

ಸೂರತ್: ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾಗಿರುವ ಪಂಜಾಬ್ ಆಲ್ರೌಂಡರ್ ಅಭಿಷೇಕ್ ಶರ್ಮಗೆ ಐಪಿಎಲ್ 17ನೇ ಆವೃತ್ತಿ ಆರಂಭಕ್ಕೆ ಇನ್ನು ಸರಿಸುಮಾರು ಒಂದು ತಿಂಗಳಷ್ಟೇ ಬಾಕಿ ಉಳಿದಿರುವ ವೇಳೆ ಸಂಕಷ್ಟ ಎದುರಾಗಿದೆ. ಸೂರತ್ ಅಪಾರ್ಟ್ಮೆಂಟ್ ಒಂದರಲ್ಲಿ ರೂಪದರ್ಶಿ ತಾನಿಯಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಅಭಿಷೇಕ್ ಶರ್ಮಗೆ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ನೀಡಿದ್ದಾರೆ.
28 ವರ್ಷದ ತಾನಿಯಾ ಸೋಮವಾರ ತಡರಾತ್ರಿ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಳ್ಳುವುದಕ್ಕೆ ಮುನ್ನ ಕೊನೆಯದಾಗಿ 23 ವರ್ಷದ ಅಭಿಷೇಕ್ ಶರ್ಮಗೆ ತನ್ನ ಮೊಬೈಲ್ನಲ್ಲಿ ಕೊನೆಯ ಕರೆ ಮಾಡಿದ್ದಾರೆ. ಈ ಹಿಂದೆ ತಾನಿಯಾ-ಅಭಿಷೇಕ್ ಪರಸ್ಪರ ಸಂಪರ್ಕದಲ್ಲಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಇಬ್ಬರ ನಡುವೆ ಸಂಪರ್ಕ ಕಡಿದಿತ್ತು. ಆದರೂ ಕೊನೇ ಕರೆ ಅಭಿಷೇಕ್ಗೆ ಹೋಗಿರುವುದರಿಂದ ಪೊಲೀಸರು ಹಲವು ಕೋನಗಳಲ್ಲಿ ಪ್ರಕರಣದ ತನಿಖೆ ನಡೆಸಲು ಮುಂದಾಗಿದ್ದಾರೆ. ಇಬ್ಬರ ನಡುವೆ ಪ್ರೇಮ-ಪ್ರಣಯವಿತ್ತೇ ಅಥವಾ ಬರೀ ಗೆಳೆತನವಿತ್ತೇ ಎಂದೂ ಪೊಲೀಸರು ಪರಿಶೀಲನೆ ನಡೆಸಲಿದ್ದು, ಅಭಿಷೇಕ್ ತನಿಖೆಗೆ ಸಹಕಾರ ನೀಡದಿದ್ದರೆ ಬಂಧನಕ್ಕೆ ಒಳಗಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಹೈದರಾಬಾದ್ ಮೂಲದ ತಾನಿಯಾ ಮಾಡೆಲಿಂಗ್ ಜತೆಗೆ ಫ್ಯಾಷನ್ ಡಿಸೈನಿಂಗ್ನಲ್ಲೂ ಕೆಲಸ ಮಾಡುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ 10 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ ಮತ್ತು ಅಭಿಷೇಕ್ ಜತೆಗಿರುವ ಕೆಲ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ನಲ್ಲಿ ಇದುವರೆಗೆ 47 ಪಂದ್ಯ ಆಡಿರುವ ಅಭಿಷೇಕ್ 4 ಅರ್ಧಶತಕ ಸಹಿತ 893 ರನ್ ಬಾರಿಸಿದ್ದಾರೆ ಮತ್ತು 9 ವಿಕೆಟ್ ಕಬಳಿಸಿದ್ದಾರೆ. ಅವರು ಸದ್ಯ ಸನ್ರೈಸರ್ಸ್ ಜತೆಗೆ ವಾರ್ಷಿಕ 6.5 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿದ್ದಾರೆ.