

ಮುಂಬೈ: 2024ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ (Ravindra Jadeja) ಚುಟುಕು ಮಾದರಿಗೆ ನಿವೃತ್ತಿಯನ್ನು ಘೋಷಿಸುವ ಮೂಲಕ ಕ್ರೀಡಾ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದ್ದರು. ಇದೀಗ ರವೀಂದ್ರ ಜಡೇಜಾ ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ ಮತ್ತಷ್ಟು ಪುಷ್ಠಿ ನೀಡಿದೆ.
ಈ ಹಿಂದೆ ಗಾಯಕ್ಕೆ ತುತ್ತಾಗಿ ಟೆಸ್ಟ್ ಕ್ರಿಕೆಟ್ನಿಂದ ರವೀಂದ್ರ ಜಡೇಜಾ (Ravindra Jadeja) ದೂರ ಉಳಿದಿದ್ದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜೆರ್ಸಿಯ ಫೋಟೋ ಹಾಕುವ ಮೂಲಕ ಕಮ್ಬ್ಯಾಕ್ ಸೂಚನೆ ನೀಡಿದ್ದರು. ಇದೀಗ ಟೆಸ್ಟ್ ಜೆರ್ಸಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿಯ ಸೂಚನೆಯನ್ನು ನೀಡಿದ್ದು, ಸದ್ಯ ಕ್ರೀಡಾವಲಯದಲ್ಲಿ ಈ ಕ್ರಿಪ್ಟಿಕ್ ಪೋಸ್ಟ್ ಚರ್ಚಾಸ್ಪದ ವಿಚಾರವಾಗಿದೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಈಚೆಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ರವೀಂದ್ರ ಜಡೇಜಾ (Ravindra Jadeja) 4 ವಿಕೆಟ್ಗಳನ್ನು ಪಡೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಜಡೇಜಾರನ್ನು ಆಯ್ಕೆ ಸಮಿತಿ ಪರಿಗಣಿಸುವುದು ಡೌಟ್ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ನಿವೃತ್ತಿಯ ಮುನ್ಸೂಚನೆ ನೀಡಿದ್ರಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.
ರವೀಂದ್ರ ಜಡೇಜಾ (Ravindra Jadeja) ಟೀಮ್ ಇಂಡಿಯಾ ಪರ 80 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 118 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಶತಕ ಹಾಗೂ 22 ಅರ್ಧಶತಕಗಳೊಂದಿಗೆ ಒಟ್ಟು 3370 ರನ್ ಕಲೆಹಾಕಿದ್ದಾರೆ. ಹಾಗೆಯೇ 150 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 323 ವಿಕೆಟ್ ಕಬಳಿಸಿ ಮಿಂಚಿದ್ದಾರೆ.