2008ರ ಕಿರಿಯರ ವಿಶ್ವಕಪ್ ಗೆಲುವಿನ ರೂವಾರಿ 30ನೇ ವಯಸ್ಸಿನಲ್ಲೇ ನಿವೃತ್ತಿ!

tanmay web
Published on

ಮುಂಬೈ: ಭಾರತದ 19 ವಯೋಮಿತಿ ತಂಡ 2008ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಈಗ ಟೀಮ್ ಇಂಡಿಯಾಗೂ ನಾಯಕರಾಗಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಆಗಿಯೂ ವಿಶ್ವ ಕ್ರಿಕೆಟ್‌ನಲ್ಲಿ ಮೆರೆದಾಡುತ್ತಿದ್ದಾರೆ. ಮತ್ತೊಂದೆಡೆ ಅಂದಿನ ಕಿರಿಯರ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಸಿಡಿಸಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದ ತನ್ಮಯ್ ಶ್ರೀವಾಸ್ತವ ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದೀಗ ತನ್ಮಯ್ ಶ್ರೀವಾಸ್ತವ 30ನೇ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ತನ್ಮಯ್ ಶ್ರೀವಾಸ್ತವ ಮಲೇಷ್ಯಾದಲ್ಲಿ ನಡೆದ ಕಿರಿಯರ ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 52.40ರ ಸರಾಸರಿಯಲ್ಲಿ 262 ರನ್ ಸಿಡಿಸಿ ಮಿಂಚಿದ್ದರು. ಕೌಲಾಲಂಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲೂ 46 ರನ್ ಸಿಡಿಸಿದ್ದರು. ಇದು ಆ ಪಂದ್ಯದಲ್ಲಿ ಉಭಯ ತಂಡಗಳ ಪೈಕಿ ಬ್ಯಾಟ್ಸ್‌ಮನ್ ಓರ್ವ ಗಳಿಸಿದ ಗರಿಷ್ಠ ರನ್ ಆಗಿತ್ತು.

ಕಿರಿಯರ ವಿಶ್ವಕಪ್ ಯಶಸ್ಸಿನ ಬಳಿಕ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದ ತನ್ಮಯ್ ಶ್ರೀವಾಸ್ತವ, 2008-09ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತರ ಪ್ರದೇಶ ತಂಡದ ಪರ ಸರ್ವಾಧಿಕ ರನ್ ಸ್ಕೋರರ್ ಎನಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿರಲಿಲ್ಲ. ಕನಿಷ್ಠ ಭಾರತ ತಂಡದ ಕದ ತಟ್ಟುವ ಸನಿಹಕ್ಕೂ ಅವರ ಬರಲಿಲ್ಲ.

ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿದ್ದ ಅವರು, ಕ್ರಿಕೆಟ್‌ನಿಂದ ಸಂಪೂರ್ಣ ದೂರವಾಗುವ ಬಗ್ಗೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ‘ಇದು ನನ್ನ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವ ಸಮಯ. ನಾನು ಹಲವು ಸ್ಮರಣೀಯ ಕ್ಷಣಗಳನ್ನು ಕಂಡಿದ್ದೇನೆ, ಗೆಳೆಯರನ್ನು ಸಂಪಾದಿಸಿದ್ದೇನೆ. ಜೂನಿಯರ್ ಕ್ರಿಕೆಟ್, ರಣಜಿ ಟ್ರೋಫಿ ಮತ್ತು 19 ವಯೋಮಿತಿ ವಿಶ್ವಕಪ್‌ನಲ್ಲಿ ನನ್ನ ಶ್ರೇಷ್ಠ ನಿರ್ವಹಣೆಯನ್ನೇ ತೋರಿದ್ದೇನೆ. ನಾನು ನನ್ನ ಬಾಕಿ ಉಳಿದ ಜೀವನಕ್ಕೆ ಸಾಕಾಗುವಷ್ಟು ಸ್ಮರಣೀಯ ಕ್ರಿಕೆಟ್ ನೆನಪುಗಳನ್ನು ಪಡೆದಿದ್ದೇನೆ. ನಾನಿನ್ನೂ ಆಡಬಹುದಿತ್ತು ಎಂದು ಈಗಲೂ ಹೇಳುವವರಿಗೆ ಏನನ್ನಲಿ... ನಾನು ಹೊಸ ಕನಸುಗಳನ್ನು ಹೊಂದಿದ್ದೇನೆ. ದೊಡ್ಡ ಬಯಕೆಗಳಿವೆ. ಈಗ ಆ ಬಗ್ಗೆ ಕೆಲಸ ಮಾಡುವ ಸಮಯವಾಗಿದೆ. ಇದೀಗ ನನ್ನ ಜೀವನದ ಮುಂದಿನ ಅಧ್ಯಾಯದ ಸಮಯ ಬಂದಿದೆ’ ಎಂದು ಕಾನ್ಪುರ ಮೂಲದ ಶ್ರೀವಾಸ್ತವ ಟ್ವೀಟಿಸಿದ್ದಾರೆ.

ಅವರು 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 10 ಶತಕ ಮತ್ತು 27 ಅರ್ಧಶತಕ ಒಳಗೊಂಡ 4,918 ರನ್ ಬಾರಿಸಿದ್ದಾರೆ. ತಮ್ಮ ಮುಂದಿನ ಯೋಜನೆಗಳು ಏನು ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net