​ ಮತ್ತು ಶ್ರೇಯಸ್​ ಅಯ್ಯರ್​ ಉತ್ತಮ ಆರಂಭ ಕಂಡರೂ, ಅದನ್ನು ದೊಡ್ಡ ಇನಿಂಗ್ಸ್​ ಆಗಿ ಬದಲಾಯಿಸುವಲ್ಲಿ ಸಫಲರಾಗುತ್ತಿಲ್ಲ. ಟೂರ್ನಿಗೆ ಮುನ್ನ ಭರ್ಜರಿ ಫಾರ್ಮ್​ನಲ್ಲಿದ್ದ ಗಿಲ್​ ಡೆಂಘೆ ಜ್ವರದಿಂದ ಚೇತರಿಸಿಕೊಂಡ ಹಳೆಯ ಲಯಕ್ಕೆ ಮರಳಲು ಪರದಾಡುತ್ತಿರುವಂತಿದೆ. ಶ್ರೇಯಸ್​ ಈ ಬಾರಿ ತವರು ಅಂಗಣದಲ್ಲಿ ಆಡುವ ಅನುಕೂಲ ಹೊಂದಿದ್ದಾರೆ. ಅದನ್ನು ಬಳಸಿಕೊಳ್ಳದಿದ್ದರೆ, ಪಾಂಡ್ಯ ಮರಳಿದಾಗ ಅವರೇ 11ರ ಬಳಗದಲ್ಲಿ ಸ್ಥಾನ ಬಿಟ್ಟುಕೊಡಬೇಕಾದೀತು.

ಪರದಾಡುತ್ತಿದೆ ಶ್ರೀಲಂಕಾ

ಗಾಯದಿಂದಾಗಿ ಕೆಲ ಪ್ರಮುಖ ಆಟಗಾರರ ಅಲಭ್ಯತೆ ಈಗಾಗಲೆ ಟೂರ್ನಿಯಲ್ಲಿ ಶ್ರೀಲಂಕಾಕ್ಕೆ ಭಾರಿ ಹೊಡೆತ ನೀಡಿದೆ. ಇದುವರೆಗೆ ಆಡಿದ 6 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 4ರಲ್ಲಿ ಸೋತಿರುವ ಲಂಕಾ, ಕಳೆದ ಪಂದ್ಯದಲ್ಲಿ ಅ್ಘಾನಿಸ್ತಾನ ವಿರುದ್ಧ ಸೋತಿರುವುದು ಇನ್ನಷ್ಟು ಹಿನ್ನಡೆ ತಂದಿದೆ. ಏಷ್ಯಾಕಪ್​ ಫೈನಲ್​ನಲ್ಲಿ ಭಾರತದ ದಾಳಿಗೆ ಅಲ್ಪಮೊತ್ತಕ್ಕೆ ಕುಸಿದು ಹೀನಾಯ ಸೋಲಿಗೆ ಶರಣಾಗಿದ್ದ ಲಂಕಾ, ಈ ಬಾರಿ ಚೇತೋಹಾರಿ ನಿರ್ವಹಣೆ ತೋರಿದರಷ್ಟೇ ಮಾನ ಉಳಿಸಿಕೊಳ್ಳಲಿದೆ. ಲಂಕಾ ಬ್ಯಾಟರ್​ಗಳ ನಿರ್ವಹಣೆ ಅಸ್ಥಿರವಾಗಿದ್ದರೆ, ಬೌಲರ್​ಗಳಿಗೆ ಅನನುಭವವೇ ದೊಡ್ಡ ಕೊರತೆಯಾಗಿದೆ.

ಟೀಮ್​ ನ್ಯೂಸ್​:

ಭಾರತ: ಹಾರ್ದಿಕ್​ ಪಾಂಡ್ಯ ಈ ಪಂದ್ಯಕ್ಕೂ ಅಲಭ್ಯರಾಗಿರುವುದರಿಂದ ಭಾರತದ ಆಡುವ 11ರ ಬಳಗದಲ್ಲಿ ಈ ಬಾರಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಸಿರಾಜ್​ ಲಯದಲ್ಲಿರದಿದ್ದರೂ, ಶಾರ್ದೂಲ್​ ಠಾಕೂರ್​ಗೆ ತವರಿನಲ್ಲಿ ಆಡುವ ಅವಕಾಶದ ಸಾಧ್ಯತೆ ಕಡಿಮೆ.

ಶ್ರೀಲಂಕಾ: ಸ್ಪಿನ್​ ವಿಭಾಗವನ್ನು ಬಲಪಡಿಸಲು ಮತ್ತು ಭಾರತದ ಬ್ಯಾಟರ್​ಗಳು ಎಡಗೈ ಸ್ಪಿನ್ನರ್​ಗಳೆದುರು ಹೊಂದಿರುವ ದೌರ್ಬಲ್ಯದ ಲಾಭ ಪಡೆಯಲು ಲಂಕಾ ಈ ಬಾರಿ ಧನಂಜಯ ಡಿಸಿಲ್ವ ಬದಲಿಗೆ ದಿನುತ್​ ವೆಲ್ಲಲಾಗೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಪಾಂಡ್ಯ ಇನ್ನೆರಡು ಪಂದ್ಯಕ್ಕಿಲ್ಲ?

ಎಡಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾ ಮತ್ತು ದಣ ಆಫ್ರಿಕಾ (ನ.5) ವಿರುದ್ಧದ ಪಂದ್ಯದಲ್ಲೂ ಆಡುವುದು ಅನುಮಾನವೆನಿಸಿದೆ. ನವೆಂಬರ್​ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ತಂಡದ ಕೊನೇ ಲೀಗ್​ ಪಂದ್ಯದಲ್ಲಿ ಅವರು ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಕ್ಟೋಬರ್​ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತನ್ನದೇ ಬೌಲಿಂಗ್​ನಲ್ಲಿ ಚೆಂಡನ್ನು ಕಾಲಿನಿಂದ ತಡೆಯುವ ಯತ್ನದಲ್ಲಿ ಪಾಂಡ್ಯ ಎಡಪಾದಕ್ಕೆ ನೋವು ಮಾಡಿಕೊಂಡಿದ್ದರು. ಈ ಮುನ್ನ ಕಿವೀಸ್​ ಮತ್ತು ಇಂಗ್ಲೆಂಡ್​ ವಿರುದ್ಧದ ಪಂದ್ಯಗಳನ್ನೂ ತಪ್ಪಿಸಿಕೊಂಡಿದ್ದರು. "ಪಾಂಡ್ಯ ಅಸ್ಥಿರಜ್ಜು ಸಣ್ಣ ಪ್ರಮಾಣದ ಅರಿದಿದೆ. ಬೆಂಗಳೂರಿನ ಎನ್​ಸಿಎಯಲ್ಲಿ ಅವರು ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಸೆಮೀಸ್​ಗೆ ಪೂರ್ವಭಾವಿಯಾಗಿ ಕೊನೇ ಲೀಗ್​ ಪಂದ್ಯದಲ್ಲಿ ಮತ್ತೆ ಆಡಬಹುದು ಅಥವಾ ನೇರವಾಗಿ ಸೆಮೀಸ್​ನಲ್ಲೇ ಮರಳಿ ಕಣಕ್ಕಿಳಿಯಬಹುದು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಏಕದಿನ ಮುಖಾಮುಖಿ: 167

ಭಾರತ: 98, ಶ್ರೀಲಂಕಾ: 57, ಟೈ: 1, ರದ್ದು: 11

ವಿಶ್ವಕಪ್​ ಮುಖಾಮುಖಿ: 9

ಭಾರತ: 4, ಶ್ರೀಲಂಕಾ: 4, ರದ್ದು: 1

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ.

*308: ಭಾರತ ಈ ಪಂದ್ಯದಲ್ಲಿ ಗೆದ್ದರೆ, ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ಪರ ಗರಿಷ್ಠ ಗೆಲುವು ಕಂಡ ಆಟಗಾರ ಎನಿಸಲಿದ್ದಾರೆ. ಸದ್ಯ ಸಚಿನ್​ ತೆಂಡುಲ್ಕರ್​ (307) ಜತೆ ಕೊಹ್ಲಿ ಸಮಬಲದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net