ಕಳೆದ ಐಪಿಎಲ್​ನಲ್ಲಿ ಕಳಪೆ ಆಟವಾಡಿದ್ರು ಭಾರಿ ಮೊತ್ತಕ್ಕೆ ಮ್ಯಾಕ್ಸಿ ಖರೀದಿಸಿದ್ದೇಕೆ? ಇಲ್ಲಿದೆ ಆರ್​ಸಿಬಿ ಉತ್ತರ..

Maxi
Published on

ಚೆನ್ನೈ: ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಪ್ರಸಕ್ತ ಐಪಿಎಲ್​ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಬಿಕರಿಯಾಗಿದ್ದಾರೆ.

ಬರೋಬ್ಬರಿ 14.25 ಕೋಟಿ ರೂ.ಗೆ ಮ್ಯಾಕ್ಸ್​ವೆಲ್​ ಆರ್​ಸಿಬಿ ತೆಕ್ಕೆಗೆ ಜಾರಿದ್ದಾರೆ. ಆದರೆ, ಸಹಜವಾಗಿ ಐಪಿಎಲ್​ ಅಭಿಮಾನಿಗಳಲ್ಲಿ ಕಾಡುವ ಪ್ರಶ್ನೆಯೆಂದರೆ ಮ್ಯಾಕ್ಸ್​ವೆಲ್​ಗೆ ಇಷ್ಟೊಂದು ಹಣ ಕೊಟ್ಟ ಖರೀದಿ ಮಾಡಬೇಕಿತ್ತಾ ಎನ್ನುವುದು. ಏಕೆಂದರೆ ಕಳೆದ ಐಪಿಎಲ್​ನಲ್ಲಿ ಮ್ಯಾಕ್ಸಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ ಬಾರಿಯು ಸಾಮಾನ್ಯ ಮೊತ್ತಕ್ಕೇನೋ ಬಿಕರಿಯಾಗಿರಲಿಲ್ಲ. ಬರೋಬ್ಬರಿ 10 ಕೋಟಿ ರೂ. ನೀಡಿ ಪಂಜಾಬ್​ ತಂಡ ಮ್ಯಾಕ್ಸಿಯನ್ನು ಖರೀದಿಸಿತ್ತು. ಆದರೆ, ಪ್ರಯೋಜನ ಮಾತ್ರ ಹೇಳಿಕೊಳ್ಳುವ ಮಟ್ಟಕ್ಕಿರಲಿಲ್ಲ.

ಹೀಗಾಗಿ ಕ್ರೀಡಾಭಿಮಾನಿಗಳಲ್ಲಿ ಸೃಷ್ಟಿಯಾಗಿರುವ ಪ್ರಶ್ನೆಗೆ ಆರ್​ಸಿಬಿ ನಿರ್ದೇಶಕ ಮೈಕ್​ ಹೆಸ್ಸನ್​ ಉತ್ತರ ನೀಡಿದ್ದಾರೆ. ಮ್ಯಾಕ್ಸ್​ವೆಲ್​ ಖರೀದಿ ಬಗ್ಗೆ ಮಾತನಾಡಿರುವ ಹೆಸ್ಸನ್​, 2020ರ ಐಪಿಎಲ್​ಗೂ ಮೊದಲು ಮ್ಯಾಕ್ಸಿ ಕ್ರಿಕೆಟ್​ನಲ್ಲಿ ಎಷ್ಟು ಹಿಡಿತ ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಎಷ್ಟರ ಮಟ್ಟಿಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದರ ಕಡೆ ಗಮನಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ ಪವರ್​ ಬಳಸಿಕೊಳ್ಳಬಹುದು. ಎಕ್ಷ್​-ಫ್ಯಾಕ್ಟರ್​ ಪ್ಲೇಯರ್​ ಅನ್ನು ಮ್ಯಾಕ್ಸಿಯಲ್ಲಿ ಕಂಡುಕೊಂಡಿದ್ದೇವೆಂದು ಹೆಸ್ಸನ್​ ತಿಳಿಸಿದ್ದಾರೆ.

ಹರಾಜಿನಲ್ಲಿ ಕೋಲ್ಕತ ನೈಟ್​ ರೈಡರ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದವು. ಹರಾಜು ಮೊತ್ತ 12.25 ಕೋಟಿ ತಲುಪಿದಾಗ ಕೆಕೆಆರ್​ ಬಿಡ್​ನಿಂದ ಹಿಂದೆ ಸರಿಯಿತು. ಬಳಿಕ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಮ್ಯಾಕ್ಸ್​ವೆಲ್​ 14.25 ಕೋಟಿ ರೂ.ಗೆ ಆರ್​ಸಿಬಿ ತೆಕ್ಕೆಗೆ ಜಾರಿದರು.

ಮ್ಯಾಕ್ಸ್​ವೆಲ್​ ಕಳೆದ ಬಾರಿ 10.75 ಕೋಟಿ ರೂ.ಗೆ ಪಂಜಾಬ್​ ಪಾಲಾಗಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಇದಾದ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಮ್ಯಾಕ್ಸ್​ವೆಲ್​​ ಅಬ್ಬರಿಸಿ ಐಪಿಎಲ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇತ್ತೀಚೆಗೆ ಮಾತನಾಡಿದ ಮ್ಯಾಕ್ಸ್​ವೆಲ್​ ಆರ್​ಸಿಬಿ ತಂಡದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ಇಂದು ಚೆನ್ನೈನಲ್ಲಿ ನಡೆದ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆರ್​ಸಿಬಿ ಸೇರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net