

ನವದೆಹಲಿ: ಕರೊನಾ ಹಾವಳಿಯಿಂದಾಗಿ ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ಚಾಂಪಿಯನ್ ತಂಡದ ನಿರ್ಧಾರವೂ ಬಾಕಿ ಉಳಿದಿದೆ. ಆದರೆ ಇದುವರೆಗೆ ನಡೆದಿರುವ 29 ಪಂದ್ಯಗಳ ಆಧಾರದ ಮೇಲೆ ಈ ಸಲ ಕಪ್ ಗೆಲ್ಲುವ ಅದೃಷ್ಟ ಆರ್‌ಸಿಬಿ ತಂಡದ್ದಾಗಿತ್ತು ಎಂದು ಪೈಥಾನ್ ಸ್ಕ್ರಿಪ್ಟ್ ಲೆಕ್ಕಾಚಾರದ ಮೂಲಕ ನಿರ್ಣಯಿಸಲಾಗಿದೆ.
ಕ್ರಿಕೆಟ್ ಪ್ರೇಮಿಯಾಗಿರುವ ರೆಡಿಟ್ ಬಳಕೆದಾರ ಆದಿಶ್ ಜೈನ್ ಎಂಬವರು ಕಂಪ್ಯೂಟರ್‌ನಲ್ಲಿ ರೂಪಿಸಿರುವ ಪೈಥಾನ್ ಪ್ರೋಗ್ರಾಂನಿಂದ ವಿರಾಟ್ ಕೊಹ್ಲಿ ಬಳಗ ಈ ಸಲ ಕಪ್ ಗೆಲ್ಲುತ್ತಿತ್ತು ಎಂದು ಕಂಡುಕೊಂಡಿದ್ದಾರೆ. ಟೂರ್ನಿ ಸ್ಥಗಿತಗೊಳ್ಳುವುದಕ್ಕೆ ಮುನ್ನ ನಡೆದ 29 ಪಂದ್ಯಗಳ ಪ್ರತಿ ಎಸೆತಗಳು, ಪಿಚ್ ಸ್ವರೂಪ, ಇತ್ತೀಚೆಗಿನ ಫಾರ್ಮ್, ಆಟಗಾರರು ಮತ್ತು ತಂಡಗಳ ದಾಖಲೆಯ ಆಧಾರದಲ್ಲಿ ಈ ಫಲಿತಾಂಶವನ್ನು ನೀಡಿದ್ದಾರೆ.
ಪೈಥಾನ್ ಪ್ರೋಗ್ರಾಂ ಅನ್ವಯ, ಲೀಗ್ ಹಂತದ ಅಂತ್ಯಕ್ಕೆ ಆರ್‌ಸಿಬಿ ತಂಡ 14 ಪಂದ್ಯಗಳಲ್ಲಿ 11 ಜಯ, 3 ಸೋಲಿನೊಂದಿಗೆ 22 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ (10 ಜಯ, 4 ಸೋಲು) 20 ಅಂಕದೊಂದಿಗೆ 2ನೇ ಸ್ಥಾನ ಗಳಿಸುತ್ತಿತ್ತು. ಸಿಎಸ್‌ಕೆ (8 ಜಯ, 6 ಸೋಲು, 16 ಅಂಕ) ಮತ್ತು ಪಂಜಾಬ್ ಕಿಂಗ್ಸ್ (7 ಜಯ, 7 ಸೋಲು, 14 ಅಂಕ) ಪ್ಲೇಆಫ್ಗೇರಿದ ಮತ್ತೆರಡು ತಂಡಗಳಾಗುತ್ತಿದ್ದವು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವೂ ತಲಾ 7 ಜಯ, ಸೋಲಿನೊಂದಿಗೆ 14 ಅಂಕ ಗಳಿಸುತ್ತಿದ್ದರೂ, ರನ್‌ರೇಟ್ ಲೆಕ್ಕಾಚಾರದಲ್ಲಿ ಪಂಜಾಬ್‌ಗಿಂತ ಹಿಂದೆ ಬಿದ್ದು ಪ್ಲೇಆಫ್ ಸ್ಥಾನ ವಂಚಿತವಾಗುತ್ತಿತ್ತು.
ಪೈಥಾನ್ ಸ್ಕ್ರಿಪ್ಟ್ ಅನ್ವಯ ಐಪಿಎಲ್ ಲೀಗ್ ಹಂತದ ಅಂಕಪಟ್ಟಿ:
ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ತಂಡ ಡೆಲ್ಲಿ ವಿರುದ್ಧ ಗೆದ್ದು ನೇರವಾಗಿ ಫೈನಲ್‌ಗೇರುತ್ತಿದ್ದರೆ, ಎಲಿಮಿನೇಟರ್‌ನಲ್ಲಿ ಪಂಜಾಬ್ ತಂಡ ಸಿಎಸ್‌ಕೆ ವಿರುದ್ಧ ಜಯಿಸುತ್ತಿತ್ತು. 2ನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಗೆಲ್ಲುತ್ತಿತ್ತು. ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ತೋರುತ್ತಿತ್ತು ಎಂದು ಆದಿಶ್ ಜೈನ್ ರೂಪಿಸಿರುವ ಪೈಥಾನ್ ಪ್ರೋಗ್ರಾಂ ಅನ್ವಯ ಕಂಡುಕೊಳ್ಳಲಾಗಿದೆ.
‘ಎಲ್ಲ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ಕಳೆದ 5 ವರ್ಷದ ಅಂಕಿ-ಅಂಶಗಳನ್ನು ಕಲೆಹಾಕಲಾಗಿದೆ. ಸಿಂಗಲ್ಸ್, ಡಬಲ್ಸ್, ಬೌಂಡರಿ ಅಥವಾ ಸಿಕ್ಸರ್ ಹೀಗೆ ಅವರು ಯಾವ ರೀತಿಯಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಬೌಲರ್ ಯಾವ ರೀತಿಯ ರನ್‌ಗಳನ್ನು ಹೆಚ್ಚು ಬಿಟ್ಟುಕೊಟ್ಟಿದ್ದಾರೆ. ಪವರ್‌ಪ್ಲೇ, ಮಧ್ಯಮ, ಸ್ಲಾಗ್ ಓವರ್‌ಗಳಲ್ಲಿ ಎಷ್ಟು ರನ್ ಗಳಿಸಿದ್ದಾರೆ. ಬೌಲರ್‌ಗಳು ಎಷ್ಟು ರನ್ ಬಿಟ್ಟುಕೊಟ್ಟಿದ್ದಾರೆ. ಎಷ್ಟು ವೈಡ್-ನೋಬಾಲ್ ಎಸೆದಿದ್ದಾರೆ. ಆಟಗಾರರು ಸರಾಸರಿ ಪ್ರತಿ ಪಂದ್ಯಕ್ಕೆ ತೆಗೆದುಕೊಂಡಿರುವ ಕ್ಯಾಚ್ ಮುಂತಾದ ಲೆಕ್ಕಾಚಾರಗಳ ಆಧಾರದಲ್ಲಿ ಪಂದ್ಯಗಳ ಫಲಿತಾಂಶ ನಿರ್ಧರಿಸಲಾಗಿದೆ’ ಎಂದು ಜೈನ್ ವಿವರಿಸಿದ್ದಾರೆ.