Viral Video ಮೂಲಕ ನನ್ನ ಹೆಂಡ್ತಿ ಮೃತಪಟ್ಟಿರುವ ವಿಚಾರ ತಿಳಿಯಿತು; ಮನಕಲಕುತ್ತದೆ ತಿರುಪತಿ ಕಾಲ್ತುಳಿತ ಸಂತ್ರಸ್ತನ ನೋವಿನ ಕಥೆ

Tirupati Stampede
Published on

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಸ್ಥಳವಾದ ತಿರುಪತಿಯಲ್ಲಿ ಜನವರಿ 08ರಂದು ಕಾಲ್ತುಳಿತ ಸಂಭವಿಸಿದ್ದು, 6 ಮಂದಿ ಮೃತಪಟ್ಟಿದ್ಧಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರ ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಪರಿಹಾರವನ್ನು ಘೋಷಿಸಿದ್ದು, ಮೃತರ ಕುಟುಂಬಸ್ಥರು ಘಟನೆ ಕುರಿತು ನೀಡುತ್ತಿರುವ ವಿವರಣೆ ಎಲ್ಲರ ಮನಕಲುಕುತ್ತಿದೆ.

ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಸರ್ವ ದರ್ಶನ ಟಿಕೆಟ್ ಪಡೆಯಲು ನೂಕುನುಗ್ಗಲು ಏರ್ಪಟ್ಟ ಪರಿಣಾಮ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ 6 ಭಕ್ತರು ಮೃತಪಟ್ಟಿದ್ದಾರೆ. ಬುಧವಾರ (ಜನವರಿ 08) ಸಂಜೆ ಅವಘಡ ನಡೆದಿದ್ದು, 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಂತಿ ಎಂಬುವವರು ಕೂಡ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು, ಅವರ ಪತಿ ಮಾತನಾಡಿದ್ದಾರೆ. ನಾನು, ನನ್ನ ಪತ್ನಿ ಹಾಗೂ ಮಗ ತಿರುಪತಿಗೆ ಹೋಗಿದ್ದೆವು. ವೈಕುಂಠ ದ್ವಾರ ದರ್ಶನದ ಟಿಕೆಟ್​ ಪಡೆಯಲು 5 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬಂದಿದ್ದರು. ನನ್ನ ಹೆಂಡತಿ ಕೂಡ ಸರತಿ ಸಾಲಿನಲ್ಲಿ ನಿಂತಿದ್ದಳು. ಭದ್ರತೆಗಾಗಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರಲಿಲ್ಲ.

ದೇವಸ್ತಾನದ ಬಳಿ ಜಮಾಯಿಸಿದ್ದ ಭಕ್ತರು ಹೊರಗಿರುವಾಗ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದ್ವಾರವನ್ನು ತೆರೆದರು. ಈ ವೇಳೆ ಭಕ್ತರು ಏಕಾಏಕಿ ನುಗ್ಗಿದ್ದೇ ಕಾಲ್ತುಳಿತಕ್ಕೆ ಕಾರಣವಾಯಿತು. ಕಾಲ್ತುಳಿತ ಸಂಭವಿಸಲು ಅತಿಯಾದ ಜನದಟ್ಟಣೆ. ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ನನ್ನ ಪತ್ನಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾಳೆ ಎಂಬ ವಿಚಾರ ನಮಗೆ ತಿಳಿಯಲಿಲ್ಲ. ನಾವು ಆಸ್ಪತ್ರೆ ಹಾಗೂ ಇನ್ನಿತರೆ ಜಾಗಗಳಲ್ಲಿ ಹುಡುಕಾಟ ನಡೆಸಿದೆವು. ವೈರಲ್​ ವಿಡಿಯೋ (Viral Video) ಮೂಲಕ ಆಕೆ ಮೃತಪಟ್ಟಿದ್ದಾಳೆ ಎಂಬ ವಿಚಾರ ತಿಳಿಯಿತು ಎಂದು ಮೃತ ಶಾಂತಿ ಅವರ ಪತಿ ಹೇಳಿದ್ದಾರೆ.

ಕಾಲ್ತುಳಿತ ಸಂಭವಿಸಲು ಕಾರಣವೇನು? 

ಜನವರಿ 10 ರಿಂದ 19 ವರೆಗೆ ವಿಶೇಷ ದರ್ಶನಕ್ಕಾಗಿ ಭಕ್ತರಿಗೆ ಟಿಕೆಟ್ ವಿತರಿಸಲಾಗುತ್ತದೆ. ಇದಕ್ಕಾಗಿ ಒಟ್ಟು 94 ಕೌಂಟರ್​ಗಳನ್ನು ತೆರೆಯಲಾಗಿದೆ. ತಿರುಪತಿಯಲ್ಲಿ 5 ಕೌಂಟರ್​ಗಳಿದ್ದು, ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಉಚಿತ ದರ್ಶನದ ಟಿಕೆಟ್ ಪಡೆಯಲು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಬೇರೆ ಬೇರೆ ರಾಜ್ಯಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಗುರುವಾರ (ಜನವರಿ 08) ಬೆಳಗ್ಗೆ 5 ಗಂಟೆಗೆ ಟಿಕೆಟ್ ವಿತರಣೆ ಆರಂಭವಾಗಬೇಕಿತ್ತು. ಮೊದಲ ದಿನ ಜನವರಿ 10, 11 ಮತ್ತು 12 ನೇ ತಾರೀಖಿನ ದರ್ಶನಕ್ಕಾಗಿ 1 ಲಕ್ಷದ 20 ಸಾವಿರ ಟಿಕೆಟ್ ವಿತರಿಸುವುದಾಗಿ ಟಿಟಿಡಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆ ಮತ್ತಷ್ಟು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟಿಕೆಟ್ ಸಿಗುವುದಿಲ್ಲ ಎಂದು ಭಕ್ತರು ಟಿಕೆಟ್ ಪಡೆಯಲು ಏಕಾಏಕಿ ಮುಗಿಬಿದ್ದರು. ಈ ವೇಳೆ ಮಹಿಳೆಯರು, ವೃದ್ಧರು ಕುಸಿದು ಬಿದ್ದಿದ್ದರಿಂದ ಕಾಲ್ತುಳಿತಕ್ಕೆ ಒಳಗಾದರು. ಬಳಿಕ ಪೊಲೀಸರು ಹಾಗೂ ಟಿಟಿಡಿ ಸಿಬ್ಬಂದಿ ಜನರನ್ನು ಚದುರಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net