

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಐಪಿಎಲ್-17ರಲ್ಲಿ ಸೋಲಿನ ಆರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ. ಜತೆಗೆ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳ ಹೋಳಿ ಸಂಭ್ರಮವನ್ನು ದುಪ್ಪಟ್ಟುಗೊಳಿಸುವ ತವಕದಲ್ಲಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ 6 ವಿಕೆಟ್ಗಳಿಂದ ಮುಗ್ಗರಿಸಿತ್ತು. ಜತೆಗೆ ಈ ಸೋಲು ತಂಡದ ಕೆಲ ದೌರ್ಬಲ್ಯಗಳನ್ನು ಒಂದೇ ಪಂದ್ಯದಲ್ಲಿ ಬಹಿರಂಗಪಡಿಸಿದೆ. ಬ್ಯಾಟಿಂಗ್ ವಿಭಾಗದ ಕುಸಿತ ಮತ್ತು ಬೌಲಿಂಗ್ ವಿಭಾಗದ ನೀರಸ ನಿರ್ವಹಣೆಯನ್ನು ಸುಧಾರಿಸಬೇಕಾದ ಅಗತ್ಯ ಫಾಫ್ ಡು ಪ್ಲೆಸಿಸ್ ಬಳಗದ ಮುಂದಿದೆ.
ಹೊಸ ಲಾಂಛನ, ಹೊಸ ಜೆರ್ಸಿ, ಹೊಸ ಕೋಚ್ ಜತೆಗೆ ತಂಡದ ಹೆಸರಿನಲ್ಲೂ ಅಲ್ಪ ಬದಲಾವಣೆ ಮಾಡಿದರೂ, ಆರ್ಸಿಬಿ ತಂಡ ತನ್ನ ಹಳೆಯ ಸಂಪ್ರದಾಯದಂತೆ ಆರಂಭಿಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಆಗಲಿಲ್ಲ. ಆದರೆ ತವರಿನ ಅಭಿಮಾನಿಗಳ ಎದುರು ಆರ್ಸಿಬಿ ಮತ್ತೆ ಉತ್ಸಾಹದಿಂದ ಕಣಕ್ಕಿಳಿಯಬೇಕಾಗಿದೆ.
ವಿಶ್ವಾಸದಲ್ಲಿ ಪಂಜಾಬ್
ಶಿಖರ್ ಧವನ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ವಿಶ್ವಾಸದಲ್ಲಿದೆ. ಆಲ್ರೌಂಡರ್ಗಳಾದ ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ಸ್ಟೋನ್ ಮೊದಲ ಪಂದ್ಯದ ಗೆಲುವಿನಲ್ಲಿ ಮಿಂಚಿದ್ದರೆ, ಅರ್ಷದೀಪ್ ಸಿಂಗ್ ಮತ್ತು ಕಗಿಸೊ ರಬಾಡ ಬೌಲಿಂಗ್ ವಿಭಾಗದ ಪ್ರಮುಖ ಬಲ ಆಗಿದ್ದಾರೆ. ಆರ್ಸಿಬಿಯ ಮಾಜಿ ವೇಗಿ ಹರ್ಷಲ್ ಪಟೇಲ್ ಈ ಬಾರಿ ಪ್ರವಾಸಿ ತಂಡದಲ್ಲಿದ್ದು, ಚಿನ್ನಸ್ವಾಮಿ ಮೈದಾನದಲ್ಲಿನ ಅವರ ಅನುಭವ ಆರ್ಸಿಬಿಗೆ ಸವಾಲೊಡ್ಡಬಹುದು.
ಮಿಂಚಬೇಕಿದೆ ಕೆಜಿಎಫ್!
ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಸಮಸ್ಯೆ ನೀಗಿಸುವ ಪರಿಹಾರ ಸರಳವಾಗಿದೆ. ಕೆಜಿಎ್ (ಕೊಹ್ಲಿ, ಗ್ಲೆನ್, ಫಾಫ್) ಮಿಂಚಿದರೆ ಆರ್ಸಿಬಿಗೆ ದೊಡ್ಡ ಮೊತ್ತ ಪೇರಿಸುವುದು ಕಷ್ಟವಾಗದು. ಮೊದಲ ಪಂದ್ಯದಲ್ಲಿ ಪ್ಲೆಸಿಸ್ ಉತ್ತಮ ಆರಂಭದ ಬಳಿಕ ಔಟಾಗಿದ್ದರೆ, ವಿರಾಟ್ ಕೊಹ್ಲಿ ಲಯ ಕಂಡುಕೊಳ್ಳುವ ಹಂತದಲ್ಲೇ ಔಟಾಗಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಖಾತೆ ತೆರೆಯಲು ವಿಫಲರಾಗಿದ್ದರು. ಇವರಿಗೆ ಯುವ ಬ್ಯಾಟರ್ಗಳಾದ ರಜತ್ ಪಾಟೀದಾರ್, ಅನುಜ್ ರಾವತ್ ಸಮರ್ಥ ಬೆಂಬಲ ನೀಡಬೇಕಿದೆ.
ಬೌಲಿಂಗ್ ವಿಭಾಗದ್ದೇ ತಲೆನೋವು
ಹರಾಜಿನ ದಿನಗಳಿಂದಲೇ ಆರ್ಸಿಬಿ ಬೌಲಿಂಗ್ ವಿಭಾಗದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಮೊದಲ ಪಂದ್ಯದ ಬಳಿಕ ಆರ್ಸಿಬಿ ಬೌಲಿಂಗ್ ವಿಭಾಗ ಇನ್ನಷ್ಟು ಟೀಕೆ ಎದುರಿಸಿದೆ. ಚೆಪಾಕ್ನ ಸ್ಪಿನ್ ಸ್ನೇಹಿ ಪಿಚ್ನಲ್ಲೂ ಆರ್ಸಿಬಿಯ ಸ್ಪಿನ್ನರ್ಗಳಾದ ಕರ್ಣ್ ಶರ್ಮ, ಮಯಾಂಕ್ ದಾಗರ್ ಪರಿಣಾಮಕಾರಿ ಎನಿಸಲಿಲ್ಲ. ವೇಗದ ಬೌಲಿಂಗ್ನಲ್ಲೂ ಸಿರಾಜ್, ಅಲ್ಜಾರಿ ಜೋಸೆಫ್, ಯಶ್ ದಯಾಳ್ ದುಬಾರಿ ಎನಿಸಿದರು. ಇವರಿಗೆ ಹೋಲಿಸಿದರೆ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ವಿಕೆಟ್ ಬೇಟೆಯಲ್ಲಿ ಹೆಚ್ಚಿನ ಯಶ ಕಂಡರು. ಚಿನ್ನಸ್ವಾಮಿಯಲ್ಲಿ ಕಿರು ಬೌಂಡರಿ ಗೆರೆ ಇರುವುದರಿಂದ ಬೌಲರ್ಗಳಿಗೆ ಇನ್ನಷ್ಟು ಕಠಿಣ ಸವಾಲು ಇದೆ. ಈ ಬಾರಿ ಸ್ಥಳಿಯ ವೇಗಿ ವೈಶಾಕ್ ವಿಜಯ್ ಕುಮಾರ್ ಮತ್ತು ಕಿವೀಸ್ ವೇಗಿ ಲಾಕಿ ಗ್ಯುರ್ಸನ್ಗೆ ಅವಕಾಶದ ನಿರೀೆ ಇದೆ.
*ಮುಖಾಮುಖಿ: 31
ಆರ್ಸಿಬಿ: 14
ಪಂಜಾಬ್: 17
*ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ
ಮೊದಲ 3 ಪಂದ್ಯಗಳ ಟಿಕೆಟ್ ಸೋಲ್ಡ್ಔಟ್
ಬೆಂಗಳೂರಿನಲ್ಲಿ ನಿಗದಿಯಾಗಿರುವ ಆರ್ಸಿಬಿ ತಂಡದ ಮೊದಲ 3 ಪಂದ್ಯಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಈ ಬಾರಿ ಆ್ಲೈನ್ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟಿರುವ ಅಗ್ಗದ ಟಿಕೆಟ್ಗಳು ಒಂದೇ ದಿನದಲ್ಲಿ ಖಾಲಿಯಾಗಿದ್ದರೆ, ದುಬಾರಿ ಟಿಕೆಟ್ಗಳೂ ಕೆಲ ದಿನಗಳ ಹಿಂದೆ ಸಂಪೂರ್ಣ ಮಾರಾಟವಾಗಿವೆ. ಆರ್ಸಿಬಿ ತಂಡ ಇನ್ನು ಮಾ. 29ಕ್ಕೆ ಕೆಕೆಆರ್ ಮತ್ತು ಏ. 2ಕ್ಕೆ ಲಖನೌ ಎದುರು ಇನ್ನೆರಡು ಪಂದ್ಯಗಳನ್ನು ಆಡಲಿದೆ.
*861: ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಇದುವರೆಗೆ 30 ಪಂದ್ಯ ಆಡಿದ್ದು, ಒಟ್ಟು 861 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ.
*39: ಕೊಹ್ಲಿ ಇನ್ನು 39 ರನ್ ಗಳಿಸಿದರೆ ಪಂಜಾಬ್ ಕಿಂಗ್ಸ್ ವಿರುದ್ಧ 900 ರನ್ ಪೂರೈಸಿದ 2ನೇ ಬ್ಯಾಟರ್ ಎನಿಸಲಿದ್ದಾರೆ. ಡೇವಿಡ್ ವಾರ್ನರ್ ಮೊದಲ ಸಾಧಕ.
ರನ್ಮಳೆ ನಿರೀಕ್ಷೆ
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಸಾಂಪ್ರದಾಯಿಕವಾಗಿ ಫ್ಲ್ಯಾಟ್ ಎನಿಸಿದ್ದು, ಎಂದಿನಂತೆ ಈ ಸಲವೂ ರನ್ಮಳೆ ಹರಿಯುವ ನಿರೀಕ್ಷೆ ಇದೆ. ಇತ್ತೀಚೆಗೆ ಡಬ್ಲ್ಯುಪಿಎಲ್ನಲ್ಲೂ ಇಲ್ಲಿ ನಡೆದ ಪಂದ್ಯಗಳಲ್ಲಿ ರನ್ ಸುರಿಮಳೆಯಾಗಿತ್ತು. ಚಿನ್ನಸ್ವಾಮಿಯಲ್ಲಿ ಇದುವರೆಗೆ ನಡೆದಿರುವ 88 ಪಂದ್ಯಗಳಲ್ಲಿ 47ರಲ್ಲಿ ಚೇಸಿಂಗ್ ಮಾಡಿದ ತಂಡವೇ ಜಯಿಸಿದ್ದರೆ, ಮೊದಲು ಬ್ಯಾಟಿಂಗ್ ಮಾಡಿದ 37 ತಂಡಗಳು ಗೆದ್ದಿವೆ. 4 ಪಂದ್ಯಗಳು ರದ್ದುಗೊಂಡಿವೆ. 47ರಲ್ಲಿ ಟಾಸ್ ಗೆದ್ದ ತಂಡವೇ ಜಯಿಸಿದೆ. ಮೊದಲ ಇನಿಂಗ್ಸ್ನ ಸರಾಸರಿ ಮೊತ್ತ 166 ರನ್. ಇಲ್ಲಿ ಯಶಸ್ವಿಯಾಗಿ ಚೇಸಿಂಗ್ ಮಾಡಲಾಗಿರುವ ಗರಿಷ್ಠ ಮೊತ್ತ 213. ಆರ್ಸಿಬಿ ಪೇರಿಸಿದ 263 ರನ್ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗರಿಷ್ಠ ಮೊತ್ತವಾಗಿದೆ.
*9: ಚಿನ್ನಸ್ವಾಮಿಯಲ್ಲಿ 2018ರಿಂದ ನಡೆದಿರುವ ಪ್ರತಿ ಐಪಿಎಲ್ ಪಂದ್ಯದಲ್ಲಿ ಓವರ್ಗೆ 9.42ರ ಸರಾಸರಿಯಲ್ಲಿ ರನ್ ಹರಿದಿದೆ. ಇದು ಕನಿಷ್ಠ 5 ಐಪಿಎಲ್ ಪಂದ್ಯ ನಡೆದಿರುವ ತಾಣಗಳ ಪೈಕಿ ಗರಿಷ್ಠ ಸ್ಕೋರಿಂಗ್ ರೇಟ್ ಆಗಿದೆ.