ಮಯಾಂಕ್ ಅಗರ್ವಾಲ್ ಪ್ರಮುಖ ಪಂದ್ಯದಿಂದ ಹೊರಗುಳಿಯಲು ಕಾರಣವೇನು ಗೊತ್ತೇ?

mayank-agarwa web
Published on

ದುಬೈ: ಸನ್‌ರೈಸರ್ಸ್‌ ವಿರುದ್ಧದ ಶನಿವಾರದ ಪ್ರಮುಖ ಪಂದ್ಯಕ್ಕೆ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ಕಾಣಿಸಿತು. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಪಂದ್ಯದಿಂದ ಹೊರಗುಳಿದಿದ್ದು ಅಚ್ಚರಿ ಹುಟ್ಟಿಸಿತು. ಅದರ ಹಿಂದಿನ ಕಾರಣ ಇಲ್ಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಯಾಂಕ್ ಅಗರ್ವಾಲ್ ವಿಕೆಟ್ ನಡುವಿನ ಓಟದ ವೇಳೆ ನಿಕೋಲಸ್ ಪೂರನ್ ಜತೆಗಿನ ಗೊಂದಲದಿಂದಾಗಿ ರನೌಟ್ ಬಲೆಗೆ ಬಿದ್ದಿದ್ದರು. ಈ ವೇಳೆ ಅವರ ಕಾಲಿಗೆ ಗಾಯವಾಗಿತ್ತು. ಆಗ ಅವರು ಕುಂಟುತ್ತಲೇ ತಂಡದ ಡ್ರೆಸ್ಸಿಂಗ್ ರೂಂ ಕಡೆಗೆ ಹೆಜ್ಜೆ ಹಾಕಿದ್ದರು. ಆ ಗಾಯದಿಂದ ಮಯಾಂಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿಯಬೇಕಾಯಿತು. ಆಡುವ ಬಳಗದಲ್ಲಿ ಅವರ ಸ್ಥಾನವನ್ನು ಮಂದೀಪ್ ಸಿಂಗ್ ತುಂಬಿದರು.

ಮಯಾಂಕ್ ಅಗರ್ವಾಲ್ ಅವರ ಈ ಗಾಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮಾತ್ರವಲ್ಲ, ಭಾರತ ತಂಡಕ್ಕೂ ತಲೆನೋವಾಗಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಮಯಾಂಕ್ ಅಗರ್ವಾಲ್ ಅವರ ಈ ಗಾಯ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಇವರಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಕೂಡ ಟೂರ್ನಿಯಲ್ಲಿ ಗಾಯಗೊಂಡಿದ್ದು, ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇನ್ನು ವೇಗಿಗಳಾದ ಇಶಾಂತ್ ಶರ್ಮ ಮತ್ತು ಭುವನೇಶ್ವರ್ ಕುಮಾರ್ ಈಗಾಗಲೆ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದು, ಆಸೀಸ್ ಪ್ರವಾಸಕ್ಕೂ ಅನುಮಾನವೆನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net