ರಣಜಿ ಟ್ರೋಫಿ: ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೀಜಿತ್; ಕರ್ನಾಟಕಕ್ಕೆ ಭಾರಿ ಮುನ್ನಡೆ

web ranji shri
Published on

ಲಖನೌ: ವಿಕೆಟ್​ ಕೀಪರ್​&ಎಡಗೈ ಬ್ಯಾಟರ್​ ಕೃಷ್ಣನ್​ ಲಕ್ಷ್ಮಣನ್​ ಶ್ರೀಜಿತ್​ (110 ರನ್​, 153 ಎಸೆತ, 12 ಬೌಂಡರಿ) ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆತಿಥೇಯ ಉತ್ತರ ಪ್ರದೇಶ ಎದುರು ಭಾರಿ ಮುನ್ನಡೆ ಸಾಧಿಸಿದೆ. ಆದರೆ ಉತ್ತರ ಪ್ರದೇಶ ಎರಡನೇ ಇನಿಂಗ್ಸ್​ನಲ್ಲಿ ಎಚ್ಚರಿಕೆಯ ಆರಂಭ ಕಂಡಿರುವುದರಿಂದ ರಾಜ್ಯದ ಗೆಲುವಿಗೆ ಮತ್ತೊಮ್ಮೆ ಬೌಲರ್​ಗಳ ಬಿಗಿ ದಾಳಿಯೂ ಅಗತ್ಯವಾಗಿದೆ.

ಏಕನಾ ಸ್ಟೇಡಿಯಂನಲ್ಲಿ ಗುರುವಾರ 5 ವಿಕೆಟ್​ಗೆ 127 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, 275 ರನ್​ ಪೇರಿಸುವ ಮೂಲಕ ಮೊದಲ ಇನಿಂಗ್ಸ್​ನಲ್ಲಿ 186 ರನ್​ ಮುನ್ನಡೆ ಸಾಧಿಸಿತು. ಶ್ರೀಜಿತ್​ಗೆ ಬಾಲಂಗೋಚಿಗಳಾದ ಯಶೋವರ್ಧನ್​ ಪರಂತಾಪ್​ (55) ಮತ್ತು ವಿದ್ಯಾಧರ್​ ಪಾಟೀಲ್​ (38) ಸಮರ್ಥ ಸಾಥ್​ ನೀಡಿ ಮುನ್ನಡೆ ಹಿಗ್ಗಿಸಿದರು. ಪ್ರತಿಯಾಗಿ ಉತ್ತರ ಪ್ರದೇಶ ದಿನದಂತ್ಯಕ್ಕೆ 1 ವಿಕೆಟ್​ಗೆ 78 ರನ್​ ಗಳಿಸಿದ್ದು, ಇನ್ನೂ 108 ರನ್​ ಹಿನ್ನಡೆಯಲ್ಲಿದೆ. ಮಾಧವ್​ ಕೌಶಿಕ್​ (33*) ಮತ್ತು ಆರ್ಯನ್​ ಜುಯಲ್​ (35*) ಮುರಿಯದ 2ನೇ ವಿಕೆಟ್​ಗೆ 70 ರನ್​ ಸೇರಿಸಿ ಕ್ರೀಸ್​ನಲ್ಲಿದ್ದಾರೆ.

ಮುನ್ನಡೆ ವಿಸ್ತರಿಸಿದ ಶ್ರೀಜಿತ್​-ಪರಂತಾಪ್​

ಶ್ರೀಜಿತ್​ ಮತ್ತು ಶ್ರೇಯಸ್​ ಗೋಪಾಲ್​ (15) ಬೆಳಗ್ಗೆ ಕ್ರಮವಾಗಿ 68 ಮತ್ತು 14 ರನ್​ಗಳಿಂದ ಆಟ ಆರಂಭಿಸಿದರು. ಶ್ರೇಯಸ್​ ದಿನದ 6ನೇ ಓವರ್​ನಲ್ಲೇ ಔಟಾದರು. ಆಗ ಶ್ರೀಜಿತ್​ ಅವರನ್ನು ಪದಾರ್ಪಣೆ ಪಂದ್ಯ ಆಡುತ್ತಿರುವ ಮತ್ತೋರ್ವ ಆಟಗಾರ ಯಶೋವರ್ಧನ್​ ಪರಂತಾಪ್​ ಕೂಡಿಕೊಂಡರು. ಇವರಿಬ್ಬರು 7ನೇ ವಿಕೆಟ್​ಗೆ 61 ರನ್​ ಕೂಡಿಸಿದರು. ಈ ವೇಳೆ 28 ವರ್ಷದ ಶ್ರೀಜಿತ್​ 125 ಎಸೆತಗಳಲ್ಲೇ ಶತಕ ಪೂರೈಸಿದರು. ಈ ಮೂಲಕ ರಾಜ್ಯಕ್ಕೆ ಕಳೆದ ಕೆಲ ವರ್ಷಗಳಿಂದ ಕಾಡುತ್ತಿರುವ ಸಮರ್ಥ ವಿಕೆಟ್​ ಕೀಪರ್​&ಬ್ಯಾಟರ್​ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದರು. ಶಿವಂ ಮಾವಿಗೆ ಶ್ರೀಜಿತ್​ ವಿಕೆಟ್​ ಒಪ್ಪಿಸಿದ ಬಳಿಕ ಪರಂತಾಪ್​, ವಿದ್ಯಾಧರ್​ ಪಾಟೀಲ್​ ಜತೆಗೆ 8ನೇ ವಿಕೆಟ್​ಗೆ 51 ರನ್​ ಸೇರಿಸಿ ಮುನ್ನಡೆಯನ್ನು ವಿಸ್ತರಿಸಿದರು.

ಶ್ರೀಜಿತ್​ ಕರ್ನಾಟಕ ಪರ ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ 10ನೇ ಬ್ಯಾಟರ್​ ಎನಿಸಿದರು. ಯೋಗೇಂದ್ರ ಬಿ ಪಟೇಲ್​, ಎಸ್​. ಕೃಷ್ಣ, ಪಿಆರ್​ ಅಶೋಕಾನಂದ್​, ಮಧು ವಿಜಯ್​, ಕೆ. ಶ್ರೀರಾಮ್​, ಕೆ. ಗಣಪತಿ ರಾವ್​, ಜಿಆರ್​ ವಿಶ್ವನಾಥ್​, ಬಿಆರ್​ ಶರತ್​ ಮತ್ತು ಬಿ. ರೋಲ್ಯಾಂಡ್​ ಹಿಂದಿನ ಸಾಧಕರು.

ಉತ್ತರ ಪ್ರದೇಶ: 89 ಮತ್ತು 26 ಓವರ್​ಗಳಲ್ಲಿ 1 ವಿಕೆಟ್​ಗೆ 78 (ಮಾಧವ್​ ಕೌಶಿಕ್​ 33*, ಆರ್ಯನ್​ ಜುಯಲ್​ 35*, ವಿದ್ಯಾಧರ್​ 25ಕ್ಕೆ 1), ಕರ್ನಾಟಕ: 79.5 ಓವರ್​ಗಳಲ್ಲಿ 275 (ಶ್ರೀಜಿತ್​ 110, ಶ್ರೇಯಸ್​ 15, ಪರಂತಾಪ್​ 55, ವಿದ್ಯಾಧರ್​ 38, ಶಿವಂ ಮಾವಿ 96ಕ್ಕೆ 3, ಅಕಿಬ್​ 53ಕ್ಕೆ 3, ವಿಪ್ರಜ್​ 32ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net