ಇಂದಿನಿಂದ ರಣಜಿ ಟ್ರೋಫಿ: ನೀಗುವುದೇ ಕರ್ನಾಟಕದ 10 ವರ್ಷಗಳ ಪ್ರಶಸ್ತಿ ಬರ?

web ranji
Published on

ಬೆಂಗಳೂರು: ಪ್ರತಿಷ್ಠಿತ ಪ್ರಥಮ ದರ್ಜೆ ದೇಶೀಯ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ 90ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ದುಲೀಪ್​ ಟ್ರೋಫಿ, ಇರಾನಿ ಟ್ರೋಫಿ ಮೂಲಕ ದೇಶೀಯ ಕ್ರಿಕೆಟ್​ ಹಬ್ಬ ಈಗಾಗಲೆ ಶುರುವಾಗಿದ್ದು, ಶುಕ್ರವಾರದಿಂದ ಇನ್ನಷ್ಟು ಮೆರುಗು ಪಡೆದುಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ಭಾರತ ಹಲವು ಟೆಸ್ಟ್​ ಪಂದ್ಯಗಳನ್ನು ಆಡಲಿರುವುದರಿಂದ ಯುವ ಕ್ರಿಕೆಟಿಗರಿಗೆ ಆಯ್ಕೆಗಾರರ ಗಮನಸೆಳೆಯಲು ಉತ್ತಮ ಅವಕಾಶವೆನಿಸಿದೆ. 42 ಬಾರಿಯ ಚಾಂಪಿಯನ್​ ಮುಂಬೈ ಹಾಲಿ ಚಾಂಪಿಯನ್​ ಆಗಿ ಅಭಿಯಾನ ಆರಂಭಿಸಲಿದ್ದರೆ, 8 ಬಾರಿಯ ಚಾಂಪಿಯನ್​ ಕರ್ನಾಟಕ ತಂಡ 10 ವರ್ಷಗಳ ಬಳಿಕ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ. ಬಾರ್ಡರ್​-ಗಾವಸ್ಕರ್​ ಟ್ರೋಫಿಗೆ ಪೂರ್ವಭಾವಿಯಾಗಿ ಭಾರತ ಎ ತಂಡ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ರೆಡ್​ಬಾಲ್​ ತಂಡದಲ್ಲೂ ಸ್ಥಾನ ಸಂಪಾದಿಸಲು ಆಟಗಾರರು ಪ್ರಯತ್ನಿಸಬಹುದಾಗಿದೆ.

ಕಳೆದ ಆವೃತ್ತಿಯಲ್ಲಿ ಲೀಗ್​ ಪಂದ್ಯಗಳ ನಡುವೆ ಕೇವಲ 3 ದಿನಗಳ ಬಿಡುವು ನೀಡಿದ್ದರಿಂದ ಗಾಯ ಮತ್ತು ಬಳಲಿಕೆಯ ಸಮಸ್ಯೆ ಕಾಡಿತ್ತು. ಈ ಸಂಬಂಧ ಮುಂಬೈ ವೇಗಿ ಶಾರ್ದೂಲ್​ ಠಾಕೂರ್​ ಸಹಿತ ಕೆಲ ಪ್ರಮುಖ ಆಟಗಾರರಿಂದ ದೂರುಗಳೂ ಬಂದಿದ್ದವು. ಇದರ ಹಿನ್ನೆಲೆಯಲ್ಲಿ ಈ ಬಾರಿ ಪಂದ್ಯಗಳ ನಡುವೆ ಕನಿಷ್ಠ 4 ದಿನಗಳ ಬಿಡುವು ನೀಡಲಾಗಿದೆ.

10 ವರ್ಷಗಳ ಬರ ನೀಗುವುದೇ ಕರ್ನಾಟಕ?

ಮಯಾಂಕ್​ ಅಗರ್ವಾಲ್​ ಸಾರಥ್ಯದ ಕರ್ನಾಟಕ ತಂಡ ಇಂದೋರ್​ನಲ್ಲಿ ಆತಿಥೇಯ ಮಧ್ಯಪ್ರದೇಶ ವಿರುದ್ಧ ಅಭಿಯಾನ ಆರಂಭಿಸಲಿದ್ದು, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ರಾಜ್ಯ ತಂಡ ಅನುಭವಿ&ಯುವ ಆಟಗಾರರ ಉತ್ತಮ ಮಿಶ್ರಣದೊಂದಿಗೆ ಆತ್ಮವಿಶ್ವಾಸದಲ್ಲಿದೆ. ಆಲ್ರೌಂಡರ್​ ಶ್ರೇಯಸ್​ ಗೋಪಾಲ್​ ಮತ್ತೆ ರಾಜ್ಯ ತಂಡಕ್ಕೆ ಮರಳಿರುವುದರಿಂದ ಈ ಬಾರಿ ಸ್ಪಿನ್​ ವಿಭಾಗಕ್ಕೆ ಹೆಚ್ಚಿನ ಬಲ ಲಭಿಸಿದೆ.

ಮಧ್ಯಪ್ರದೇಶ ಜತೆಗೆ ಬಂಗಾಳ, ಉತ್ತರ ಪ್ರದೇಶ, ಪಂಜಾಬ್​, ಹರಿಯಾಣದಂಥ ಬಲಿಷ್ಠ ತಂಡಗಳನ್ನು ಒಳಗೊಂಡ ಗುಂಪಿನಲ್ಲಿ ರಾಜ್ಯ ತಂಡ ಇರುವುದರಿಂದ ನಾಕೌಟ್​ ಪ್ರವೇಶಿಸಲು ಬಲಿಷ್ಠ ನಿರ್ವಹಣೆ ಅಗತ್ಯವೆನಿಸಿದೆ. ಮಾಜಿ ನಾಯಕ ಮನೀಷ್​ ಪಾಂಡೆ ಈ ಬಾರಿ ಉಪನಾಯಕತ್ವ ಪಡೆದುಕೊಂಡಿದ್ದು, ಹೆಚ್ಚಿನ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ. ಆರ್​ ಸಮರ್ಥ್​ ಈ ಬಾರಿ ವಲಸೆ ಹೋಗಿರುವ ನಡುವೆ, ದೇವದತ್​ ಪಡಿಕ್ಕಲ್​, ನಿಕಿನ್​ ಜೋಸ್​ ಅವರಿಂದಲೂ ರಾಜ್ಯ ಬ್ಯಾಟಿಂಗ್​ ವಿಭಾಗಕ್ಕೆ ಹೆಚ್ಚಿನ ಕೊಡುಗೆ ಸಿಗಬೇಕಾಗಿದೆ. ಸಿಕೆ ನಾಯ್ಡು ಟ್ರೋಫಿಯಲ್ಲಿ ರಾಜ್ಯದ 23 ವಯೋಮಿತಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಬಳಿಕ ಯೆರೆ ಗೌಡ ಈ ಬಾರಿ ಸೀನಿಯರ್​ ತಂಡದ ಕೋಚ್​ ಆಗಿ ಮರಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸ್ಪಿನ್ನರ್​ಗಳ ವೈಲ್ಯ ರಾಜ್ಯ ತಂಡಕ್ಕೆ ತೀವ್ರ ಹಿನ್ನಡೆ ತಂದಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ಕೇರಳಕ್ಕೆ ವಲಸೆ ಹೋಗಿದ್ದ 31 ವರ್ಷದ ಶ್ರೇಯಸ್​ ಗೋಪಾಲ್​ ಈ ಬಾರಿ ಮರಳಿರುವುದರಿಂದ ರಾಜ್ಯ ತಂಡದ ಸ್ಪಿನ್​ ಬೌಲಿಂಗ್​ ವಿಭಾಗ ಮತ್ತೆ ಬಲ ಪಡೆದುಕೊಂಡಿದೆ. ಕಳೆದ ಋತುವಿನಲ್ಲಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ 30 ವಿಕೆಟ್​ ಕಬಳಿಸುವ ಮೂಲಕ ಕರ್ನಾಟಕ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ 20 ವರ್ಷದ ಆಫ್​-ಸ್ಪಿನ್ನರ್​ ಮೊಹ್ಸಿನ್​ ಖಾನ್​ ಈ ಬಾರಿ ಸೀನಿಯರ್​ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ಎಡಗೈ ಸ್ಪಿನ್​ ದಾಳಿ ನಡೆಸುವ 18 ವರ್ಷದ ಆಲ್ರೌಂಡರ್​ ಹಾರ್ದಿಕ್​ ರಾಜ್ಯ ತಂಡದ 3ನೇ ಸ್ಪಿನ್ನರ್​ ಆಗಿದ್ದಾರೆ. ಜತೆಗೆ ಐವರು ವೇಗಿಗಳು ತಂಡದಲ್ಲಿದ್ದಾರೆ. ಅವರೆಂದರೆ ಅನುಭವಿ ಪ್ರಸಿದ್ಧ ಕೃಷ್ಣ, ವೈಶಾಕ್​, ವಿ. ಕೌಶಿಕ್​, ಎಡಗೈ ವೇಗಿ ಅಭಿಲಾಷ್​ ಶೆಟ್ಟಿ ಮತ್ತು ಆಲ್ರೌಂಡರ್​ ವಿದ್ಯಾಧರ್​ ಪಾಟೀಲ್​. ಹೀಗಾಗಿ ಈ ಸಲ ರಾಜ್ಯ ಬೌಲಿಂಗ್​ ವಿಭಾಗ ಬಲಿಷ್ಠಗೊಂಡಿದೆ.

ಶುಭಂ ಶರ್ಮ ಸಾರಥ್ಯದ ಎದುರಾಳಿ ಮಧ್ಯಪ್ರದೇಶ ತಂಡ ರಜತ್​ ಪಾಟೀದಾರ್​, ಕುಮಾರ್​ ಕಾರ್ತಿಕೇಯ, ಯಶ್​ ದುಬೆ, ಆವೇಶ್​ ಖಾನ್​, ಕುಲ್ವಂತ್​ ಕೆಜ್ರೋಲಿಯಾರಂಥ ಪ್ರಮುಖ ಆಟಗಾರರನ್ನು ಹೊಂದಿರುವುದರಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಸಲಾಗಿದೆ.

ಕರ್ನಾಟಕ ತಂಡ: ಮಯಾಂಕ್​ ಅಗರ್ವಾಲ್​ (ನಾಯಕ), ಮನೀಷ್​ ಪಾಂಡೆ (ಉಪನಾಯಕ), ನಿಕಿನ್​ ಜೋಸ್​, ದೇವದತ್​ ಪಡಿಕ್ಕಲ್​, ಸ್ಮರಣ್​ ಆರ್​, ಶ್ರೇಯಸ್​ ಗೋಪಾಲ್​, ಸುಜಯ್​ ಸಾತೆರಿ (ವಿ.ಕೀ), ಹಾರ್ದಿಕ್​ ರಾಜ್​, ವೈಶಾಕ್​ ವಿಜಯ್​ಕುಮಾರ್​, ಪ್ರಸಿದ್ಧ ಕೃಷ್ಣ, ವಿ. ಕೌಶಿಕ್​, ಲವನೀತ್​ ಸಿಸೋಡಿಯಾ (ವಿ.ಕೀ), ಮೊಹ್ಸಿನ್​ ಖಾನ್​, ವಿದ್ಯಾಧರ್​ ಪಾಟೀಲ್​, ಕಿಶನ್​ ಎಸ್​. ಬಿದರೆ, ಅಭಿಲಾಷ್​ ಶೆಟ್ಟಿ.

*ಆರಂಭ: ಬೆಳಗ್ಗೆ 9.30

*ನೇರಪ್ರಸಾರ: ಜಿಯೋಸಿನಿಮಾ

ಪ್ರಮುಖರು ಕಣಕ್ಕೆ

ರಾಷ್ಟ್ರೀಯ ತಂಡದಿಂದ ಹೊರಗಿರುವ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಈಗಾಗಲೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಶಾನ್​ ಕಿಶನ್​, ಶ್ರೇಯಸ್​ ಅಯ್ಯರ್​ ಜತೆಗೆ ಋತುರಾಜ್​ ಗಾಯಕ್ವಾಡ್​, ಸಾಯಿ ಸುದರ್ಶನ್​, ಮುಕೇಶ್​ ಕುಮಾರ್​, ರಜತ್​ ಪಾಟೀದಾರ್​, ಪೃಥ್ವಿ ಷಾ ಸಹಿತ ಪ್ರಮುಖ ಆಟಗಾರರು ರಣಜಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರರಂಥ ಅನುಭವಿಗಳು 36ನೇ ವಯಸ್ಸಿನಲ್ಲೂ ಪುನರಾಗಮನಕ್ಕೆ ಪ್ರಯತ್ನಿಸುವ ನಿರೀೆ ಇದೆ.

ಗುಂಪುಗಳು:

ಎ: ಮುಂಬೈ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ, ಸರ್ವೀಸಸ್​, ಒಡಿಶಾ, ಬರೋಡ, ತ್ರಿಪುರ, ಮೇಘಾಲಯ.

ಬಿ: ರಾಜಸ್ಥಾನ, ಗುಜರಾತ್​, ಉತ್ತರಾಖಂಡ, ಹಿಮಾಚಲ ಪ್ರದೇಶ, ಆಂಧ್ರ, ಹೈದರಾಬಾದ್​, ವಿದರ್ಭ, ಪುದುಚೇರಿ.

ಸಿ: ಕರ್ನಾಟಕ, ಮಧ್ಯಪ್ರದೇಶ, ಕೇರಳ, ಬಿಹಾರ, ಹರಿಯಾಣ, ಬಂಗಾಳ, ಉತ್ತರ ಪ್ರದೇಶ, ಪಂಜಾಬ್​.

ಡಿ: ದೆಹಲಿ, ಚಂಡೀಗಢ, ರೈಲ್ವೇಸ್​, ಛತ್ತೀಸ್​ಗಢ, ಜಾರ್ಖಂಡ್​, ತಮಿಳುನಾಡು, ಅಸ್ಸಾಂ, ಸೌರಾಷ್ಟ್ರ.

ಪ್ಲೇಟ್​: ಅರುಣಾಚಲ ಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್​, ಮಿಜೋರಾಂ, ಮಣಿಪುರ, ಗೋವಾ.

ಕರ್ನಾಟಕದ ಪಂದ್ಯಗಳು

ದಿನಾಂಕ: ಎದುರಾಳಿ (ಸ್ಥಳ)

ಅ.11-14: ಮಧ್ಯಪ್ರದೇಶ (ಇಂದೋರ್​)

ಅ. 18-21: ಕೇರಳ (ಬೆಂಗಳೂರು&ಆಲೂರು)

ಅ.26-29: ಬಿಹಾರ (ಪಟನಾ)

ನ. 6-9: ಬಂಗಾಳ (ಬೆಂಗಳೂರು)

ನ.13-16: ಉತ್ತರ ಪ್ರದೇಶ (ಲಖನೌ)

ಜ. 23-26: ಪಂಜಾಬ್​ (-)

ಜ. 30-ಫೆ.2: ಹರಿಯಾಣ (-)

ಎರಡು ಹಂತಗಳಲ್ಲಿ ಟೂರ್ನಿ

ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್​ 16ರವರೆಗೆ ತಲಾ 5 ಲೀಗ್​ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್​ಬಾಲ್​ ಕ್ರಿಕೆಟ್​ ಟೂರ್ನಿಗಳು ಅಂದರೆ ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಟಿ20 (ನ. 23-ಡಿ.15) ಮತ್ತು ವಿಜಯ್​ ಹಜಾರೆ ಟ್ರೋಫಿ ಏಕದಿನ (ಡಿ.21-ಜ.18) ಟೂರ್ನಿಗಳು ನಡೆಯಲಿವೆ. ನಂತರ ಜ.23ರಿಂದ ರಣಜಿಯ ಕೊನೇ 2 ಲೀಗ್​ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 8ರಿಂದ ನಾಕೌಟ್​ ಪಂದ್ಯಗಳು ನಡೆಯಲಿವೆ. ಫೆಬ್ರವರಿ 26ರಿಂದ ಮಾರ್ಚ್​ 2ರವರೆಗೆ ನಡೆಯಲಿರುವ ಫೈನಲ್​ ಪಂದ್ಯದೊಂದಿಗೆ ಹಾಲಿ ದೇಶೀಯ ಕ್ರಿಕೆಟ್​ ಋತುವಿಗೆ ತೆರೆ ಬೀಳಲಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು 38 ತಂಡಗಳ ಪೈಕಿ ಎಲೈಟ್​ ಗುಂಪಿನಲ್ಲಿರುವ 32 ತಂಡಗಳನ್ನು ತಲಾ 8ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಉಳಿದ 6 ತಂಡಗಳು ಪ್ಲೇಟ್​ ಗುಂಪಿನಲ್ಲಿವೆ. ಎಲೈಟ್​ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್​ಗೇರಲಿವೆ. ಪ್ಲೇಟ್​ ಗುಂಪಿನ ಅಗ್ರ 2 ತಂಡಗಳು ಪ್ಲೇಟ್​ ಫೈನಲ್​ನಲ್ಲಿ ಆಡಲಿವೆ. ಇವೆರಡು ತಂಡಗಳು 2025-26ರ ಸಾಲಿನಲ್ಲಿ ಎಲೈಟ್​ ಗುಂಪಿನಲ್ಲಿ ಆಡಲಿದ್ದರೆ, ಎಲೈಟ್​ ಗುಂಪಿನ 2 ಕೊನೇ ಸ್ಥಾನಿ ತಂಡಗಳು ಮುಂದಿನ ಬಾರಿ ಪ್ಲೇಟ್​ ಗುಂಪಿಗೆ ಹಿಂಬಡ್ತಿ ಪಡೆಯಲಿವೆ.

ವಿಜೇತರಿಗೆ 5 ಕೋಟಿ ರೂ. ಬಹುಮಾನ

ರಣಜಿ ಟ್ರೋಫಿಯ ವಿಜೇತ ತಂಡ 5 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್​ಅಪ್​ ತಂಡ 3 ಕೋಟಿ ರೂ. ಗಳಿಸಲಿದೆ. ಸೆಮಿೈನಲ್​ನಲ್ಲಿ ಸೋಲುವ 2 ತಂಡಗಳು ತಲಾ 1 ಕೋಟಿ ರೂ. ಗಳಿಸಲಿವೆ. ಇನ್ನು ಟೂರ್ನಿಯಲ್ಲಿ 40ಕ್ಕಿಂತ ಹೆಚ್ಚು ಪಂದ್ಯ ಆಡಿರುವ ಅನುಭವಿ ಆಟಗಾರರು ಪ್ರತಿದಿನಕ್ಕೆ 60 ಸಾವಿರ ರೂಪಾಯಿ, 40ಕ್ಕಿಂತ ಕಡಿಮೆ&20ಕ್ಕಿಂತ ಅಧಿಕ ಪಂದ್ಯ ಆಡಿರುವ ಆಟಗಾರರು ಪ್ರತಿದಿನಕ್ಕೆ 50 ಸಾವಿರ ರೂ. ಮತ್ತು 20ಕ್ಕಿಂತ ಕಡಿಮೆ ಪಂದ್ಯ ಆಡಿರುವ ಆಟಗಾರರು ಪ್ರತಿದಿನಕ್ಕೆ 40 ಸಾವಿರ ರೂ. ವೇತನ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net