ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಸೋತ ಪಿವಿ ಸಿಂಧು!

web sindhu
Published on

ವಂತಾ (ಫಿನ್ಲೆಂಡ್​): ಪ್ಯಾರಿಸ್​ ಒಲಿಂಪಿಕ್ಸ್​ ನಿರಾಸೆಯ ಬಳಿಕ ಮೊದಲ ಬಾರಿ ಕಣಕ್ಕಿಳಿದ ಭಾರತದ ಸ್ಟಾರ್​ ಷಟ್ಲರ್​ ಪಿವಿ ಸಿಂಧು ಮೊದಲ ಪಂದ್ಯದಲ್ಲೇ ಆಘಾತ ಎದುರಿಸಿದ್ದಾರೆ. ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿವಿ ಸಿಂಧು ತರಬೇತಿ ಬಳಗದ ಬದಲಾವಣೆಯ ನಡುವೆಯೂ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಮಂಗಳವಾರ ಆರಂಭಗೊಂಡ ಆರ್ಕ್​ಟಿಕ್​ ಓಪನ್​-500 ಬ್ಯಾಡ್ಮಿಂಟನ್​ ಟೂರ್ನಿಯ ಮಹಿಳಾ ಸಿಂಗಲ್ಸ್​ನ ಆರಂಭಿಕ ಪಂದ್ಯದಲ್ಲಿ ವಿಶ್ವ ನಂ.16 ಸಿಂಧು 16-21, 10-21 ನೇರ ಗೇಮ್​ಗಳಿಂದ ವಿಶ್ವ ನಂ.32 ಕೆನಡಾ ಮಿಚೆಲ್​ ಲೀ ಎದುರು ಮುಗ್ಗರಿಸಿದರು. ಒಲಿಂಪಿಕ್ಸ್​ ನಂತರದ ಎರಡು ತಿಂಗಳ ವಿಶ್ರಾಂತಿ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ನೀರಸ ಆಟ ತೋರಿದ ಸಿಂಧು 37 ನಿಮಿಷಗಳಲ್ಲಿ ತನಗಿಂತ ಕೆಳಶ್ರೇಯಾಂಕಿತೆ ಆಟಗಾರ್ತಿಯ ಎದುರು ಸೋಲೊಪ್ಪಿಕೊಂಡರು. ಉಳಿದಂತೆ ಭಾರತದ ಉದಯೋನ್ಮುಖ ಷಟ್ಲರ್​ಗಳಾದ ಮಾಳವಿಕಾ ಬನ್ಸೋಡ್​, ಆಕರ್ಷಿ ಕಶ್ಯಪ್​ ಮತ್ತು ಕಿರಣ್​ ಜಾರ್ಜ್​ ಶುಭಾರಂಭ ಕಂಡಿದ್ದಾರೆ.

23 ವರ್ಷದ ಮಾಳವಿಕಾ ಬನ್ಸೋಡ್​ 21-19, 24-22 ನೇರ ಗೇಮ್​ಗಳಿಂದ ವಿಶ್ವ ನಂ.23, ಚೀನಾ ತೈಪೆಯ ಸುಂಗ್​ ಶುವೋ ಯುನ್​ ಯೂ ಎದುರು ಹೋರಾಟಯುತ ಗೆಲುವು ದಾಖಲಿಸಿದರು. 57 ನಿಮಿಷ ನಡೆದ ಹೋರಾಟದಲ್ಲಿ ಮಾಳವಿಕಾ ಮೇಲುಗೈ ಸಾಧಿಸಿದರು. ಆಕರ್ಷಿ ಕಶ್ಯಪ್​ ಜರ್ಮನಿಯ ಯೆವೊನ್​ ಲಿ ವಿರುದ್ಧ 21-19, 21-14ರಿಂದ ಗೆದ್ದರು. ಪುರುಷರ ಸಿಂಗಲ್ಸ್​ನಲ್ಲಿ ಕಿರಣ್​ ಜಾರ್ಜ್​ 21-16, 13-21, 21-19 ರಿಂದ ಫ್ರಾನ್ಸ್​ನ ಲೂಕಾಸ್​ ಕ್ಯಾಲೆರ್​ಬೌಟ್​ ಅವರನ್ನು ಪರಾಭವಗೊಳಿಸಿದರು. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದ ಲಕ್ಷ್ಯ ಸೇನ್​ ಬುಧವಾರ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net