ರಣಜಿ ಟ್ರೋಫಿಯಲ್ಲಿ ಇಂದಿನಿಂದ ಕ್ವಾರ್ಟರ್​ಫೈನಲ್​ ಕದನ; ಕರ್ನಾಟಕಕ್ಕೆ ವಿದರ್ಭ ಸವಾಲು

kar ranji web
Published on

ನಾಗ್ಪುರ: ಕಳೆದ 6 ವರ್ಷಗಳಿಂದ ರಣಜಿ ಟ್ರೋಫಿಯ ನಾಕೌಟ್​ ಹಂತದಲ್ಲಿ ಎಡವುತ್ತಲೇ ಬಂದಿರುವ ಕರ್ನಾಟಕ ತಂಡ ಈ ಬಾರಿ ಆ ತಡೆಯನ್ನು ಬೇಧಿಸಿ ಪ್ರಶಸ್ತಿ ಸನಿಹಕ್ಕೆ ಲಗ್ಗೆಯಿಡುವ ಹಂಬಲದಲ್ಲಿದೆ. ಪ್ರತಿಷ್ಠಿತ ದೇಶೀಯ ಕ್ರಿಕೆಟ್​ ಟೂರ್ನಿಯ ಕ್ವಾರ್ಟರ್​ಫೈನಲ್​ ಪಂದ್ಯಗಳಿಗೆ ಶುಕ್ರವಾರ ಚಾಲನೆ ಸಿಗಲಿದ್ದು, 8 ಬಾರಿಯ ಚಾಂಪಿಯನ್​ ಕರ್ನಾಟಕ ತಂಡ ಮತ್ತೊಂದು ಮಾಜಿ ಚಾಂಪಿಯನ್​ ತಂಡವಾಗಿರುವ ವಿದರ್ಭ ಎದುರು ಸೆಣಸಲಿದೆ. ನಾಗ್ಪುರದ ವಿಸಿಎ ಗ್ರೌಂಡ್​ನಲ್ಲಿ ಈ ಪಂದ್ಯ ನಡೆಯಲಿದೆ.

ಮಯಾಂಕ್​ ಅಗರ್ವಾಲ್​ ಪಡೆ ಲೀಗ್​ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 1 ಸೋಲು, 3 ಡ್ರಾದೊಂದಿಗೆ ಸಿ ಗುಂಪಿನಲ್ಲಿ 2ನೇ ಸ್ಥಾನ ಗಳಿಸಿದ್ದರೆ, ವಿದರ್ಭ ತಂಡ 5 ಜಯ, 1 ಸೋಲು, 1 ಡ್ರಾದೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕ ತಂಡ ಹುಬ್ಬಳ್ಳಿಯಲ್ಲಿ ನಡೆದ ತನ್ನ ಕೊನೇ ಲೀಗ್​ ಪಂದ್ಯದಲ್ಲಿ ಚಂಡೀಗಢ ಎದುರು ಗೆಲ್ಲುವ ಅವಕಾಶ ಕೈಚೆಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿದ್ದರೆ, ವಿದರ್ಭ ತಂಡ ಲೀಗ್​ ಹಂತದಲ್ಲಿ ಮುಂಬೈ ಬಳಿಕ ಗರಿಷ್ಠ 5 ಪಂದ್ಯ ಗೆದ್ದ 2ನೇ ತಂಡವಾಗಿದೆ. ಕೊನೇ ಪಂದ್ಯದಲ್ಲಿ ಹರಿಯಾಣ ಎದುರು ಗೆದ್ದಿತ್ತು.

ರಾಜ್ಯಕ್ಕೆ ಪಡಿಕ್ಕಲ್​ ಗೈರಿನ ಹಿನ್ನಡೆ: ಲೀಗ್​ ಹಂತದಲ್ಲಿ ಕರ್ನಾಟಕ ಪರ 4 ಪಂದ್ಯಗಳಲ್ಲಿ 3 ಶತಕಗಳ ಸಹಿತ ಸರ್ವಾಧಿಕ 556 ರನ್​ ಬಾರಿಸಿರುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಸದ್ಯ ಭಾರತ ಟೆಸ್ಟ್​ ತಂಡದಲ್ಲಿರುವುದರಿಂದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಮನೀಷ್​ ಪಾಂಡೆ (464) ಮತ್ತು ಶರತ್​ ಶ್ರೀನಿವಾಸ್​ (429) ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ನಾಯಕ ಮಯಾಂಕ್​ ಅಗರ್ವಾಲ್​ ಕೂಡ ಅಸ್ಥಿರ ನಿರ್ವಹಣೆಯಿಂದ ಹೊರಬಂದು ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ವೈಶಾಕ್​ ವಿಜಯ್​ಕುಮಾರ್​ ಆಟ ರಾಜ್ಯಕ್ಕೆ ಬಲ ತುಂಬಿದೆ. ವಿದ್ವತ್​ ಕಾವೇರಪ್ಪ, ವಿ. ಕೌಶಿಕ್​ ಮತ್ತು ಹಾರ್ದಿಕ್​ ರಾಜ್​ ರಾಜ್ಯದ ಬೌಲಿಂಗ್​ ವಿಭಾಗಕ್ಕೆ ಸಂಟಿತ ಶಕ್ತಿ ತುಂಬಿದ್ದಾರೆ.

ಕೊನೇ ಲೀಗ್​ ಪಂದ್ಯದಲ್ಲಿ ಆಡಿದ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಕರ್ನಾಟಕ, ಸ್ಪಿನ್ನರ್​ ರೋಹಿತ್​ ಕುಮಾರ್​ರನ್ನು ಹೆಚ್ಚುವರಿಯಾಗಿ ತಂಡಕ್ಕೆ ಮರಳಿ ಸೇರಿಸಿಕೊಂಡಿದೆ.

ಮುಖಾಮುಖಿ: 7

ಕರ್ನಾಟಕ: 2

ವಿದರ್ಭ: 1

ಡ್ರಾ: 4

ವಿದರ್ಭಕ್ಕೆ ಕರುಣ್​ ಬಲ

ವಿದರ್ಭ ತಂಡಕ್ಕೆ ತವರಿನ ಲಾಭದ ನಡುವೆ ಅನುಭವಿ ಬ್ಯಾಟರ್​ ಫೈಜ್​ ಫಜಲ್​ ಗೈರಿನ ಹಿನ್ನಡೆ ಇದೆ. ಫಜಲ್​ ಲೀಗ್​ ಹಂತದ ಬಳಿಕ ಕ್ರಿಕೆಟ್​ ವಿದಾಯ ಹೇಳಿದ್ದಾರೆ. ನಾಯಕ ಅಕ್ಷಯ್​ ವಾಡ್ಕರ್​ (431) ಮತ್ತು ಧ್ರುವ ಶೋರೆ (427) ವಿದರ್ಭ ಬ್ಯಾಟಿಂಗ್​ಗೆ ಆಧಾರವಾಗಿದ್ದಾರೆ. ಜತೆಗೆ ರಾಜ್ಯದಿಂದ ವಲಸೆ ಹೋಗಿರುವ ಅನುಭವಿ ಬ್ಯಾಟರ್​ ಕರುಣ್​ ನಾಯರ್​ ಕೂಡ 2 ಶತಕಗಳ ಸಹಿತ 391 ರನ್​ ಕಲೆಹಾಕಿದ್ದಾರೆ. ಆದಿತ್ಯ ಸರ್ವಾಟೆ ಮತ್ತು ಆದಿತ್ಯ ಠಾಕೂರ್​ ತಲಾ 30 ವಿಕೆಟ್​ ಕಬಳಿಸಿ ಬೌಲಿಂಗ್​ ವಿಭಾಗದಲ್ಲಿ ಶಕ್ತಿ ತುಂಬಿದ್ದಾರೆ.

ರಣಜಿ ಕ್ವಾರ್ಟರ್​ಫೈನಲ್ಸ್​

ಕರ್ನಾಟಕ-ವಿದರ್ಭ (ನಾಗ್ಪುರ)

ಮುಂಬೈ-ಬರೋಡ (ಮುಂಬೈ)

ತ.ನಾಡು-ಸೌರಾಷ್ಟ್ರ (ಕೊಯಂಬತ್ತೂರು)

ಮಧ್ಯಪ್ರದೇಶ-ಆಂಧ್ರ (ಇಂದೋರ್​)

*ಆರಂಭ: ಬೆಳಗ್ಗೆ 9.30

*ನೇರಪ್ರಸಾರ: ಜಿಯೋಸಿನಿಮಾ

ರಾಜ್ಯಕ್ಕೆ ನಾಕೌಟ್​ ಗೆಲ್ಲುವ ಸವಾಲು

ಕರ್ನಾಟಕ ತಂಡ 2014-15ರಲ್ಲಿ ಕೊನೆಯದಾಗಿ ರಣಜಿ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ನಂತರದಲ್ಲಿ 2015-16ರಲ್ಲಿ ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು. 2016-17ರಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ತಮಿಳುನಾಡು, 2017-18ರಲ್ಲಿ ಸೆಮೀಸ್​ನಲ್ಲಿ ವಿದರ್ಭ, 2018&19ರಲ್ಲಿ ಸೆಮೀಸ್​ನಲ್ಲಿ ಸೌರಾಷ್ಟ್ರ, 2019-20ರಲ್ಲಿ ಮತ್ತೆ ಸೆಮೀಸ್​ನಲ್ಲಿ ಬೆಂಗಾಲ್​ ಎದುರು ನಿರಾಸೆ ಅನುಭವಿಸಿತ್ತು. 2021-22ರಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಉತ್ತರ ಪ್ರದೇಶ, 2022-23ರಲ್ಲಿ ಸೆಮೀಸ್​ನಲ್ಲಿ ಸೌರಾಷ್ಟ್ರ ಎದುರು ಮುಗ್ಗರಿಸಿತ್ತು. ಹಾಲಿ ಋತುವಿನಲ್ಲಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಲೀಗ್​ನಲ್ಲೇ ಹೊರಬಿದ್ದಿದ್ದ ಕರ್ನಾಟಕ, ವಿಜಯ್​ ಹಜಾರೆ ಟ್ರೋಫಿಯಲ್ಲಿ ಸೆಮೀಸ್​ನಲ್ಲಿ ರಾಜಸ್ಥಾನ ಎದುರು ಸೋತಿತ್ತು. ಆ ನಿರಾಸೆಯನ್ನು ಅಳಿಸಿ ಈಗ ಪ್ರಶಸ್ತಿಯೊಂದಿಗೆ ಹಾಲಿ ಋತುವನ್ನು ಮುಗಿಸುವ ಸವಾಲು ರಾಜ್ಯ ತಂಡದ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net