

ಬೆಂಗಳೂರು: ನಿನ್ನೆ (ಮಾರ್ಚ್ 29) ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಹೀನಾಯವಾಗಿ ಸೋತ ಬೆನ್ನಲ್ಲೇ ಹತಾಶೆಗೆ ಒಳಗಾದ ಆರ್ಸಿಬಿ ಅಭಿಮಾನಿಗಳು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಂಡದಲ್ಲಿ ಕೊಹ್ಲಿ ಇರುವವರೆಗೂ ಆರ್ಸಿಬಿ ಕಪ್ ಗೆಲ್ಲುವುದಿಲ್ಲ ಎಂದಿದ್ದಾರೆ.
2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದ ಇದುವರೆಗೂ ಒಮ್ಮೆಯೂ ಐಪಿಎಲ್ ಟ್ರೋಫಿಯನ್ನು ಆರ್ಸಿಬಿ ಎತ್ತಿಹಿಡಿದಿಲ್ಲ. ಟೂರ್ನಿಯ ಆರಂಭದಿಂದಲೂ ಕೊಹ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವೇ ಆಡುತ್ತಿದ್ದಾರೆ. ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರು ಕೂಡ ಆರ್ಸಿಬಿಯಲ್ಲಿ ಕೊಹ್ಲಿ ಇರುವುದು ದರಿದ್ರ ಎನ್ನುವ ಅರ್ಥದಲ್ಲಿ ಕೆಲ ಆರ್ಸಿಬಿ ಅಭಿಮಾನಿಗಳು ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಆರ್ಸಿಬಿಯ ನಿಷ್ಠಾವಂತ ಅಭಿಮಾನಿಗಳು ಕೂಡ ಒಪ್ಪುತ್ತಿಲ್ಲ.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಸೆಣಸಾಡಿತು. ಈ ಪಂದ್ಯದಲ್ಲಿ ಕೊಹ್ಲಿ ವೈಯಕ್ತಿಕವಾಗಿ 59 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದರು. ಉಳಿದ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಕೋಲ್ಕತ್ತ ವಿರುದ್ಧ ಆರ್ಸಿಬಿ ಹೀನಾಯ ಸೋಲನ್ನು ಅನುಭವಿಸಿತು. ಪಂದ್ಯದ ಬೆನ್ನಲ್ಲೇ ಮಾತನಾಡಿದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಇರುವವರೆಗೂ ನಾವು ಟ್ರೋಫಿಯನ್ನು ಗೆಲ್ಲುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದನು.
ರಾಯಲ್ ಚಾಲೆಂಜರ್ಸ್ ಬೆಂಗಳೂರು 2009, 2011, ಮತ್ತು 2016 ರಲ್ಲಿ ಮೂರು ಬಾರಿ ಫೈನಲ್ ತಲುಪಿದರೂ ಟ್ರೋಫಿಯನ್ನು ಜಯಿಸುವಲ್ಲಿ ವಿಫಲವಾಯಿತು. ಕಳೆದ ಐಪಿಎಲ್ನಲ್ಲಿ ಆರ್ಸಿಬಿ, ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಇದೀಗ ಪ್ರಸಕ್ತ ಸರಣಿಯಲ್ಲಿ 3 ಪಂದ್ಯಗಳನ್ನು ಆಡಿರುವ ಆರ್ಸಿಬಿ 2ರಲ್ಲಿ ಸೋಲುಂಡಿದೆ. ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಟೂರ್ನಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತು. ಮೊದಲ ಪಂದ್ಯದಲ್ಲೇ ಹೀನಾಯ ಸೋಲನ್ನು ಅನುಭವಿಸುವ ಮೂಲಕ ಶುಭಾರಂಭದ ಕನಸು ನುಚ್ಚುನೂರಾಯಿತು. ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸದೇ ಹೋಗಿದ್ದರೆ ಈ ಪಂದ್ಯವನ್ನು ಕೂಡ ಸೋಲಬೇಕಿತ್ತು. ಆದರೆ, ದಿನೇಶ್ ಕಾರ್ತಿಕ್ ಅದ್ಭುತ ಫಿನಿಶಿಂಗ್ ಮಾಡುವ ಮೂಲಕ ಜಯ ತಂದುಕೊಟ್ಟರು.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ಗಳಲ್ಲಿ 183 ರನ್ ಗುರಿ ನೀಡಿದ ಆರ್ಸಿಬಿಗೆ ಟಕ್ಕರ್ ಕೊಡಲು ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಪಡೆ 7 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು. ಓಪನರ್ ಆಗಿ ಸ್ಪೋಟಕ ಓಪನಿಂಗ್ ಕೊಟ್ಟ ಸುನಿಲ್ ನರೇನ್ (47) ಮತ್ತು ಫಿಲಿಪ್ ಸಾಲ್ಟ್(30), ಸ್ಟೇಡಿಯಂನ ಸುತ್ತಮುತ್ತ ಸಿಕ್ಸರ್ಗಳ ಸುರಿಮಳೆಯನ್ನೇ ಹರಿಸಿದರು. ಈ ಮೂಲಕ 77 ರನ್ಗಳನ್ನು ಕೊಡುಗೆಯಾಗಿ ಕೊಟ್ಟ ಈ ಜೋಡಿ, ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಪೆವಿಲಿಯನ್ನತ್ತ ಮುಖಮಾಡಿದರು.
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ (39*) ಮತ್ತು ವೆಂಕಟೇಶ್ ಅಯ್ಯರ್ (50) ಅಬ್ಬರದ ಜತೆಯಾಟದಿಂದ ಕೊಲ್ಕತ್ತಾ ಭರ್ಜರಿ ಗೆಲುವು ದಾಖಲಿಸಿತು. 83 ರನ್ ಸಿಡಿಸಿದ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟ ಕಡೆಗೂ ವಿಫಲಗೊಂಡಿದ್ದು, ಆರ್ಸಿಬಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿತು. (ಏಜೆನ್ಸೀಸ್)