

ಬೆಂಗಳೂರು: ಆರ್ಸಿಬಿ ತಂಡ ಈ ಮುನ್ನ 2020, 2021, 2022ರಲ್ಲೂ ಪ್ಲೇಆಫ್ ಹಂತಕ್ಕೇರಿದ್ದರೂ, ಕ್ರಮವಾಗಿ ಸನ್ರೈಸರ್ಸ್, ಕೆಕೆಆರ್ ಮತ್ತು ರಾಜಸ್ಥಾನ ವಿರುದ್ಧ ಎಲಿಮಿನೇಟರ್ನಲ್ಲೇ ಹೊರಬಿದ್ದಿತ್ತು. ಇದೀಗ ಆರ್ಸಿಬಿ ಜತೆಗೆ ಇವೇ 3 ತಂಡಗಳು ಪ್ಲೇಆಫ್ಗೇರಿವೆ. ಹೀಗಾಗಿ ಆರ್ಸಿಬಿ ಈ ಬಾರಿ ಪ್ರಶಸ್ತಿ ಜಯಿಸಬೇಕಾದರೆ ಇವೇ 3 ತಂಡಗಳನ್ನು ಸೋಲಿಸಿ ಸೇಡು ತೀರಿಸಿಕೊಳ್ಳಬೇಕಾಗಿದೆ.
ಮೇ ತಿಂಗಳಿನಲ್ಲಿ ಆರ್ಸಿಬಿ ಸೋತಿಲ್ಲ, ಆರ್ಆರ್ ಗೆದ್ದಿಲ್ಲ!
ಆರ್ಸಿಬಿ ಸತತ 6 ಜಯದೊಂದಿಗೆ ಪ್ಲೇಆಫ್ಗೇರಿದ್ದರೆ, ರಾಜಸ್ಥಾನ ಕೊನೇ 5 ಲೀಗ್ ಪಂದ್ಯಗಳಲ್ಲಿ ಗೆಲುವು ಕಾಣದ ನಡುವೆಯೂ ಪ್ಲೇಆಫ್ಗೇರಿದೆ. ಆರ್ಸಿಬಿ ಏಪ್ರಿಲ್ 21ರಂದು ತನ್ನ ಕೊನೇ ಸೋಲು ಕಂಡಿದ್ದರೆ, ರಾಜಸ್ಥಾನ ಏಪ್ರಿಲ್ 27ರಂದು ತನ್ನ ಕೊನೇ ಗೆಲುವು ಸಾಧಿಸಿದೆ. ಅಂದರೆ ಮೇ ತಿಂಗಳಲ್ಲಿ ಆರ್ಸಿಬಿ ಇದುವರೆಗೆ ಸೋಲನ್ನೇ ಕಂಡಿರದಿದ್ದರೆ, ಆರ್ಆರ್ ಗೆಲುವಿನ ಮುಖವನ್ನೇ ನೋಡಿಲ್ಲ.
ಸತತ 5 ಪಂದ್ಯ ಗೆದ್ದಾಗ ಆರ್ಸಿಬಿ ಫೈನಲ್ಗೇರಿದೆ!
ಆರ್ಸಿಬಿ ತಂಡ ಸತತ 6 ಗೆಲುವಿನೊಂದಿಗೆ ಪ್ಲೇಆಫ್ ಹಂತಕ್ಕೇರಿದೆ. ಆರ್ಸಿಬಿ ಈ ಮುನ್ನ ಐಪಿಎಲ್ ಆವೃತ್ತಿಯೊಂದರಲ್ಲಿ ಸತತ 5 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ಗೆದ್ದ 3 ಸಲವೂ ಫೈನಲ್ಗೇರಿತ್ತು. ಅಂದರೆ 2009, 2011 ಮತ್ತು 2016ರಲ್ಲಿ ಸತತ 5 ಪಂದ್ಯ ಗೆದ್ದಿತ್ತು ಮತ್ತು ಪ್ರಶಸ್ತಿ ಸುತ್ತಿಗೇರಿತ್ತು. ಹೀಗಾಗಿ ಈ ಸಲವೂ ಅದು ಪುನರಾವರ್ತನೆಯಾಗುವುದು ಮಾತ್ರವಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ಕಪ್ ಗೆಲ್ಲುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.