ಪ್ರವಾಸಿ ತಂಡದಿಂದಲೂ ಜಿಗುಟು ಬ್ಯಾಟಿಂಗ್: ಸೌರಾಷ್ಟ್ರ ಮೇಲುಗೈ, ಬಂಗಾಳ ಪ್ರತಿ ಹೋರಾಟ

Ranaji
Published on

ರಾಜ್​ಕೋಟ್: ಸವಾಲಿನ ಮೊತ್ತ ಕೂಡಿಹಾಕುವ ಮೂಲಕ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಂಗಾಳ ವಿರುದ್ಧ ಮೇಲುಗೈ ಸಾಧಿಸಿದೆ. ಆದರೆ ಬಂಗಾಳ ತಂಡವೂ ನಿಧಾನಗತಿ ಆಟದ ಮೂಲಕ ಪ್ರತಿಹೋರಾಟ ಸಂಘಟಿಸಿದ್ದು, 4ನೇ ದಿನದ ಆಟ ನಿರ್ಣಾಯಕವೆನಿಸುವ ನಿರೀಕ್ಷೆ ಹರಡಿದೆ.

ಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬುಧವಾರ, 8 ವಿಕೆಟ್​ಗೆ 384 ರನ್​ಗಳಿಂದ 3ನೇ ದಿನದಾಟ ಮುಂದುವರಿಸಿದ ಸೌರಾಷ್ಟ್ರ ತಂಡ 171.5 ಓವರ್​ಗಳಲ್ಲಿ 425 ರನ್​ಗೆ

ಆಲೌಟ್ ಆಯಿತು. ಪ್ರತಿಯಾಗಿ ಬಂಗಾಳ ತಂಡವೂ ರನ್​ಗಾಗಿ ಪರದಾಡಿದ್ದು, ದಿನದಂತ್ಯಕ್ಕೆ 65 ಓವರ್​ಗಳಲ್ಲಿ 3 ವಿಕೆಟ್​ಗೆ 134 ರನ್ ಪೇರಿಸಿದೆ. ಬಂಗಾಳ ಇನ್ನೂ 291 ರನ್ ಹಿನ್ನಡೆಯಲ್ಲಿದೆ.

ಬಂಗಾಳದಿಂದಲೂ ಜಿಗುಟಿನ ಆಟ: ನಿಧಾನಗತಿಯ ಈ ಪಿಚ್​ನಲ್ಲಿ ಹೇಗೆ ಆಡಬೇಕೆಂದು ಸೌರಾಷ್ಟ್ರ ಬ್ಯಾಟ್ಸ್​ಮನ್​ಗಳಿಂದ ಕಲಿತ ಪಾಠವನ್ನು ಬಳಸಿಕೊಂಡ ಬಂಗಾಳ ತಂಡವೂ ಜಿಗುಟಿನ ಬ್ಯಾಟಿಂಗ್ ಮೂಲಕ ಆತಿಥೇಯ ಬೌಲರ್​ಗಳನ್ನು ಸತಾಯಿಸಿದೆ. ಆರಂಭಿಕರಾದ ಸುದೀಪ್ ಕುಮಾರ್ ಘರಮಿ (26) ಮತ್ತು ಅಭಿಮನ್ಯು ಈಶ್ವರನ್ (9) ವಿಕೆಟ್​ಗಳನ್ನು ಬೇಗನೆ ಕಬಳಿಸುವಲ್ಲಿ ಸೌರಾಷ್ಟ್ರ ಸಫಲವಾಗಿತ್ತು. ನಂತರ ಜತೆಯಾದ ಅನುಭವಿ ಮನೋಜ್ ತಿವಾರಿ (35 ರನ್, 116 ಎಸೆತ, 2 ಬೌಂಡರಿ) ಮತ್ತು ಸುದೀಪ್ ಚಟರ್ಜಿ (47*ರನ್, 145 ಎಸೆತ, 5 ಬೌಂಡರಿ) ಜೋಡಿ ದಿಟ್ಟ ಪ್ರತಿರೋಧ ತೋರಿತು. ನಂತರ ವೃದ್ಧಿಮಾನ್ ಸಾಹ (4*ರನ್, 43 ಎಸೆತ, 1 ಬೌಂಡರಿ), ಚಟರ್ಜಿಗೆ ಸಾಥ್ ನೀಡಿದ್ದು, ಮುರಿಯದ 4ನೇ ವಿಕೆಟ್​ಗೆ ಇವರಿಬ್ಬರು 12.4 ಓವರ್​ಗಳಲ್ಲಿ ಕೇವಲ 10 ರನ್ ಸೇರಿಸಿದ್ದಾರೆ.

41ರನ್ ಸೇರಿಸಿದ ಸೌರಾಷ್ಟ್ರ

ಬಾಲಂಗೋಚಿಗಳಾದ ಧಮೇಂದ್ರ ಸಿನ್ಹಾ ಜಡೇಜಾ (33*) ಮತ್ತು ನಾಯಕ ಜೈದೇವ್ ಉನಾದ್ಕತ್ (20) ಸಾಹಸದಿಂದ ಬೆಳಗಿನ ಅವಧಿಯ ಒಂದು ಗಂಟೆ, 10 ನಿಮಿಷದ ಆಟದಲ್ಲಿ ಸೌರಾಷ್ಟ್ರ ತಂಡದ ಮೊತ್ತಕ್ಕೆ ಮತ್ತೆ 41 ರನ್ ಸೇರ್ಪಡೆಯಾಯಿತು. 13 ರನ್​ನಿಂದ ಆಟ ಮುಂದುವರಿಸಿದ ಚಿರಾಗ್ ಜಾನಿ (14) ದಿನದ 2ನೇ ಓವರ್​ನಲ್ಲೇ ಆಕಾಶ್​ದೀಪ್​ಗೆ ವಿಕೆಟ್ ಒಪ್ಪಿಸಿದರು. ನಂತರ ಧಮೇಂದ್ರಸಿನ್ಹಾ ಮತ್ತು ಉನಾದ್ಕತ್ ಕೊನೇ ವಿಕೆಟ್​ಗೆ ಅಮೂಲ್ಯ 38 ರನ್ ಕೂಡಿಸಿ ತಂಡವನ್ನು 400ರ ಗಡಿ ದಾಟಿಸು ವಲ್ಲಿ ಸಫಲವಾದರು. ಕೊನೆಗೆ ಸ್ಪಿನ್ನರ್ ಶಾಬಾಜ್ , ಉನಾದ್ಕತ್​ರನ್ನು ಬೌಲ್ಡ್ ಮಾಡಿ ಸೌರಾಷ್ಟ್ರದ ಇನಿಂಗ್ಸ್​ಗೆ ತೆರೆ ಎಳೆದರು.

ಸೌರಾಷ್ಟ್ರ: 171.5 ಓವರ್​ಗಳಲ್ಲಿ 425 (ಮಂಗಳವಾರ 8 ವಿಕೆಟ್​ಗೆ 384)

ಚಿರಾಗ್ ಜಾನಿ ಬಿ ಆಕಾಶ್ ದೀಪ್ 14

ಧಮೇಂದ್ರಸಿನ್ಹಾ ಅಜೇಯ 33

ಜೈದೇವ್ ಉನಾದ್ಕತ್ ಬಿ ಶಾಬಾಜ್ ಅಹಮದ್ 20

ಇತರ: 22. ವಿಕೆಟ್ ಪತನ: 8-364, 9-387. ಬೌಲಿಂಗ್: ಇಶಾನ್ ಪೊರೆಲ್ 26-10-51-1, ಮುಕೇಶ್ ಕುಮಾರ್ 44-9-103-2, ಶಾಬಾಜ್ ಅಹಮದ್ 46.5-14-103-3, ಆಕಾಶ್ ದೀಪ್ 35-9-98-4, ಅರ್ನಬ್ ನಂದಿ 17-3-45-0, ಅನುಷ್ಟುಪ್ ಮಜುಮ್ದಾರ್ 3-0-12-0

ಬಂಗಾಳ: 65 ಓವರ್​ಗಳಲ್ಲಿ 3 ವಿಕೆಟ್​ಗೆ 134

ಸುದೀಪ್ ಬಿ ವಿಶ್ವರಾಜ್ ಬಿ ಧಮೇಂದ್ರಸಿನ್ಹಾ 26

ಅಭಿಮನ್ಯು ಎಲ್​ಬಿಡಬ್ಲ್ಯು ಬಿ ಪ್ರೇರಕ್ 9

ಸುದೀಪ್ ಚಟರ್ಜಿ ಬ್ಯಾಟಿಂಗ್ 47

ಮನೋಜ್ ತಿವಾರಿ ಎಲ್​ಬಿಡಬ್ಲ್ಯು ಚಿರಾಗ್ 35

ವೃದ್ಧಿಮಾನ್ ಸಾಹ ಬ್ಯಾಟಿಂಗ್ 4

ಇತರ: 13 ವಿಕೆಟ್ ಪತನ: 1-35, 2-35, 3-124. ಬೌಲಿಂಗ್: ಜೈದೇವ್ ಉನಾದ್ಕತ್ 14-6-32-0, ಚೇತನ್ ಸಕಾರಿಯಾ 12-4-25-0, ಧಮೇಂದ್ರಸಿನ್ಹಾ ಜಡೇಜಾ 20-4-43-1, ಪ್ರೇರಕ್ ಮಂಕಡ್ 8-4-7-1, ಚಿರಾಗ್ ಜಾನಿ 11-3-16-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net