

ಕಾಬುಲ್: ಇತ್ತೀಚೆಗಷ್ಟೇ ವಿಶಿಷ್ಟ ದಾಖಲೆಯೊಂದಕ್ಕೆ ಸಾಕ್ಷಿಯಾದ ಆಫ್ಘಾನಿಸ್ತಾನ (Afghanistan) ತಂಡದ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ (Rashid Khan), ಈ ಹಿಂದೆ ಯಾರೊಬ್ಬರು ಮಾಡದ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದು ವಿಶೇಷ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎದುರಾಳಿಗಳ ವಿಕೆಟ್ಗಾಗಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ರಶೀದ್, ತಮ್ಮ ಜನ್ಮದಿನದಂದೇ ಬರೋಬ್ಬರಿ ಐದು ವಿಕೆಟ್ ಪಡೆದು ಆಫ್ಘಾನಿಸ್ತಾನ ಗೆಲುವಿಗೆ ಕಾರಣವಾಗುವುದರ ಜತೆಗೆ ಐತಿಹಾಸಿಕ ದಾಖಲೆ ಬರೆದರು. ಈ ಖುಷಿಯಲ್ಲೇ ಗುರುವಾರ (ಅ.03) ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶೀದ್, ತಮ್ಮ ತಂಡದ ಆಟಗಾರರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದ್ದು, ರಶೀದ್ ಖಾನ್ ಮದುವೆಯನ್ನು ಪಶ್ತೂನ್ ಪದ್ಧತಿಗಳ ಪ್ರಕಾರ ನಡೆಸಲಾಗಿದೆ. ಈ ಸಮಾರಂಭಕ್ಕೆ ಅಫ್ಘಾನಿಸ್ತಾನದ ಎಲ್ಲ ಕ್ರಿಕೆಟಿಗರು ಹಾಜರಾಗಿ, ಶುಭಕೋರಿದ್ದಾರೆ. ಸ್ಟಾರ್ ಆಟಗಾರನ ಮದುವೆ ಸಮಾರಂಭಕ್ಕೆ ಖುದ್ದಾಗಿ ಭೇಟಿ ಕೊಡಲಾಗದ ಕ್ರಿಕೆಟ್ ಸ್ನೇಹಿತರು, ಟ್ವೀಟ್ ಮೂಲಕ ಶುಭಾಶಯಗಳ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ರಶೀದ್ ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿವೆ.
ಪಶ್ತೂನ್ ಪದ್ಧತಿಗಳ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶೀದ್ ಖಾನ್ ತಮ್ಮ ಪತ್ನಿಯ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಇದು ಅನೇಕರಲ್ಲಿ ತೀವ್ರ ಗೊಂದಲ ಮೂಡಿಸಿದೆ. ತಮ್ಮ ನೆಚ್ಚಿನ ಸ್ಟಾರ್ ಆಟಗಾರನ ಹೆಂಡತಿ ಯಾರು ಎಂಬುದನ್ನು ತಿಳಿಯುವ ಕುತೂಹಲದಿಂದ ವೈರಲ್ ಆದ ಫೋಟೋ ಮತ್ತು ವಿಡಿಯೋಗಳನ್ನು ಫ್ಯಾನ್ಸ್ ತಡಕಾಡಿದ್ದಾರೆ. ಆದ್ರೆ, ರಶೀದ್ ಖಾನ್ ಅಕ್ಕ-ಪಕ್ಕದಲ್ಲಿ ಅವರ ಸ್ನೇಹಿತರೇ ತುಂಬಿಕೊಂಡಿದ್ದಾರೆ ವಿನಃ ಅವರ ಪತ್ನಿಯ ಸುಳಿವು ಮಾತ್ರ ಎಲ್ಲಿಯೂ ಕಾಣಸಿಕ್ಕಿಲ್ಲ. ಇದು ರಶೀದ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಈ ಕುರಿತು ಒಂದಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ,(ಏಜೆನ್ಸೀಸ್).