ಧೋನಿ ಆಗ ಮ್ಯಾಚ್​ ಫಿನಿಷರ್​, ಈಗ ಲೂಸರ್​! ಅಭಿಮಾನಿಗಳೇ ಟೀಕಾಕಾರರಾಗುತ್ತಿದ್ದಾರೆ!

web dhoni
Published on

ಗುವಾಹಟಿ: ಭಾರತ ಮಾತ್ರವಲ್ಲದೆ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದಲ್ಲೂ ಫಿನಿಷರ್​ ಪಾತ್ರದಲ್ಲಿ ಮಿಂಚಿದವರು ಎಂಎಸ್​ ಧೋನಿ. ಹೀಗಾಗಿ ಅವರು ಕ್ರೀಸ್​ಗೆ ಬಂದರೆಂದರೆ ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ತಂಡವನ್ನು ಗೆಲ್ಲಿಸಿಕೊಡುವ ನಂಬಿಕೆ ಅಭಿಮಾನಿಗಳದ್ದು. ಆದರೆ ಈ ಬಾರಿ ಐಪಿಎಲ್​ನಲ್ಲಿ ಇದು ಸತತ 2ನೇ ಪಂದ್ಯದಲ್ಲಿ ಹುಸಿಯಾಗಿದೆ. ಇದರಿಂದ ಆಗ ಮ್ಯಾಚ್​ ಫಿನಿಷರ್​ ಆಗಿದ್ದ ಧೋನಿ ಈಗ ಲೂಸರ್​ ಆಗಿ ಟೀಕೆಗಳಿಗೆ ಆಹಾರವಾಗುತ್ತಿದ್ದಾರೆ. ಧೋನಿ ಐಪಿಎಲ್​ನಲ್ಲಿ ಆಡುವುದನ್ನು ಮುಂದುವರಿಸಿದ ಬಗ್ಗೆ ಖುಷಿಪಟ್ಟಿದ್ದ ಅಭಿಮಾನಿಗಳು ಈಗ ಅವರಿಂದಲೇ ಗೆಲುವು ಕೈತಪ್ಪುತ್ತಿರುವ ಬಗ್ಗೆ ಟೀಕೆಗಳನ್ನು ಮಾಡಲಾರಂಭಿಸಿದ್ದಾರೆ.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆಗೆ ಅಗತ್ಯವೆನಿಸಿದ ಸಂದರ್ಭದಲ್ಲೂ ಕ್ರೀಸ್​ಗೆ ಬಾರದೆ ತಡವಾಗಿ 9ನೇ ಕ್ರಮಾಂಕದಲ್ಲಿ ಆಡಿ, ಸೋಲಿನ ನಡುವೆ ಆರ್ಭಟಿಸಿದರೂ ಟೀಕೆಗೆ ಗುರಿಯಾಗಿದ್ದ 43 ವರ್ಷದ ಧೋನಿ, ಭಾನುವಾರ ರಾಜಸ್ಥಾನ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರೂ ತಂಡವನ್ನು ಗೆಲುವಿನ ದಡ ಸೇರಿಸಲಿಲ್ಲ. ಇದರಿಂದ ಟೀಕೆಗಳಿಗೆ ಗುರಿಯಾಗುತ್ತಿರುವ ನಡುವೆ ಸಿಎಸ್​ಕೆ ತಂಡದ ಮುಖ್ಯ ಕೋಚ್​ ಸ್ಟೀಫನ್​ ಫ್ಲೆಮಿಂಗ್​, ಧೋನಿ ಪರದಾಟಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.

ಧೋನಿಗೆ ಈಗಲೂ ಮೊಣಕಾಲು ನೋವು ಕಾಡುತ್ತಿದೆ. ಹೀಗಾಗಿ 10 ಓವರ್​ನಷ್ಟು ಸುದೀರ್ ಕಾಲ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಇದರಿಂದ ತಂಡದಲ್ಲಿ ಅವರ ಬ್ಯಾಟಿಂಗ್​ ಕ್ರಮಾಂಕವೂ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿದೆ ಎಂದು ಫ್ಲೆಮಿಂಗ್​ ತಿಳಿಸಿದ್ದಾರೆ. ಧೋನಿ ಆಟಕ್ಕೆ ಅವರ ದೇಹ ಸಹಕರಿಸುತ್ತಿಲ್ಲ. 10 ಓವರ್​ ಕಾಲ ಓಡುತ್ತ ಆಡುತ್ತಿರಲು ಅವರಿಂದಾಗದು. ಹೆಚ್ಚಿನ ಓವರ್​ ಆಡಬೇಕೆಂದಿದ್ದರೆ ಅವರು ಇತರರನ್ನು ಮುಂದೆ ಕಳುಹಿಸುತ್ತಾರೆ. 13, 14ನೇ ಓವರ್​ ನಂತರವೇ ಅವರು ಕ್ರೀಸ್​ಗೆ ಇಳಿಯಬಲ್ಲರು. ಕಳೆದ ವರ್ಷವೇ ಹೇಳಿದಂತೆ ಅವರು ತಂಡದ ಅಮೂಲ್ಯ ಆಟಗಾರರಾಗಿದ್ದಾರೆ ಎಂದು ಫ್ಲೆಮಿಂಗ್​ ಹೇಳಿದ್ದಾರೆ.

ರಾಯಲ್ಸ್ ಎದುರು ಸಿಎಸ್​ಕೆ ತಂಡಕ್ಕೆ ಕೊನೇ 25 ಎಸೆತಗಳಲ್ಲಿ 54 ರನ್​ ಬೇಕಿದ್ದಾಗ ಮಾಜಿ ನಾಯಕ ಎಂಎಸ್​ ಧೋನಿ ಕ್ರೀಸ್​ಗೆ ಇಳಿದರೂ ಗೆಲುವಿನ ದಡ ಸೇರಿಸದೆ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜಾ (32*) ಜತೆಗೂಡಿ 6ನೇ ವಿಕೆಟ್​ಗೆ 20 ಎಸೆತಗಳಲ್ಲಿ 35 ರನ್​ ಕಸಿದ ಧೋನಿ, ಕೊನೇ ಓವರ್​ನಲ್ಲಿ 19 ರನ್​ ಬೇಕಿದ್ದಾಗ ಸಂದೀಪ್​ ಶರ್ಮಗೆ ವಿಕೆಟ್​ ಒಪ್ಪಿಸಿದರು. ಧೋನಿ-ಜಡೇಜಾ ಜತೆಯಾದಾಗ ಮೊದಲ 13 ಎಸೆತಗಳಲ್ಲಿ 14 ರನ್​ ಮಾತ್ರ ಗಳಿಸಿದರು. ಇದು ಸಿಎಸ್​ಕೆಯನ್ನು ಕೊನೇ 2 ಓವರ್​ಗಳಲ್ಲಿ 39 ರನ್​ ಗಳಿಸುವ ಒತ್ತಡಕ್ಕೆ ಸಿಲುಕಿಸಿತು. ಇದರಿಂದ ರಾಜಸ್ಥಾನ ಎದುರು 6 ರನ್​ಗಳಿಂದ ಶರಣಾದ ಸಿಎಸ್​ಕೆ, ಐಪಿಎಲ್​-18ರಲ್ಲಿ ಸತತ 2ನೇ ಸೋಲು ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net