

RCB vs CSK: ಇಂದು (ಮೇ.03) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರಿಯರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಕುತೂಹಲ, ಕೌತುಕಕ್ಕೆ ಇದೀಗ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದ್ದು, ಪಂದ್ಯ ಡ್ರಾ ಆಗುವ ಮುನ್ಸೂಚನೆ ಲಭಿಸಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ 14 ಪಾಯಿಂಟ್ನಿಂದ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಮೊದಲು ಸಿಎಸ್ಕೆ ತಂಡವನ್ನು ಅವರ ತವರಿನಲ್ಲೇ ಹೀನಾಯವಾಗಿ ಮಣಿಸಿದೆ. ಚೆಪಾಕ್ ಅಂಗಳದಲ್ಲೇ 50 ರನ್ಗಳ ಅಂತರದಲ್ಲಿ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟು ಮಾಡಿದ್ದ ಆರ್ಸಿಬಿ, ಇದೀಗ ತಮ್ಮ ತವರಿನಲ್ಲಿ ಎರಡನೇ ಬಾರಿಗೆ ಸೋಲಿಸಲು ಎದುರುನೋಡುತ್ತಿದೆ. ಆದರೆ, ಇದಕ್ಕೆ ವರುಣನ ಅಡ್ಡಿ ಎದುರಾಗಿದೆ.
ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಾಲ್ಕು ದಿನಗಳು ಮಳೆ ಸುರಿಯಲಿದೆ ಎಂದು ತಿಳಿಸಿದೆ. ರಾಜಧಾನಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಲಿದೆ ಎಂದು ಸೂಚಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯ ನಂತರ ವರುಣನ ಆರ್ಭಟ ಜೋರಾಗಲಿದೆ ಎನ್ನಲಾಗಿದೆ. ಸದ್ಯ ಈ ಸಂಗತಿ ಆರ್ಸಿಬಿ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ. ಈಗಾಗಲೇ ಪ್ಲೇಆಫ್ ರೇಸ್ನಿಂದ ಕಿಕ್ಔಟ್ ಆಗಿರುವ ಸಿಎಸ್ಕೆ, ಮುಂದಿನ ಪಂದ್ಯಗಳು ಗೆದ್ದರೂ ಪ್ರಯೋಜನವಿಲ್ಲ. ಈ ವಿಷಯ ಸಿಎಸ್ಕೆ ಫ್ಯಾನ್ಸ್ಗಳಿಗೆ ತುಂಬಲಾರದ ನಷ್ಟ ಎನ್ನುವಂತಾಗಿದೆ,(ಏಜೆನ್ಸೀಸ್).