ರಣಜಿ ಟ್ರೋಫಿ: ಕರ್ನಾಟಕದ ದಾಳಿಗೆ ಪಂಜಾಬ್​ ಪಂಚರ್​; ಮಯಾಂಕ್​ ಪಡೆಗೆ ಮೊದಲ ದಿನವೇ ಇನಿಂಗ್ಸ್ ಮುನ್ನಡೆ

web ranji 1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಾಸುಕಿ ಕೌಶಿಕ್​ (16ಕ್ಕೆ 4) ಸಹಿತ ತ್ರಿವಳಿ ವೇಗಿಗಳ ಮಾರಕ ದಾಳಿ ಮತ್ತು ಯುವ ಬ್ಯಾಟರ್​ ಆರ್​. ಸ್ಮರಣ್​ (83*ರನ್​, 100 ಎಸೆತ, 12 ಬೌಂಡರಿ, 1 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದಲ್ಲಿ ಪ್ರವಾಸಿ ಪಂಜಾಬ್​ ಎದುರು ಮೊದಲ ದಿನವೇ ಇನಿಂಗ್ಸ್​ ಮುನ್ನಡೆ ಸಾಧಿಸಿದೆ. ಈ ಮೂಲಕ ವಿಜಯ್​ ಹಜಾರೆ ಟ್ರೋಫಿಯ ಅಮೋಘ ಲಯವನ್ನು ಮುಂದುವರಿಸಿರುವ ಮಯಾಂಕ್​ ಅಗವಾಲ್​ ಪಡೆ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ತನ್ನ 6ನೇ ಲೀಗ್​ ಪಂದ್ಯದಲ್ಲಿ ಕರ್ನಾಟಕ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ನಿರ್ಧಾರ ಅದ್ಭುತ ಯಶಸ್ಸು ತಂದುಕೊಟ್ಟಿತು. ನಾಯಕ ಶುಭಮಾನ್​ ಗಿಲ್​ (4) ಸಹಿತ ಪಂಜಾಬ್​ ಬ್ಯಾಟರ್​ಗಳು ರಾಜ್ಯದ ವೇಗಿಗಳ ದಾಳಿಗೆ ದಯನೀಯ ವೈಫಲ್ಯ ಅನುಭವಿಸಿದರು. ಇದರೊಂದಿಗೆ ಪಂಜಾಬ್​ 29 ಓವರ್​ಗಳಲ್ಲೇ ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ ದಿನದಂತ್ಯಕ್ಕೆ 50 ಓವರ್​ಗಳಲ್ಲಿ 4 ವಿಕೆಟ್​ಗೆ 199 ರನ್​ ಗಳಿಸಿದೆ. ಕರ್ನಾಟಕ ಸದ್ಯ 144 ರನ್​ ಮುನ್ನಡೆಯಲ್ಲಿದೆ. ಶತಕದತ್ತ ಸಾಗಿರುವ ಸ್ಮರಣ್​ ಜತೆಗೆ ಅಭಿನವ್​ ಮನೋಹರ್​ (1*) ಕ್ರೀಸ್​ನಲ್ಲಿದ್ದಾರೆ.

ಸ್ಮರಣ್​ ಆಸರೆ

ವಿಜಯ್​ ಹಜಾರೆ ಟ್ರೋಫಿ ಫೈನಲ್​ನಲ್ಲಿ ಶತಕ ಸಿಡಿಸಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಆರ್​. ಸ್ಮರಣ್​ ರಣಜಿಯಲ್ಲೂ ಅದೇ ಾಮ್​ರ್ ಮುಂದುವರಿಸಿದರು. ಆರಂಭಿಕರಾದ ಅನೀಶ್​ ಕೆವಿ (33) ಮತ್ತು ನಾಯಕ ಮಯಾಂಕ್​ ಅಗರ್ವಾಲ್​ (20) ಮೊದಲ ವಿಕೆಟ್​ಗೆ 55 ರನ್​ ಸೇರಿಸಿ 4 ರನ್​ ಅಂತರದಲ್ಲಿ ಔಟಾದರು. ನಂತರದಲ್ಲಿ ಸ್ಮರಣ್​ ಇನಿಂಗ್ಸ್​ಗೆ ಆಸರೆಯಾಗಿ ನಿಂತರು. ದೇವದತ್​ ಪಡಿಕ್ಕಲ್​ (27) ಜತೆಗೆ 3ನೇ ವಿಕೆಟ್​ಗೆ 52 ರನ್​ ಮತ್ತು ಕೆಎಲ್​ ಶ್ರೀಜಿತ್​ (26) ಜತೆಗೆ 4ನೇ ವಿಕೆಟ್​ಗೆ 81 ರನ್​ ಸೇರಿಸಿದ 21 ವರ್ಷದ ಸ್ಮರಣ್​, ರಣಜಿಯಲ್ಲಿ ಚೊಚ್ಚಲ ಶತಕದ ನಿರೀೆಯಲ್ಲಿದ್ದಾರೆ. ರಣಜಿ ಮೊದಲ ಚರಣದಲ್ಲಿ ಆಡಿದ 5 ಪಂದ್ಯಗಳ 7 ಇನಿಂಗ್ಸ್​ಗಳಲ್ಲಿ ಸ್ಮರಣ್​ ಅರ್ಧಶತಕವೂ ಇಲ್ಲದೆ 145 ರನ್​ ಮಾತ್ರ ಗಳಿಸಿದ್ದರು.

ವೇಗಿಗಳ ದಾಳಿಗೆ ಪಂಜಾಬ್​ ತತ್ತರ

ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿಯ ಅದ್ಭುತ ಫಾರ್ಮ್​ಅನ್ನು ರಣಜಿಯಲ್ಲೂ ಮುಂದುವರಿಸಿದ ವಾಸುಕಿ ಕೌಶಿಕ್​ಗೆ ಎಡಗೈ ವೇಗಿ ಅಭಿಲಾಷ್​ ಶೆಟ್ಟಿ (19ಕ್ಕೆ 3) ಮತ್ತು ಅನುಭವಿ ಪ್ರಸಿದ್ಧ ಕೃಷ್ಣ (11ಕ್ಕೆ 2) ಕೂಡ ಉತ್ತಮ ಬೆಂಬಲ ಒದಗಿಸಿದರು. ಇದರಿಂದಾಗಿ ಪಂಜಾಬ್​ ಅರ್ಧಶತಕದ ಗಡಿ ದಾಟುವಷ್ಟರಲ್ಲೇ ಸುಸ್ತಾಯಿತು. ಅಭಿಲಾಷ್​ ಎಸೆದ ಪಂದ್ಯದ 4ನೇ ಓವರ್​ನಲ್ಲಿ ಶುಭಮಾನ್​ ಗಿಲ್​ (4) ಕೀಪರ್​ ಶ್ರೀಜಿತ್​ಗೆ ಕ್ಯಾಚ್​ ನೀಡಿ ಔಟಾದರು. ನಂತರ ಪಂಜಾಬ್​ 17 ರನ್​ ಅಂತರದಲ್ಲಿ 6 ವಿಕೆಟ್​ ಕಳೆದುಕೊಂಡು ದಿಢೀರ್​ ಕುಸಿತ ಕಂಡಿತು. ಪ್ರವಾಸಿ ತಂಡದ ಇತರ ಪ್ರಮುಖ ಬ್ಯಾಟರ್​ಗಳಾದ ಪ್ರಭ್​ಸಿಮ್ರನ್​ ಸಿಂಗ್​ (6), ಅನ್ಮೋಲ್​ಪ್ರೀತ್​ ಸಿಂಗ್​ (0), ರಮಣ್​ದೀಪ್​ ಸಿಂಗ್​ (16) ರಾಜ್ಯದ ವೇಗಿಗಳ ದಾಳಿಗೆ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಶಕ್ತರಾಗಲಿಲ್ಲ. ರಮಣ್​ದೀಪ್​ ಮತ್ತು ಮಯಾಂಕ್​ ಮಾರ್ಕಂಡೆ (12) 7ನೇ ವಿಕೆಟ್​ಗೆ 18 ರನ್​ ಸೇರಿಸಿದ್ದೇ ಪಂಜಾಬ್​ ಇನಿಂಗ್ಸ್​ನ ಅತಿದೊಡ್ಡ ಜತೆಯಾಟವೆನಿಸಿತು. ಪಂಜಾಬ್​ನ ಕೊನೇ 4 ವಿಕೆಟ್​ 9 ರನ್​ ಅಂತರದಲ್ಲಿ ಉರುಳಿತು. ಇದರಿಂದ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ ಮೊದಲ ಇನಿಂಗ್ಸ್​ನಲ್ಲಿ ಬೌಲಿಂಗ್​ಗೆ ಇಳಿಯುವ ಅಗತ್ಯವೇ ಬರಲಿಲ್ಲ.

ಪಂಜಾಬ್​: 29 ಓವರ್​ಗಳಲ್ಲಿ 55 (ಪ್ರಭ್​ಸಿಮ್ರನ್​ 6, ಗಿಲ್​ 4, ಅನ್ಮೋಲ್​ಪ್ರೀತ್​ 0, ರಮಣ್​ದೀಪ್​ 16, ಮಾರ್ಕಂಡೆ 12, ಕೌಶಿಕ್​ 16ಕ್ಕೆ 4, ಅಭಿಲಾಷ್​ 19ಕ್ಕೆ 3, ಪ್ರಸಿದ್ಧ ಕೃಷ್ಣ 11ಕ್ಕೆ 2, ಪರಂತಾಪ್​ 3ಕ್ಕೆ 1), ಕರ್ನಾಟಕ: 50 ಓವರ್​ಗಳಲ್ಲಿ 4 ವಿಕೆಟ್​ಗೆ 199 (ಅನೀಶ್​ 33, ಮಯಾಂಕ್​ 20, ಪಡಿಕ್ಕಲ್​ 27, ಸ್ಮರಣ್​ 83, ಶ್ರೀಜಿತ್​ 26, ಗುರ್​ನೂರ್​ 74ಕ್ಕೆ 1, ಆರಾಧ್ಯ ಶುಕ್ಲಾ 29ಕ್ಕೆ 1, ಸನ್ವೀರ್​ 38ಕ್ಕೆ 1, ಮಾರ್ಕಂಡೆ 6ಕ್ಕೆ 1).

6: ಕರ್ನಾಟಕ ತಂಡ 6 ವರ್ಷಗಳ ಬಳಿಕ ನಾಲ್ವರು ವೇಗಿಗಳೊಂದಿಗೆ (ಕೌಶಿಕ್​, ಪ್ರಸಿದ್ಧ, ಅಭಿಲಾಷ್​, ಪರಂತಾಪ್​) ಕಣಕ್ಕಿಳಿಯಿತು. ಈ ಮುನ್ನ 2018-19ರಲ್ಲಿ ಕೊನೆಯದಾಗಿ ವಿದರ್ಭ ಎದುರು ನಾಲ್ವರು ವೇಗಿಗಳನ್ನು (ವಿನಯ್​, ಮಿಥುನ್​, ಪ್ರಸಿದ್ಧ, ಬಿನ್ನಿ) ಆಡಿಸಿತ್ತು.

46: ಇದು ರಣಜಿ ಟ್ರೋಫಿ ಪಂಜಾಬ್​ ತಂಡದ 2ನೇ ಕನಿಷ್ಠ ಮೊತ್ತವಾಗಿದೆ ಮತ್ತು ಕಳೆದ 46 ವರ್ಷಗಳಲ್ಲೇ ಅದರ ಕನಿಷ್ಠ ಮೊತ್ತವಾಗಿದೆ. 1978ರಲ್ಲಿ ಹರಿಯಾಣ ಎದುರು 42 ರನ್​ಗಳಿಗೆ ಆಲೌಟ್​ ಆಗಿದ್ದು ಅತ್ಯಂತ ಕನಿಷ್ಠವೆನಿಸಿದೆ.

55: ಹಾಲಿ 2024-25ರ ಸಾಲಿನ ರಣಜಿ ಟ್ರೋಫಿಯಲ್ಲಿ ಇದು ತಂಡವೊಂದರ ಕನಿಷ್ಠ ಮೊತ್ತವಾಗಿದೆ. ಜಮ್ಮು&ಕಾಶ್ಮೀರ ವಿರುದ್ಧ ಸರ್ವೀಸಸ್​ 71 ರನ್​ಗಳಿಗೆ ಆಲೌಟ್​ ಆಗಿದ್ದು ಹಿಂದಿನ ಕನಿಷ್ಠ.

2: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯವೊಂದರಲ್ಲಿ ಇದು 2ನೇ ಕನಿಷ್ಠ ಮೊತ್ತವಾಗಿದೆ. 2015ರಲ್ಲಿ ಕರ್ನಾಟಕದ ಎದುರು ಮುಂಬೈ 44 ರನ್​ಗಳಿಗೆ ಕುಸಿದಿದ್ದು ಕನಿಷ್ಠವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net