

ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇದೀಗ ಅಂತಿಮ ಘಟಕ್ಕೆ ತಲುಪಿದ್ದು, ಬಾರ್ಬಡೋಸ್ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವಿನ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಈ ಸಮರದಲ್ಲಿ ಗೆದ್ದು ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರ ಮೊರೆ ಹೋಗಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಟೂರ್ನಿ ಆರಂಭದ ಮೊದಲ ಪಂದ್ಯದಿಂದಲೂ ರೋಹಿತ್ ಪಡೆ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದು, ಒಂದು ಮ್ಯಾಚ್ನಲ್ಲಿಯೂ ಸೋಲನ್ನು ಕಾಣದೆ, ವಿಶ್ವಕಪ್ ಫೈನಲ್ಗೆ ಬಂದು ನಿಂತಿದೆ. ಆದ್ರೆ, ಈ ಯಶಸ್ವಿ ಪಯಣದಲ್ಲಿ ಟೀಮ್ ಇಂಡಿಯಾದ 'ರನ್ ಮಷಿನ್', ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮಾತ್ರ ಸತತವಾಗಿ ಕಳಪೆ ಪ್ರದರ್ಶನ ತೋರುವ ಮೂಲಕ ಎಲ್ಲರ ಅಚ್ಚರಿಗೆ ಗುರಿಯಾಗಿದ್ದಾರೆ. ಇಂತಹ ಆಟವನ್ನು ಯಾರೊಬ್ಬರು ಸಹ ವಿರಾಟ್ರಿಂದ ನಿರೀಕ್ಷಿಸಿರಲಿಲ್ಲ. ಸ್ವತಃ ತಂಡದ ನಾಯಕ ರೋಹಿತ್ಗೂ ಇದು ಆಶ್ಚರ್ಯ ಉಂಟು ಮಾಡಿದ್ದೇ ಆದರೂ ಕೊಹ್ಲಿ ಜತೆ ನಿಂತು, ಅವರನ್ನು ಪ್ರೋತ್ಸಾಹಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅನಿಸಿಕೆಯನ್ನು ಬಹಿರಂಗವಾಗಿ ಹೇಳಿ, ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಆದ್ರೆ, ಈ ಕುರಿತು ಇದೀಗ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ, ಕಮೆಂಟೇಟರ್ ಆದ ರವಿಶಾಸ್ತ್ರಿ ಮಾತನಾಡಿದ್ದು, ವಿರಾಟ್ ಕಳಪೆ ಪ್ರದರ್ಶನದ ಹಿಂದಿರುವ ಕಾರಣವೇನು ಎಂಬುದನ್ನು ಅಭಿಮಾನಿಗಳ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದಾರೆ.
"ವಿರಾಟ್ ಸಮಸ್ಯೆಯಾಗಿರುವುದು ಅವರ ಶಾಟ್ ಆಯ್ಕೆ. ಈ ಪಿಚ್ಗಳಲ್ಲಿ ಅವರು ಹೊಸದೇನು ಪ್ರಯತ್ನಿಸುವ ಅಗತ್ಯವಿಲ್ಲ. ನೀವು ರೋಹಿತ್ ಗಮನಿಸಿದರೆ ತಿಳಿಯುತ್ತದೆ. ಅವರು ಹೇಗೆ ತಮ್ಮ ಪವರ್ಫುಲ್ ಹಿಟ್ಟಿಂಗ್ ಮತ್ತು ಶಾಟ್ ಸೆಲೆಕ್ಷನ್ ಮಾಡುತ್ತಿದ್ದಾರೆ ಎಂಬುದು. ಎದುರಾಳಿ ತಂಡದ ಬೌಲರ್ಗಳನ್ನು ಬಹಳ ಆರಾಮದಾಯಕವಾಗಿ ಪರಿಗಣಿಸುವುದನ್ನು ರೋಹಿತ್ ಚೆನ್ನಾಗಿ ಅರಿತಿದ್ದಾರೆ. ಇದೇ ರೀತಿ ಕೊಹ್ಲಿ ಕೂಡ ಅನುಸರಿಸಬೇಕು. ಆಗ ಎಲ್ಲವೂ ಸಾಧ್ಯ. ಆಕ್ರಮಣಕಾರಿಯಾಗಿರುವುದು ಒಳ್ಳೆಯದೇ. ಫೈನಲ್‌ನಲ್ಲಿ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧ ರನ್ ಗಳಿಸುವ ಸಾಧ್ಯತೆಯಿದೆ" ಎಂದು ರವಿಶಾಸ್ತ್ರಿ ಹೇಳಿದ್ದಾರೆ,(ಏಜೆನ್ಸೀಸ್).