ಕೋವಿಡ್ ಹೀರೋಗಳಿಗೆ ಆರ್‌ಸಿಬಿ ಸಲ್ಯೂಟ್..!

rcb team jersy for web
Published on

ದುಬೈ: ಮಹಾಮಾರಿ ಕೋವಿಡ್-19 ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರ ವಿರುದ್ಧ ಹೋರಾಡುತ್ತಿರುವವರಿಗೆ ಕೋವಿಡ್-19 ವಾರಿಯರ್ಸ್‌ ಅಂತಾನೆ ಕರೆಯಲಾಗುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಐಪಿಎಲ್ ಟೂರ್ನಿ ವೇಳೆ ಆರ್‌ಸಿಬಿ ಕೂಡ ಕರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ನಿರ್ಧರಿಸಿದೆ. ಆರ್‌ಸಿಬಿ ತಂಡದ ಆಟಗಾರರು ಜೆರ್ಸಿ ಮೇಲೆ ‘ಮೈ ಕೋವಿಡ್ ಹೀರೋಸ್’ ಎಂದು ಬರೆಸಿಕೊಳ್ಳುವ ಮೂಲಕ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಲಿದ್ದಾರೆ.

ಪಂದ್ಯವಾಡುವ ಹಾಗೂ ತರಬೇತಿ ಜೆರ್ಸಿಗಳ ಮೇಲೆ ಕೋವಿಡ್ ಹೀರೋಸ್ ಎಂದು ಬರೆಯಲಾಗಿದೆ. ಈ ಮೂಲಕ ಕರೊನಾ ವಾರಿಯರ್ಸ್‌ಗಳ ಸೇವೆಯನ್ನು ಸ್ಮರಿಸಲಾಗುತ್ತಿದೆ. ಜತೆಗೆ ತಂಡದ ಮೊದಲ ಪಂದ್ಯದಲ್ಲಿ ಆಟಗಾರರು ತೊಡುವ ಜೆರ್ಸಿಯನ್ನು ಹರಾಜಿಗಿಟ್ಟು, ಇದರಿಂದ ಬಂದ ಮೊತ್ತವನ್ನು ಗೀವ್‌ಇಂಡಿಯಾ ಫೌಂಡೇಷನ್‌ಗೆ ನೀಡಲು ಫ್ರಾಂಚೈಸಿ ನಿರ್ಧರಿಸಿದೆ. ಎಲ್ಲದಕ್ಕೂ ಮುಖ್ಯ ಮನುಷ್ಯತ್ವ. ಈ ಪ್ರಚಾರದ ಮೂಲಕ ಕೋವಿಡ್ ಹೀರೋಗಳಿಗೆ ಮೈದಾನದಲ್ಲಿ ಗೌರವ ಸಲ್ಲಿಸುವುದೇ ಇದರ ಉದ್ದೇಶ ಎಂದು ಚೂರಿವಾಲಾ ತಿಳಿಸಿದ್ದಾರೆ.

ಆರ್‌ಸಿಬಿ ತಂಡ ಲೀಗ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಸೆ.21 ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ದುಬೈನಲ್ಲಿ ಆಡಲಿದೆ. ಸೆ.19 ರಂದು ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ಎದುರಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net