

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 235 ರನ್ಗಳಿಗೆ ಆಲೌಟ್ ಮಾಡಿದ್ದು, ಆತಿಥೇಯರು ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಕೊಂಡ ನ್ಯೂಜಿಲೆಂಡ್ ತಂಡವು ಡೆರಿಲ್ ಮಿಚೆಲ್ (82 ರನ್, 129 ಎಸೆತ, 3 ಬೌಂಡರಿ, 3 ಸಿಕ್ಸರ್), ವಿಲ್ ಯಂಗ್ (71 ರನ್, 138 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 65.4 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್ ಸುಂದರ್ (18.4-2-81-4), ಆಕಾಶ್ ದೀಪ್ (5-0-22-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ (Ravindra Jadeja) ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ ಫೈವ್ಗೆ ಲಗ್ಗೆ ಇಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ (Ravindra Jadeja) ಈವರೆಗೆ 312 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಇದಕ್ಕೂ ಮೊದಲು ಈ ಸಾಧನೆ ಜಹೀರ್ ಖಾನ್ (311) ಮತ್ತು ಇಶಾಂತ್ ಶರ್ಮಾ (311) ಹೆಸರಿನಲ್ಲಿತ್ತು. ಇದೀಗ ರವೀಂದ್ರ ಜಡೇಜಾ (Ravindra Jadeja) ಈ ದಾಖಲೆಯನ್ನು ಮುರಿದು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ . ರವಿಚಂದ್ರನ್ ಅಶ್ವಿನ್ (533*), ಕಪಿಲ್ ದೇವ್ (434) ಮತ್ತು ಹರ್ಭಜನ್ ಸಿಂಗ್ (417) ಇದ್ದಾರೆ.