ವಿಶ್ವಕಪ್​ ಫೈನಲ್​ನಲ್ಲಿ ಭಾರತ ಎಡವಿದ್ದೆಲ್ಲಿ? ಇದು ಕೆಟ್ಟ ದಿನವೇ, ಕೆಟ್ಟ ತಂಡವೇ?

ind vs aus web
Published on

ಬೆಂಗಳೂರು: "ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತಾಗಿದೆ ಈಗ ಟೀಮ್​ ಇಂಡಿಯಾದ ಪರಿಸ್ಥಿತಿ. 46 ದಿನಗಳ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ 45 ದಿನವೂ ಆತಿಥೇಯ ಭಾರತದ್ದೇ ಆರ್ಭಟ, ಚಾಂಪಿಯನ್​ ಆಟ, ಸತತ 10 ಗೆಲುವಿನ ಓಟ. ಆದರೆ ಫೈನಲ್​ ಪಂದ್ಯದ 46ನೇ ದಿನ ಮಾಡಿದ ಕೆಲ ಎಡವಟ್ಟುಗಳಿಂದ ಅಷ್ಟೂ ಶ್ರಮ ವ್ಯರ್ಥಗೊಂಡಿತು. ಟ್ರೋಫಿ ಹತ್ತಿರ ಬಂದು ನಿಂತರೂ ಅದನ್ನು ಎತ್ತಿಹಿಡಿಯುವ ಭಾಗ್ಯ ಒಲಿಯಲಿಲ್ಲ. ಹಾಗಾದರೆ ಸತತ 10 ಗೆಲುವಿನ ವೇಳೆ ಭಾರತ ತಂಡದಲ್ಲಿ ಎಲ್ಲವೂ ಸರಿಯಾಗಿದ್ದರೂ, ಕೊನೇ ಒಂದು ಪಂದ್ಯದಲ್ಲಿ ಮಾಡಿದ ಎಡವಟ್ಟುಗಳ ಮೆಲುಕು ಇಲ್ಲಿದೆ...

ಬೌಂಡರಿಗಾಗಿ ಪರದಾಟ
ಫೈನಲ್​ಗೆ ಮುನ್ನ ಆಡಿದ ಸೆಮೀಸ್​ ಸಹಿತ 4 ಪಂದ್ಯಗಳಲ್ಲಿ ಭಾರತ 300 ಪ್ಲಸ್​ ಮೊತ್ತ ಪೇರಿಸಿತ್ತು. ಅದರಲ್ಲೂ 3ರಲ್ಲಿ 350 ಪ್ಲಸ್​ ಮೊತ್ತ. ಆದರೆ ಫೈನಲ್​ನಲ್ಲಿ ಮೊದಲ 10 ಓವರ್​ಗಳ ಬಳಿಕ ಭಾರತ ರನ್​ಗಾಗಿ ಪರದಾಟಿತು. ನಂತರದ 40 ಓವರ್​ಗಳಲ್ಲಿ ದಾಖಲಾಗಿದ್ದು ಕೇವಲ 4 ಬೌಂಡರಿ! 107 ಎಸೆತ ಆಡಿದ ಕೆಎಲ್​ ರಾಹುಲ್​ ಸಿಡಿಸಿದ್ದು ಕೇವಲ 1 ಬೌಂಡರಿ. ಮಧ್ಯಮ ಓವರ್​ಗಳಲ್ಲಿ ಬೌಂಡರಿ ಸಿಡಿಸುವ ಪ್ರಯತ್ನಗಳೂ ಕಂಡು ಬರಲಿಲ್ಲ ಎಂಬುದು ಇನ್ನಷ್ಟು ಬೇಸರದ ಅಂಶ. ಹೀಗಾಗಿ 50 ಓವರ್​ ಪೂರ್ತಿ ಆಡಿಯೂ ಭಾರತಕ್ಕೆ 300ರ ಸನಿಹ ತಲುಪಲಾಗಲಿಲ್ಲ.

ಕೆಟ್ಟ ಶಾಟ್​ ಸೆಲೆಕ್ಷನ್​
ಬಿರುಸಿನ ಆರಂಭ ಒದಗಿಸಿದ್ದ ನಾಯಕ ರೋಹಿತ್​ ಶರ್ಮ ಇನ್ನೂ 10 ಓವರ್​ ಕ್ರೀಸ್​ನಲ್ಲಿದ್ದರೆ ಪಂದ್ಯ ಭಾರತದ ನಿಯಂತ್ರಣದಲ್ಲಿರುತ್ತಿತ್ತು. ಕೊಹ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದ್ದರೆ ಕಾಂಗರೂಗಳು ಕುಗ್ಗಿಹೋಗುತ್ತಿದ್ದರು. ನಿಧಾನಗತಿಯಲ್ಲಿ ಆಡಿ ಕ್ರೀಸ್​ಗೆ ಅಂಟಿಕೊಂಡಿದ್ದ ಕೆಎಲ್​ ರಾಹುಲ್​ ಸ್ಲಾಗ್​ ಓವರ್​ಗಳಲ್ಲಾದರೂ ಸ್ಟ್ರೆ$ಕ್​ ಸುಧಾರಿಸಿದ್ದರೆ 300ರ ಸನಿಹ ಸರಾಗವಾಗಿ ತಲುಪಬಹುದಿತ್ತು. ಆದರೆ ಇವರೆಲ್ಲರ ಕೆಟ್ಟ ಹೊಡೆತಗಳ ಆಯ್ಕೆಯಿಂದಾಗಿ ಭಾರತ ಭಾರಿ ದಂಡ ತೆರಬೇಕಾಯಿತು. ಶುಭಮಾನ್​ ಗಿಲ್​, ಶ್ರೇಯಸ್​ ಅಯ್ಯರ್​ ಆಟವೂ ನಿರಾಶಾದಾಯಕವಾಗಿತ್ತು.

ಉಲ್ಟಾ ಹೊಡೆದ ಸ್ಲೋ ಪಿಚ್​
ಆಸೀಸ್​ ವಿರುದ್ಧದ ಚೆನ್ನೆ$ನಲ್ಲಿ ಆಡಿದ ಆರಂಭಿಕ ಪಂದ್ಯದಿಂದ ಭಾರತ ಆಡಿದ ಎಲ್ಲ ಪಿಚ್​ಗಳು ಅನುಕೂಲಕರವಾಗಿಯೇ ಇದ್ದವು. ತಂಡಕ್ಕೆ ಬೇಕಾದಂಥ ಪಿಚ್​ನಲ್ಲಿ ಆಡಲು ಐಸಿಸಿಯಿಂದ ಅನುಮತಿ ಪಡೆದುಕೊಳ್ಳುವಲ್ಲಿ ಬಿಸಿಸಿಐ ಯಶಸ್ವಿಯಾದಂತಿತ್ತು. ಆದರೆ ಫೈನಲ್​ನಲ್ಲಿ ನಿಧಾನಗತಿಯ ಪಿಚ್​ ಆಯ್ದುಕೊಂಡ ಭಾರತದ ನಿರ್ಧಾರ ಉಲ್ಟಾ ಹೊಡೆಯಿತು. ಟಾಸ್​ ಸೋಲು ಇದಕ್ಕೆ ಪ್ರಮುಖ ಕಾರಣವಾಯಿತು. ಅತ್ತ ಆಸೀಸ್​ ಇಂಥ ಪಿಚ್​ಗೆ ಬೇಕಾದಂಥ ಬೌಲಿಂಗ್​ ಕಾರ್ಯತಂತ್ರವನ್ನೇ ಅಳವಡಿಸಿಕೊಂಡು ಯಶ ಸಾಧಿಸಿದರೆ, ಭಾರತೀಯ ಸ್ಪಿನ್ನರ್​ಗಳು ರಾತ್ರಿಯ ವೇಳೆ ಇಬ್ಬನಿ ಸಮಸ್ಯೆಯ ನಡುವೆ ವಿಕೆಟ್​ ಬೇಟೆಯಾಡಲು ವಿಫಲರಾದರು.

ಕೈಕೊಟ್ಟ ಬೌಲಿಂಗ್​ ತಂತ್ರ
ಭಾರತ ತಂಡ ಟೂರ್ನಿಯುದ್ದಕ್ಕೂ ಮೊಹಮದ್​ ಸಿರಾಜ್​ ಕೈಗೆ ಹೊಸ ಚೆಂಡು ನೀಡಿತ್ತು. ಆದರೆ ಫೈನಲ್​ನಲ್ಲಿ ವಿಕೆಟ್​ಗಾಗಿ ಅವಸರಪಟ್ಟ ನಾಯಕ ರೋಹಿತ್​ ಶರ್ಮ, ಮೊಹಮದ್​ ಶಮಿ ಕೈಗೆ ಹೊಸ ಚೆಂಡು ನೀಡಿದರು. ಇದರಿಂದ ಶಮಿ ಅವರೇನೋ ಆರಂಭಿಕ ಯಶ ಕಂಡರೂ, ಸ್ಪಿನ್ನರ್​ಗಳಿಗೂ ನಂತರದಲ್ಲಿ ದಾಳಿಗಿಳಿದ ಸಿರಾಜ್​ ಪರಿಣಾಮಕಾರಿ ಎನಿಸಲಿಲ್ಲ. ಹೊಸ ಚೆಂಡಿನಲ್ಲೇ ಸಿರಾಜ್​, ಹೆಡ್​ ವಿಕೆಟ್​ ಉರುಳಿಸಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತಿತ್ತು.

ಹಾರ್ದಿಕ್​ ಪಾಂಡ್ಯ ಇಂಜುರಿ
ಶಮಿ ಪ್ರಚಂಡ ಬೌಲಿಂಗ್​ ನೋಡಿದಾಗ ಹಾರ್ದಿಕ್​ ಪಾಂಡ್ಯ ಗಾಯಗೊಂಡಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದರೆ ಶಮಿಗೆ 11ರ ಬಳಗದಲ್ಲಿ ಸ್ಥಾನ ಲಭಿಸುತ್ತಿರಲಿಲ್ಲ ಎನಿಸಿದರೂ ಇದು ಅರ್ಧ ಸತ್ಯ ಮಾತ್ರ. ಯಾಕೆಂದರೆ ಪಾಂಡ್ಯ ಗೈರಿನಲ್ಲಿ 6ನೇ ಬೌಲರ್​ ಕೊರತೆಯೂ ಭಾರತವನ್ನು ಅಷ್ಟೇ ಕಾಡಿದೆ. ಆದರೆ ಅದು ಗೊತ್ತಾಗಿದ್ದು ಫೈನಲ್​ನಲ್ಲಿ ಮಾತ್ರ! ಟ್ರಾವಿಸ್​ ಹೆಡ್​&ಮಾರ್ನಸ್​ ಲಬುಶೇನ್​ ಜತೆಯಾಟವನ್ನು ಬೇರ್ಪಡಿಸಲು ಐದೂ ಬೌಲರ್​ಗಳು ವಿಲರಾದಾಗ ಪಾಂಡ್ಯ ಹೆಚ್ಚು ನೆನಪಾದರು. ತಂಡದ ಕೆಲ ಅರೆಕಾಲಿಕ ಬೌಲರ್​ಗಳು ನೆದರ್ಲೆಂಡ್​ ವಿರುದ್ಧವೇ ಚಚ್ಚಿಸಿಕೊಂಡಿದ್ದರಿಂದ ಆಸೀಸ್​ ವಿರುದ್ಧ ಕಣಕ್ಕಿಳಿಸುವಂತಿರಲಿಲ್ಲ.

ಆಸೀಸ್​ ಯಶಸ್ವಿ ಕಾರ್ಯತಂತ್ರ!
ಆರಂಭಿಕ 2 ಪಂದ್ಯಗಳ ಸೋಲಿನಿಂದಾಗಿ ಆಸೀಸ್​ ಟೂರ್ನಿ ಆರಂಭಗೊಂಡ 10 ದಿನಗಳ ಬಳಿಕ ಅಂದರೆ ಅಕ್ಟೋಬರ್​ 15ರಂದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಒಂದು ತಿಂಗಳ ಬಳಿಕ ಅದೇ ತಂಡ 6ನೇ ಬಾರಿ ವಿಶ್ವಕಪ್​ ಎತ್ತಿ ಹಿಡಿದಿದ್ದು ನಿಜಕ್ಕೂ ಸೋಜಿಗ. ಆಸೀಸ್​ ತಂಡ ಅನುಸರಿಸಿದ ಕೆಲ ವಿಶೇಷ ಕಾರ್ಯತಂತ್ರಗಳು ಇದಕ್ಕೆ ಪ್ರಮುಖ ಕಾರಣವೆನಿಸಿದವು. ಫೈನಲ್​ ಹೀರೋ ಟ್ರಾವಿಸ್​ ಹೆಡ್​ ವಿಶ್ವಕಪ್​ಗೆ ಮುನ್ನ ಗಾಯಗೊಂಡು ಅರ್ಧ ಟೂರ್ನಿಗೆ ಲಭ್ಯರಾಗುವುದಿಲ್ಲ ಎಂದು ಗೊತ್ತಿದ್ದರೂ, ಬದಲಿ ಆಟಗಾರರನ್ನು ಹೆಸರಿಸದೆ ಅವರನ್ನೇ ತಂಡದಲ್ಲಿ ಉಳಿಸಿಕೊಂಡಿತು. ಆಲ್ರೌಂಡರ್​ಗಳಾದ ಮಾರ್ಕಸ್​ ಸ್ಟೋಯಿನಸ್​, ಕ್ಯಾಮರಾನ್​ ಗ್ರೀನ್​ ಬ್ಯಾಟಿಂಗ್​&ಬೌಲಿಂಗ್​ನಲ್ಲಿ ವಿಫಲರಾದಾಗ ಪೂರ್ಣ ಪ್ರಮಾಣದ ಬ್ಯಾಟರ್​ ಮಾರ್ನಸ್​ ಲಬುಶೇನ್​ರನ್ನು ನೆಚ್ಚಿಕೊಂಡಿತು. ಫೈನಲ್​ನಲ್ಲಿ ಅದ್ಬುತ ಫೀಲ್ಡಿಂಗ್​ನಿಂದಾಗಿ ಭಾರತಕ್ಕೆ ಬೌಂಡರಿ ಬಿಡದೆ ಸತಾಯಿಸಿತು. ಟ್ರಾವಿಸ್​ ಹೆಡ್​ ಹಿಡಿದ ರೋಹಿತ್​ ಶರ್ಮರ ಅದ್ಬುತ ಕ್ಯಾಚ್​, 1983ರ ಫೈನಲ್​ನಲ್ಲಿ ಕಪಿಲ್​ ದೇವ್​ ಹಿಡಿದ ವಿವ್​ ರಿಚರ್ಡ್ಸ್​ರ ಕ್ಯಾಚ್​ನಷ್ಟೇ ನಿರ್ಣಾಯಕವಾಯಿತು. ಇನ್ನು ಸ್ಲಾಗ್​ ಓವರ್​ಗಳಲ್ಲಿ ಅಬ್ಬರಿಸಬಹುದಾಗಿದ್ದ ಸೂರ್ಯಕುಮಾರ್​ರನ್ನು ನಿಧಾನಗತಿ ಎಸೆತಗಳಿಂದ ಕಾಡಿಸಿತು. ಇನಿಂಗ್ಸ್​ ಪೂರ್ತಿ ವೇಗಿಗಳು ಫುಲ್​ ಎಸೆತಗಳ ಹಾಕಲಿಲ್ಲ, ಸ್ಪಿನ್ನರ್​ಗಳೂ ಕ್ಷಿಪ್ರ ಎಸೆತ ಪ್ರಯೋಗಿಸಲಿಲ್ಲ.

ಎಲ್ಲರ ವಿರುದ್ಧವೂ ಜಯ
ಭಾರತ ಮತ್ತು ಆಸೀಸ್​ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳ ವಿರುದ್ಧವೂ ಗೆಲುವು ದಾಖಲಿಸಿದ್ದು ವಿಶೇಷ. ಆದರೆ ಭಾರತ ಲೀಗ್​ ಹಂತದಲ್ಲಿ ಎಲ್ಲ 9 ತಂಡಗಳ ವಿರುದ್ಧ ಗೆದ್ದಿದ್ದರೆ, ಲೀಗ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧ ಸೋತಿದ್ದ ಆಸೀಸ್​ ಕ್ರಮವಾಗಿ ಸೆಮೀಸ್​ ಮತ್ತು ಫೈನಲ್​ನಲ್ಲಿ ಇವೆರಡು ತಂಡಗಳ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವ ಜತೆಗೆ ಚಾಂಪಿಯನ್​ ಪಟ್ಟವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net