

ನವದೆಹಲಿ: ಐಪಿಎಲ್ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ (IPL Mega Auction) ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್ಗಳು ಸೇರಿದಂತೆ ಸ್ಟಾರ್ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್ನತ್ತ ಎದುರುನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಪ್ರಸ್ತುತ ಆರ್ಸಿಬಿ ಕ್ಯಾಪ್ಟನ್ ಆಗಿರುವ ಫಾಫ್ ಡು ಪ್ಲೆಸಿಸ್ ಸ್ಥಾನಕ್ಕಾಗಿ ಈ ಮೂವರು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಕಂಬದಕೋಣೆ ಹೋಬಳಿ ಮಟ್ಟದ ಕ್ರೀಡಾಕೂಟ
ವರದಿಗಳ ಪ್ರಕಾರ, ಈ ಬಾರಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ತಮ್ಮ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ರನ್ನು ತಂಡದಿಂದ ಕೈಬಿಡಲಿದ್ದು, ರಿಲೀಸ್ ಮಾಡಿದ ಬಳಿಕ ಹೊಸ ನಾಯಕನಿಗೆ ಹುಡುಕಾಟ ನಡೆಸಲಿದೆ ಎಂದು ಹೇಳಲಾಗಿದೆ. ಅಸಲಿಗೆ ಇದು ಶೇ.90% ರಷ್ಟು ನಿಜ ಎಂದೇ ನಂಬಲಾಗಿದೆ. ಫಾಫ್ ಡು ಪ್ಲೆಸಿಸ್ರನ್ನು ರಿಲೀಸ್ ಮಾಡಿದರೆ ಮುಂದೆ ಆರ್ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಇದೀಗ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಹರಾಜು ಪ್ರಕ್ರಿಯೆಯಲ್ಲಿ ಫಾಫ್ ಸ್ಥಾನಕ್ಕೆ ಇನ್ಯಾವ ಆಟಗಾರನನ್ನು ತರಬೇಕು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿರುವ ಆರ್ಸಿಬಿ, ಇದೀಗ ಮೂವರು ಟಿ20 ಸ್ಪೆಷಲಿಸ್ಟ್ ಕಡೆ ತಮ್ಮ ಒಲವು ತೋರಿದೆ. ಇವರ ಪೈಕಿ ಒಬ್ಬರನ್ನು ಕ್ಯಾಪ್ಟನ್ ಸ್ಥಾನಕ್ಕೆ ಕೂರಿಸಲು ಚಿಂತನೆ ನಡೆಸಿದೆ.
ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಅದ್ಭುತ ಆಟಗಾರನಾಗಿ ಗುರುತಿಸಿಕೊಂಡಿರುವ ಐಡೆನ್ ಮಾರ್ಕ್ರಾಮ್, ಕಳೆದ ಸೀಸನ್ಗಳಲ್ಲಿ ಎಸ್ಆರ್ಎಚ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ತಾವೊಬ್ಬ ಉತ್ತಮ ಟಿ20 ಸ್ಪೆಷಲಿಸ್ಟ್ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಆರ್ಸಿಬಿ, ಮಾರ್ಕ್ರಾಮ್ರನ್ನು ತಂಡಕ್ಕೆ ಕರೆತಂದರೆ ಬ್ಯಾಟಿಂಗ್ ಹಾಗೂ ನಾಯಕನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬಹುದು ಎಂಬ ನಿರೀಕ್ಷೆಯಲ್ಲಿದೆ ಎನಿಸುತ್ತದೆ.
ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಮೇಲೆ ಇದೀಗ ಆರ್ಸಿಬಿ ಕಣ್ಣಿಟ್ಟಿದ್ದು, ನಾಯಕನಾಗಿ ಹಾಗೂ ಅತ್ಯುತ್ತಮ ರನ್ಸ್ಕೋರರ್ ಆಗಿ ಯಶಸ್ವಿಯಾಗಿರುವ ಸ್ಮಿತ್, ತಂಡದ ಜವಾಬ್ದಾರಿ ಹೊರಲು ಸೂಕ್ತ ಆಟಗಾರ ಎಂದು ನಿರ್ಧರಿಸುವಂತೆ ಕಂಡುಬಂದಿದೆ. ಒಬ್ಬ ಕ್ಯಾಪ್ಟನ್ ಆಗಿ ಉತ್ತಮವಾಗಿ ಈಗಾಗಲೇ ತಮ್ಮ ತಂಡವನ್ನು ಮುನ್ನಡೆಸಿರುವ ಸ್ಮಿತ್, ಆರ್ಸಿಬಿ ಬ್ಯಾಟಿಂಗ್ ಲೈನ್ ಅನ್ನು ಮತ್ತಷ್ಟು ಬಲ ಪಡಿಸುತ್ತಾರೆ ಎಂಬ ವಿಶ್ವಾಸ ಫ್ರಾಂಚೈಸಿಗಿರಬಹುದು. ಅಸಲಿಗೆ ಸ್ಟೀವ್ ಸ್ಮಿತ್ರನ್ನು ತಂಡಕ್ಕೆ ಕರೆದುಕೊಳ್ಳಲಿದೆಯೇ ಫ್ರಾಂಚೈಸಿ ಎಂಬುದನ್ನು ಆಕ್ಷನ್ ದಿನವೇ ತಿಳಿಯಬೇಕಿದೆ.
ಟೀಮ್ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ನಮ್ಮ ಬೆಂಗಳೂರಿನ ಹುಡುಗ ಕೆ.ಎಲ್. ರಾಹುಲ್, ಇಲ್ಲಿಯವರೆಗೂ ಕಳೆದ ಕೆಲವು ಸೀಸನ್ಗಳಿಂದ ಲಖನೌ ಸೂಪರ್ ಜೈಂಟ್ಸ್ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಕ್ಯಾಪ್ಟನ್ ಹಾಗೂ ಅತ್ಯುತ್ತಮ ಓಪನರ್ ಆಗಿಯೂ ತಂಡದಲ್ಲಿ ಉತ್ತಮ ಹೆಸರು ಗಳಿಸಿರುವ ರಾಹುಲ್, ತಾವೊಬ್ಬ ಟಿ20 ಸ್ಪೆಷಲಿಸ್ಟ್ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಒಂದೆಡೆ ಆರ್ಸಿಬಿ ಫ್ಯಾನ್ಸ್ಗಳು ಈ ಹಿಂದಿನಿಂದಲೂ ರಾಹುಲ್ ಬೆಂಗಳೂರು ಪರ ಆಡಬೇಕು ಎಂದು ಅಭಿಪ್ರಾಯಿಸಿದ್ದರು. ಅದಕ್ಕೆ ತಕ್ಕಂತೆ ಫ್ರಾಂಚೈಸಿ ಕೂಡ ಇದೀಗ ಕೆ.ಎಲ್. ರಾಹುಲ್ರನ್ನು ಆಯ್ಕೆ ಮಾಡಲು ಚಿಂತಿಸಿದ್ದು, ಅಂತಿಮವಾಗಿ ಯಾರು ಆರ್ಸಿಬಿ ಕ್ಯಾಪ್ಟನ್ ಪಟ್ಟ ಸ್ವೀಕರಿಸುತ್ತಾರೆ? ತಂಡ ಸೇರುತ್ತಾರೆ? ಎಂಬುದು ಐಪಿಎಲ್ ಆಕ್ಷನ್ನಲ್ಲಿ ಸ್ಪಷ್ಟವಾಗಲಿದೆ,(ಏಜೆನ್ಸೀಸ್).