Ranji Trophy: ಇಂದಿನಿಂದ ಕರ್ನಾಟಕ-ಕೇರಳ ಫೈಟ್; ಗೆಲುವಿನ ಹಂಬಲದಲ್ಲಿ ಮಯಾಂಕ್ ಅಗರ್ವಾಲ್​​ ಪಡೆ

web ranji
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮಳೆ, ಮಂದಬೆಳಕಿನ ಅಡಚಣೆ ಮತ್ತು ಪ್ರಮುಖ ಬ್ಯಾಟರ್​ಗಳ ವೈಫಲ್ಯದ ನಡುವೆ ಮೊದಲ ಪಂದ್ಯದಲ್ಲಿ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟಿರುವ ಕರ್ನಾಟಕ ತಂಡ 90ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲು ಸಜ್ಜಾಗಿದೆ. ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ಶುಕ್ರವಾರದಿಂದ ಪಂದ್ಯ ನಡೆಯಲಿದ್ದು, ಮೊದಲ ಗೆಲುವಿನ ಹಂಬಲದಲ್ಲಿರುವ ಮಯಾಂಕ್​ ಅಗರ್ವಾಲ್​ ಬಳಗಕ್ಕೆ ಮಳೆ ಅಡಚಣೆಯ ಭೀತಿಯೂ ಇದೆ.

ಇಂದೋರ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಿಕಿನ್​ ಜೋಸ್​ ಹೊರತಾಗಿ ರಾಜ್ಯ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳೆಲ್ಲ ಬೇಗನೆ ಔಟಾಗಿ ನಿರಾಸೆ ಮೂಡಿಸಿದ್ದರು. ತವರಿನ ವಾತಾವರಣದಲ್ಲಿ ಈಗ ನಾಯಕ ಮಯಾಂಕ್​ ಅಗರ್ವಾಲ್​ ಜತೆಗೆ ಉಪನಾಯಕ ಮನೀಷ್​ ಪಾಂಡೆ, ದೇವದತ್​ ಪಡಿಕ್ಕಲ್​, ಆರ್​. ಸ್ಮರಣ್​ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬಬೇಕಾಗಿದೆ. ಇನ್ನು ಕೇರಳ ತಂಡದಿಂದ ಮರಳಿರುವ ಶ್ರೇಯಸ್​ ಗೋಪಾಲ್​ ಉಪಯುಕ್ತ ಅರ್ಧಶತಕ ಸಿಡಿಸಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದರೂ, ಬೌಲಿಂಗ್​ನಲ್ಲಿ 30 ಓವರ್​ ಎಸೆದರೂ ಒಂದೂ ವಿಕೆಟ್​ ಕಬಳಿಸಿರಲಿಲ್ಲ. ಇದರಿಂದ ರಾಜ್ಯ ತಂಡದ ಸ್ಪಿನ್​ ವಿಭಾಗದ ದೌರ್ಬಲ್ಯ ಹಾಗೆಯೇ ಉಳಿದುಕೊಂಡಿದೆ. ಈ ಬಾರಿ ಕೇರಳ ವಿರುದ್ಧವಾದರೂ ಶ್ರೇಯಸ್​ ಬೌಲಿಂಗ್​ನಲ್ಲಿ ಕಮಾಲ್​ ತೋರಿಸಬೇಕಿದೆ. ರಾಜ್ಯ ತಂಡ ಶ್ರೀ ಲಯಕ್ಕೆ ಮರಳಿ ಪೂರ್ಣ ಅಂಕ ಕಲೆಹಾಕದಿದ್ದರೆ ನಾಕೌಟ್​ ಹಂತಕ್ಕೇರುವ ಹಾದಿ ಕಠಿಣವಾಗಲಿದೆ.

ಆರಂಭ: ಬೆಳಗ್ಗೆ 9.30

ಎಲ್ಲಿ: ಕೆಎಸ್​ಸಿಎ ಮೈದಾನ, ಆಲೂರು

ಪ್ರಸಿದ್ಧ ಕೃಷ್ಣ ಗೈರು

ಮೊದಲ ಪಂದ್ಯದಲ್ಲಿ ಕೇವಲ 8 ಓವರ್​ ಬೌಲಿಂಗ್​ ಮಾಡಿ ಗಾಯದಿಂದಾಗಿ ಮೈದಾನ ತೊರೆದಿದ್ದ ವೇಗಿ ಪ್ರಸಿದ್ಧ ಕೃಷ್ಣ, ಮೀಸಲು ಆಟಗಾರರಾಗಿ ಭಾರತ ಟೆಸ್ಟ್​ ತಂಡವನ್ನು ಕೂಡಿಕೊಂಡಿರುವುದರಿಂದ ರಾಜ್ಯ ತಂಡದ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಬೇರೆಯವರನ್ನು ಸೇರ್ಪಡೆಗೊಳಿಸದ ಕಾರಣ ರಾಜ್ಯ ತಂಡದ ಬಲ 16ರಿಂದ 15ಕ್ಕೆ ಇಳಿದಿದೆ. ಉಳಿದಂತೆ ತಂಡದಲ್ಲಿ ಬೇರಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಸ್ಥಾವನ್ನು ಅಭಿಲಾಷ್​ ಶೆಟ್ಟಿ ಅಥವಾ ವಿದ್ಯಾಧರ್​ ಪಾಟೀಲ್​ ತುಂಬುವ ಸಾಧ್ಯತೆ ಇದೆ.

ಕೇರಳಕ್ಕೆ ಸ್ಯಾಮ್ಸನ್​ ಬಲ

ಮೊದಲ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆದ್ದ ವಿಶ್ವಾಸದಲ್ಲಿರುವ ಕೇರಳ ತಂಡಕ್ಕೆ ಈ ಬಾರಿ ಅನುಭವಿ ವಿಕೆಟ್​ ಕೀಪರ್​&ಬ್ಯಾಟರ್​ ಸಂಜು ಸ್ಯಾಮ್ಸನ್​ ಸೇರ್ಪಡೆಯ ಬಲವಿದೆ. ಬಾಂಗ್ಲಾದೇಶ ವಿರುದ್ಧದ ಕೊನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ಸ್ಯಾಮ್ಸನ್​ ಆಗಮಿಸಿದ್ದರೂ, ಸಚಿನ್​ ಬೇಬಿ ಕೇರಳ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ತಮಿಳುನಾಡಿನಿಂದ ವಲಸೆ ಬಂದಿರುವ ಬಾಬಾ ಅಪರಾಜಿತ್​, ವಿದರ್ಭದಿಂದ ವಲಸೆ ಬಂದಿರುವ ಆದಿತ್ಯ ಸರ್ವಾಟೆ, ಮಧ್ಯಪ್ರದೇಶದಿಂದ ವಲಸೆ ಬಂದಿರುವ ಜಲಜ್​ ಸಕ್ಸೇನಾ ಜತೆಗೆ ರೋಹನ್​ ಕುನ್ನುಮಲ್​, ವಿಷ್ಣು ವಿನೋದ್​, ಬಸಿಲ್​ ಥಂಪಿ ಮತ್ತು ಮೊಹಮದ್​ ಅಜರುದ್ದೀನ್​ ಕೇರಳ ತಂಡದ ಇತರ ಪ್ರಮುಖ ಆಟಗಾರರಾಗಿದ್ದಾರೆ.

ಮಳೆ ಭೀತಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದಂತೆ ರಣಜಿ ಪಂದ್ಯವೂ ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಕರ್ನಾಟಕ&ಕೇರಳ ಪಂದ್ಯದ ನಾಲ್ಕೂ ದಿನ ಮಳೆ ಅಡಚಣೆ ತರುವ ಭೀತಿ ಇದೆ. 2 ದಿನಗಳ ಕಾಲ ನಿರಂತರವಾಗಿ ಸುರಿದ ಜಡಿಮಳೆಯೂ ಪಿಚ್​ ತಯಾರಿಗೆ ಹಿನ್ನಡೆ ತಂದಿದ್ದು, ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸುವುದು ಕೂಡ ಸವಾಲೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net