RANJI TROPHY: ವಿದರ್ಭಕ್ಕೆ ಕನ್ನಡಿಗರ ಲಕ್​! ಅಂದು ಗಣೇಶ್​ ಸತೀಶ್​, ಇಂದು ಕರುಣ್​ ನಾಯರ್​!

web karun
Published on

ಬೆಂಗಳೂರು: ಕರ್ನಾಟಕದ ಆಟಗಾರರು ವಲಸೆ ಹೋಗಿ ಆಡಿದಾಗ ವಿದರ್ಭ ತಂಡ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ವಿದರ್ಭ ತಂಡ 2017-18 ಹಾಗೂ 2018-19ರಲ್ಲಿ ಪ್ರಶಸ್ತಿ ಗೆದ್ದಾಗ ಕನ್ನಡಿಗ ಗಣೇಶ್​ ಸತೀಶ್​ ಪ್ರಮುಖ ಪಾತ್ರವವಹಿಸಿದ್ದರು. ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಲು ಕರುಣ್​ ನಾಯರ್​ ಕೊಡುಗೆ ಪ್ರಮುಖ ಪಾತ್ರ ವಹಿಸಿದೆ.

ಕಳೆದ ವರ್ಷ ವಿದರ್ಭ ತಂಡಕ್ಕೆ ವಲಸೆ ಹೋಗಿದ್ದ 33 ವರ್ಷದ ಕರುಣ್​ ನಾಯರ್​ ಪಾಲಿಗೆ ಇದು ವೈಯಕ್ತಿಕ ಮೂರನೇ ರಣಜಿ ಟ್ರೋಫಿ ಎನಿಸಿದೆ. ಇದಕ್ಕೂ ಮುನ್ನ 2013-14, 2014-15ರಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದರು. ಹಾಲಿ ಋತುವಿನಲ್ಲಿ ರನ್​ ಹೊಳೆಯನ್ನೆ ಹರಿಸಿರುವ ಕರುಣ್​ ನಾಯರ್​, ಒಟ್ಟಾರೆ 1,897 ರನ್​ ಕಲೆಹಾಕಿದ್ದಾರೆ. ರಣಜಿಯಲ್ಲಿ 4 ಶತಕ, 2 ಅರ್ಧಶತಕ ಸಹಿತ 860 ರನ್​, ವಿಜಯ್​ ಹಜಾರೆ ಟ್ರೋಫಿಯಲ್ಲಿ 5 ಶತಕ, 1 ಅರ್ಧಶತಕ ಸೇರಿ 779 ರನ್​ ಹಾಗೂ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ 3 ಅರ್ಧಶತಕ ಸಹಿತ 255 ರನ್​ ಬಾರಿಸಿದ್ದಾರೆ. ಇದರ ಜತೆಗೆ ಕೆಎಸ್​ಸಿಎ ಮಹಾರಾಜ ಟ್ರೋಫಿಯಲ್ಲಿ ಮೈಸೂರ್​ ವಾರಿಯರ್ಸ್​ ತಂಡದ ನಾಯತ್ವವಹಿಸಿಕೊಂಡು ಪ್ರಶಸ್ತಿ ಗೆದ್ದುಕೊಟ್ಟಿದ್ದರು.

8 ಒಟ್ಟು ಕೋಟಿ ಬಹುಮಾನ

ಐದು ವರ್ಷಗಳ ಬಳಿಕ ಮರಳಿ ರಣಜಿ ಟ್ರೋಫಿ ಜಯಿಸಿರುವ ಚಾಂಪಿಯನ್​ ವಿದರ್ಭ ತಂಡ ಬಿಸಿಸಿಐನಿಂದ 5 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದುಕೊಂಡಿತು. ಜತೆಗೆ ವಿದರ್ಭ ಕ್ರಿಕೆಟ್​ ಸಂಸ್ಥೆ 3 ಕೋಟಿ ರೂ. ಬಹುಮಾನ ಘೋಷಿಸಿದೆ. ರನ್ನರ್​ ಅಪ್​ ಕೇರಳ ತಂಡ 3 ಕೋಟಿ ರೂ. ನಗದು ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net