ನವದೆಹಲಿ: ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ ಮತ್ತು ಆಯ್ಕೆ ಸಮಿತಿ ಸಭೆಯಲ್ಲಿ 4 ಗೋಡೆಗಳ ಒಳಗೆ ನಡೆದ ಚರ್ಚೆಗಳೆಲ್ಲ ಬಹಿರಂಗಗೊಳ್ಳುತ್ತಿರುವ ನಡುವೆ, ಅವಳಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ತನ್ನ ಯೋಜನೆಯ ಪ್ರಕಾರವೇ ಸದ್ದಿಲ್ಲದೆ ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ. ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದನ್ನು 48 ಗಂಟೆಗಳ ಕಾಲ ಗೌಪ್ಯವಾಗಿಟ್ಟಿದ್ದಲ್ಲದೆ, ನೀರಜ್ ಭಾನುವಾರ ಸ್ವತಃ ಇದರ ಘೋಷಣೆ ಮಾಡುವವರೆಗೆ ಮಾಧ್ಯಮಗಳಿಗೆ ಈ ಸುದ್ದಿ ತಲುಪಿರಲಿಲ್ಲ!

ನೀರಜ್ ವಿವಾಹದ ಸುದ್ದಿಯನ್ನು ಹೊರಜಗತ್ತಿನಿಂದ ಮುಚ್ಚಿಡುವಲ್ಲಿ ಅವರ ಮತ್ತು ಹಿಮಾನಿ ಕುಟುಂಬ ಮಾತ್ರವಲ್ಲದೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟವೂ ಯಶಸ್ವಿಯಾಗಿದೆ. ಜತೆಗೆ ನೀರಜ್ ಆಪ್ತ ಗೆಳೆಯರಿಗೂ ಈ ವಿಷಯ ಗೊತ್ತಿದ್ದರೂ, ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಜನಪ್ರಿಯ ಸೆಲೆಬ್ರಿಟಿಗಳು ಖಾಸಗಿತನ ಕಾಪಾಡಲು ಪರದಾಡುತ್ತಿರುವ ನಡುವೆ 27 ವರ್ಷದ ನೀರಜ್ “ಸೀಕ್ರೆಟ್ ವಿವಾಹ’ ಬೆರಗು ಮೂಡಿಸಿದೆ.
ಹಿಮಾಚಲ ಪ್ರದೇಶದ ಗೌಪ್ಯ ತಾಣವೊಂದರಲ್ಲಿ ಜ.16ರಂದು ನೀರಜ್ ಚೋಪ್ರಾ ವಿವಾಹ ಸಮಾರಂಭ ನಡೆದಿತ್ತು. ವಿವಾಹದಲ್ಲಿ 2 ಕುಟುಂಬದ ಸದಸ್ಯರಷ್ಟೇ ಇರಬೇಕೆಂಬುದು ನೀರಜ್ ಬಯಕೆಯಾಗಿತ್ತು. ನವದಂಪತಿ ಈಗಾಗಲೆ ಹನಿಮೂನ್ಗಾಗಿ ವಿದೇಶಕ್ಕೂ ಪ್ರಯಾಣಿಸಿದೆ ಎಂದು ನೀರಜ್ ಚಿಕ್ಕಪ್ಪ ಭೀಮ್ ಚೋಪ್ರಾ ತಿಳಿಸಿದ್ದಾರೆ.
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಜತೆಗೆ ಟೆನಿಸ್ ಆಟಗಾರ್ತಿ ಮತ್ತು ಕೋಚ್ ಆಗಿರುವ ಹಿಮಾನಿ ಮತ್ತು ನೀರಜ್ಗೆ ಮೊದಲಿನಿಂದಲೂ ಪರಿಚಯವಿತ್ತು. ಇಬ್ಬರ ಕುಟಂಬವೂ 2 ವರ್ಷಗಳಿಂದ ಆಪ್ತವಾಗಿತ್ತು. ವಿವಾಹದ ಸಿದ್ಧತೆ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿತ್ತು. ಆದರೆ ನೀರಜ್ ಸೂಚನೆಯಂತೆ ಎಲ್ಲವನ್ನೂ ಮಾಧ್ಯಮಗಳಿಂದ ಮುಚ್ಚಿಡಲಾಗಿತ್ತು ಎಂದು ಭೀಮ್ ಚೋಪ್ರಾ ವಿವರಿಸಿದ್ದಾರೆ.
ಮೂರು ತಿಂಗಳ ನಂತರ ಅಥ್ಲೆಟಿಕ್ಸ್ ಋತು ಶುರುವಾದಾಗ ನೀರಜ್ ಮರಳಿ ಕಣಕ್ಕಿಳಿಯಲಿದ್ದು, ಡೈಮಂಡ್ ಲೀಗ್ ಜತೆಗೆ ವಿಶ್ವ ಚಾಂಪಿಯನ್ಷಿಪ್ ಅವರ ಮುಂದಿರುವ ಪ್ರಮುಖ ಸವಾಲು ಆಗಿವೆ.
ಸಿಕ್ಸರ್ ವೀರ ಕ್ರಿಕೆಟರ್ ರಿಂಕು ಸಿಂಗ್ಗೆ ಸಂಸದೆ ಪ್ರಿಯಾ ಸರೋಜ್ ಬೌಲ್ಡ್! ನಿಶ್ಚಿತಾರ್ಥದ ಸುದ್ದಿ ವೈರಲ್…