

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಈಡನ್ ಗಾರ್ಡನ್ಸ್ ಮತ್ತು ಚೆಪಾಕ್ನಲ್ಲಿ ಆಡಿದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು 5 ಬಾರಿಯ ಚಾಂಪಿಯನ್ ಸಿಎಸ್ಕೆ ತಂಡಗಳಿಗೆ ಸೋಲುಣಿಸಿ ಐಪಿಎಲ್ 18ನೇ ಆವೃತ್ತಿಯಲ್ಲಿ ಭರ್ಜರಿ ಆರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಹಾಲಿ ಆವೃತ್ತಿಯ ಮೊದಲ ಕಾದಾಟದಲ್ಲಿ ಗುಜರಾತ್ ಟೈಟಾನ್ಸ್ ಸವಾಲು ಎದುರಿಸಲಿರುವ ರಜತ್ ಪಾಟೀದಾರ್ ಪಡೆ, ಹ್ಯಾಟ್ರಿಕ್ ಗೆಲುವಿನೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಂಬಲದಲ್ಲಿದೆ.
17 ವರ್ಷಗಳ ಪ್ರಶಸ್ತಿ ಬರ ನೀಗಿಸುವ ನಿಟ್ಟಿನಲ್ಲಿ ಆರ್ಸಿಬಿ ಈ ಬಾರಿ ಚೇತೋಹಾರಿ ಆರಂಭವನ್ನೇ ಕಂಡಿದ್ದು, ಇದೇ ಲಯದಲ್ಲಿ ಮುಂದುವರಿದರೆ ಅಭಿಮಾನಿಗಳ ಕಪ್ ಗೆಲುವಿನ ಕನಸು ನನಸಾಗಿಸುವುದು ಕಷ್ಟವಲ್ಲ. ತವರು ಅಭಿಮಾನಿಗಳ ಎದುರು ಆರ್ಸಿಬಿ ತಂಡದಿಂದ ಇನ್ನಷ್ಟು ಬಲಿಷ್ಠ ನಿರ್ವಹಣೆಯ ನಿರೀಕ್ಷೆ ಇಡಲಾಗಿದೆ.
ಮತ್ತೊಂದೆಡೆ ಗುಜರಾತ್ ತಂಡ ರನ್ಪ್ರವಾಹ ಹರಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 11 ರನ್ಗಳಿಂದ ಸೋಲು ಕಂಡಿದ್ದರೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 36 ರನ್ಗಳಿಂದ ಗೆದ್ದು ಖಾತೆ ತೆರದಿದೆ. ಆರಂಭಿಕ 2 ಪಂದ್ಯಗಳನ್ನು ತವರಿನಲ್ಲೇ ಆಡಿದ್ದ ಗುಜರಾತ್, ಇದೀಗ ಎದುರಾಳಿಯ ನೆಲದಲ್ಲಿ ಮೊದಲ ಸವಾಲು ಎದುರಿಸಲಿದೆ.
ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ನಾಯಕ ರಜತ್ ಪಾಟೀದಾರ್ ಮತ್ತು ದೇವದತ್ ಪಡಿಕ್ಕಲ್ ಒಳಗೊಂಡ ಆರ್ಸಿಬಿ ಅಗ್ರ ಕ್ರಮಾಂಕ ಈಗಾಗಲೆ ಆರಂಭಿಕ 2 ಪಂದ್ಯಗಳಲ್ಲಿ ಬಲಿಷ್ಠ ನಿರ್ವಹಣೆ ತೋರಿದೆ. ಅತ್ತ ಗುಜರಾತ್ ಕೂಡ ಜೋಸ್ ಬಟ್ಲರ್, ನಾಯಕ ಶುಭಮಾನ್ ಗಿಲ್, ಸಾಯಿ ಸುದರ್ಶನ್ ಅವರಿಂದ ಉತ್ತಮ ನಿರ್ವಹಣೆ ಕಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಪವರ್ಪ್ಲೇನಲ್ಲಿ ಸ್ಫೋಟಕ ಆಟವಾಡಿರುವ ಫಿಲ್ ಸಾಲ್ಟ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆ ಇದೆ. ದ. ಆಫ್ರಿಕಾದ ವೇಗಿ ಕಗಿಸೊ ರಬಾಡ, ಸ್ಪಿನ್ನರ್ಗಳಾದ ರಶೀದ್ ಖಾನ್ ಮತ್ತು ಸಾಯಿ ಕಿಶೋರ್ ಆರ್ಸಿಬಿ ಬ್ಯಾಟರ್ಗಳಿಗೆ ಸವಾಲೊಡ್ಡಲಿದ್ದಾರೆ.
ಬೌಲರ್ಗಳಿಗೆ ಸವಾಲು
ಕೋಲ್ಕತ ಮತ್ತು ಚೆನ್ನೈನಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿರುವ ಆರ್ಸಿಬಿ ತಂಡ ಅತ್ಯಂತ ಸಮತೋಲನದಲ್ಲಿ ಕಾಣಿಸಿದೆ. ಆದರೆ ತವರಿನ ಮೈದಾನದಲ್ಲಿ ಭಿನ್ನವಾದ ಸವಾಲು ಎದುರಾಗಲಿದೆ. ಐಪಿಎಲ್ನಲ್ಲಿ ದೊಡ್ಡ ಪ್ರಮಾಣದ ರನ್ಮಳೆಯನ್ನೇ ಕಂಡಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಬೌಲರ್ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ಕಿರು ಬೌಂಡರಿ ಮತ್ತು ವೇಗವಾದ ಔಟ್ಫೀಲ್ಡ್ ಹೊಂದಿರುವ ಸ್ಟೇಡಿಯಂನಲ್ಲಿ ಅನುಭವಿ ವೇಗಿಗಳಾದ ಜೋಶ್ ಹ್ಯಾಸಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ನಿರ್ವಹಣೆ ನಿರ್ಣಾಯಕ ಪಾತ್ರ ವಹಿಸಲಿದೆ. ಎಡಗೈ ವೇಗಿ ಯಶ್ ದಯಾಳ್ ಕಳೆದ ವರ್ಷದ ಅದ್ಭುತ ನಿರ್ವಹಣೆ ಮುಂದುವರಿಸಿದ್ದರೆ, ಸ್ಪಿನ್ನರ್ಗಳಾದ ಕೃನಾಲ್ ಪಾಂಡ್ಯ, ಸುಯಶ್ ಶರ್ಮ ಆರ್ಸಿಬಿ ಪರ ಚಿನ್ನಸ್ವಾಮಿಯಲ್ಲಿ ಮೊದಲ ಸವಾಲು ಎದುರಿಸಲಿದ್ದಾರೆ.
ಕೊಹ್ಲಿ-ಸಿರಾಜ್ ಮುಖಾಮುಖಿ ಕುತೂಹಲ
ಕಳೆದ 7 ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ಜತೆಯಾಗಿ ಆಡುತ್ತ "ಭಾಯ್'ಗಳಾಗಿದ್ದ ವಿರಾಟ್ ಕೊಹ್ಲಿ-ಮೊಹಮದ್ ಸಿರಾಜ್ ಈ ಬಾರಿ ದುಶ್ಮನ್ಗಳಾಗಿದ್ದಾರೆ! ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಪಾಲಾಗಿರುವ ಸಿರಾಜ್ ತನ್ನ ವೃತ್ತೀಜಿವನಕ್ಕೆ ಹೊಸ ತಿರುವು ಕೊಟ್ಟಿದ್ದ ಆರ್ಸಿಬಿ ಮತ್ತು ವಿರಾಟ್ ಕೊಹ್ಲಿ ಎದುರು ಈಗ ಕಣಕ್ಕಿಳಿಯಬೇಕಾಗಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕೊಹ್ಲಿ&ಸಿರಾಜ್ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಇಷ್ಟು ವರ್ಷ ಸಿರಾಜ್ ಎಸೆತದಲ್ಲಿ ವಿಕೆಟ್ ಬಿದ್ದಾಗ ಸಂಭ್ರಮಿಸುತ್ತಿದ್ದ ಪ್ರೇಕ್ಷಕರು ಈ ಬಾರಿ ಬೌಂಡರಿ&ಸಿಕ್ಸರ್ ಸಿಡಿದರೆ ಖುಷಿಪಡಬೇಕಿದೆ.
ಮುಖಾಮುಖಿ: 5
ಆರ್ಸಿಬಿ: 3
ಗುಜರಾತ್: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂ ಎಂದಿನಂತೆ ಈ ಸಲವೂ ಬ್ಯಾಟಿಂಗ್ ಸ್ನೇಹಿ ಆಗಿರಲಿದೆ. ಜತೆಗೆ ಈ ಬಾರಿ ವೇಗದ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುವ ನಿರೀೆ ಇದೆ. ಬೌನ್ಸ್ನಿಂದ ಕೂಡಿರುವ ಪಿಚ್ನಲ್ಲಿ ಪವರ್ಪ್ಲೇನಲ್ಲಿ ವೇಗಿಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ.
ಕನ್ನಡಿಗರ ಹಣಾಹಣಿ
ಆರ್ಸಿಬಿ ಆಡುವ 11ರ ಬಳಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟರ್ ದೇವದತ್ ಪಡಿಕ್ಕಲ್ ಸ್ಥಾನ ಸಂಪಾದಿಸಿರುವ ಏಕೈಕ ಕನ್ನಡಿಗರಾಗಿದ್ದರೆ, ಅತ್ತ ಗುಜರಾತ್ ಟೈಟಾನ್ಸ್ ತಂಡದಲ್ಲಿ ರಾಜ್ಯದ ವೇಗಿ ಪ್ರಸಿದ್ಧ ಕೃಷ್ಣ ಇದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಎದುರು 4 ಓವರ್ಗಳಲ್ಲಿ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದ ಪ್ರಸಿದ್ಧಕೃಷ್ಣ, ಈ ಬಾರಿ ತವರು ಅಂಗಣದಲ್ಲಿ ಇನ್ನಷ್ಟು ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.
ವಿಜಯ್ ಪ್ರಕಾಶ್ ಗಾಯನ
ಬೆಂಗಳೂರಿನಲ್ಲಿ ಹಾಲಿ ಆವೃತ್ತಿಯ ಮೊದಲ ಪಂದ್ಯಕ್ಕೆ ಮುನ್ನ ಕಿರು ಆರಂಭೋತ್ಸವ ನಡೆಯಲಿದ್ದು, ಕರ್ನಾಟಕದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6.30ರಿಂದ ಈ ಕಾರ್ಯಕ್ರಮ ನಡೆಯಲಿದೆ.
ತವರಿನಲ್ಲಿ ಶುಭಾರಂಭದ ತವಕ
ಆರ್ಸಿಬಿ ತಂಡ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಹೆಚ್ಚಿನ ಬಾರಿ ಗೆದ್ದು ಶುಭಾರಂಭ ಕಂಡ ದಾಖಲೆ ಹೊಂದಿದೆ. 2020&22ರವರೆಗೆ ಕರೊನಾ ಕಾರಣದಿಂದಾಗಿ ತವರಿನ ಪಂದ್ಯಗಳು ಮಿಸ್ ಆಗಿದ್ದರೆ, 2023, 2024ರಲ್ಲಿ ತವರಿನ ಮೊದಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇದಕ್ಕೆ ಮುನ್ನ 2008, 2011, 2015, 2019ರಲ್ಲಷ್ಟೇ ಆರ್ಸಿಬಿ ತವರಿನ ಮೊದಲ ಪಂದ್ಯದಲ್ಲಿ ಸೋತಿದೆ. ಒಟ್ಟಾರೆ 9 ಆವೃತ್ತಿಗಳಲ್ಲಿ ತವರಿನ ಮೊದಲ ಪಂದ್ಯದಲ್ಲಿ ಗೆದ್ದ ದಾಖಲೆ ಹೊಂದಿದೆ.