

ಬೆಂಗಳೂರು: ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ಆರ್ಸಿಬಿ ತಂಡದ ನಾಯಕನ ಹೆಸರು ಗುರುವಾರ ಬೆಳಗ್ಗೆ 11.30ಕ್ಕೆ ಘೋಷಣೆಯಾಗಲಿದೆ. ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿ ನಾಯಕರಾಗುವರು ಎನ್ನಲಾಗುತ್ತಿದೆ. ಜತೆಗೆ ರಜತ್ ಪಾಟೀದಾರ್ ಹೆಸರೂ ನಾಯಕನ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಕೊಹ್ಲಿ ಈ ಮುನ್ನ 2013ರಿಂದ 2021ರವರೆಗೆ ಆರ್ಸಿಬಿ ನಾಯಕರಾಗಿದ್ದರು.
ಕೋಚ್ ಆಂಡಿ ಫ್ಲವರ್ ಮತ್ತು ಕ್ರಿಕೆಟ್ ನಿರ್ದೇಶಕ ಮೋ ಬೋಬಟ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೊಸ ನಾಯಕನ ಹೆಸರು ಪ್ರಕಟಿಸಲಿದ್ದಾರೆ.
ಕಳೆದ 3 ವರ್ಷಗಳಿಂದ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಈ ಬಾರಿ ತಂಡದಲ್ಲಿ ರಿಟೇನ್ ಆಗಿರಲಿಲ್ಲ. ಅಲ್ಲದೆ ಕಳೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು. ಹೀಗಾಗಿ ಆರ್ಸಿಬಿ ಈ ಬಾರಿ ಹೊಸ ನಾಯಕನನ್ನು ನೇಮಿಸುವುದು ಅನಿವಾರ್ಯವಾಗಿದೆ.
ವಿರಾಟ್ ಕೊಹ್ಲಿ ಈ ಹಿಂದೆ 143 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೆ ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡದ ನಿರಾಸೆಯಲ್ಲಿ ಅವರು ನಾಯಕತ್ವ ತ್ಯಜಿಸಿದ್ದರು. ಅಲ್ಲದೆ 2021ರಲ್ಲಿ ಕೊಹ್ಲಿ ಬ್ಯಾಟಿಂಗ್ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿಯೂ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಸದ್ಯ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ ಹೆಚ್ಚಿನ ಒತ್ತಡವಿಲ್ಲದೆ ಆರ್ಸಿಬಿ ನಾಯಕತ್ವವನ್ನು ಮರಳಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಮಧ್ಯಪ್ರದೇಶದ 31 ವರ್ಷದ ರಜತ್ ಪಾಟೀದಾರ್ ಇತ್ತೀಚೆಗೆ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ತಂಡದ ನಾಯಕರಾಗಿ ಫೈನಲ್ಗೇರಿಸಿದ್ದರು. ಅಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚಿ 428 ರನ್ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಈ ನಾಯಕತ್ವ ಅನುಭವದ ಹಿನ್ನೆಲೆಯಲ್ಲಿ ರಜತ್ ಪಾಟೀದಾರ್ ಕೂಡ ಈಗ ಆರ್ಸಿಬಿ ನಾಯಕತ್ವದ ರೇಸ್ನಲ್ಲಿದ್ದಾರೆ.