Ranji Trophy 2026-27: ಜಯದ ನಿರೀಕ್ಷೆಯಲ್ಲಿ ಕರ್ನಾಟಕ, 4ನೇ ಸುತ್ತಿನಲ್ಲಿ ಅಸ್ಸಾಂ ಸವಾಲು

ತ್ರಿಪುರ ವಿರುದ್ಧ ಇನಿಂಗ್ಸ್​ ಗೆಲುವಿನೊಂದಿಗೆ ನಾಕೌಟ್​ಗೇರುವ ಅವಕಾಶ ವೃದ್ಧಿಸಿಕೊಂಡಿರುವ ಹಾಲಿ ರನ್ನರ್​ ಅಪ್​ ಕರ್ನಾಟಕ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಬಸಾರ್ಪುರದ ಎಸಿಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಲಿರುವ ಪ್ರತಿಷ್ಠಿತ ರಣಜಿ ಟ್ರೋಫಿಯ 4ನೇ ಸುತ್ತಿನಲ್ಲಿ ಆತಿಥೇಯ ಅಸ್ಸಾಂ ತಂಡದ ವಿರುದ್ಧ ಶ್ರೇಯಸ್​ ಗೋಪಾಲ್​ ಪಡೆ ಕಣಕ್ಕಿಳಿಯಲಿದ್ದು, ರೆಡ್​ಬಾಲ್​ ಟೂರ್ನಿಯ ಮೊದಲ ಚರಣದ ಕೊನೇ ಪಂದ್ಯವೂ ಇದಾಗಿರಲಿದೆ.
ಮಯಾಂಕ್​ ಅಗರ್ವಾಲ್​
ಮಯಾಂಕ್​ ಅಗರ್ವಾಲ್​ಸಂಗ್ರಹ ಚಿತ್ರ
Published on: 

ಗುವಾಹಟಿ: ತ್ರಿಪುರ ವಿರುದ್ಧ ಇನಿಂಗ್ಸ್​ ಗೆಲುವಿನೊಂದಿಗೆ ನಾಕೌಟ್​ಗೇರುವ ಅವಕಾಶ ವೃದ್ಧಿಸಿಕೊಂಡಿರುವ ಹಾಲಿ ರನ್ನರ್​ ಅಪ್​ ಕರ್ನಾಟಕ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಬಸಾರ್ಪುರದ ಎಸಿಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಲಿರುವ ಪ್ರತಿಷ್ಠಿತ ರಣಜಿ ಟ್ರೋಫಿಯ 4ನೇ ಸುತ್ತಿನಲ್ಲಿ ಆತಿಥೇಯ ಅಸ್ಸಾಂ ತಂಡದ ವಿರುದ್ಧ ಶ್ರೇಯಸ್​ ಗೋಪಾಲ್​ ಪಡೆ ಕಣಕ್ಕಿಳಿಯಲಿದ್ದು, ರೆಡ್​ಬಾಲ್​ ಟೂರ್ನಿಯ ಮೊದಲ ಚರಣದ ಕೊನೇ ಪಂದ್ಯವೂ ಇದಾಗಿರಲಿದೆ.

ಹಾಲಿ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಂಧ್ರ, ಸೌರಾಷ್ಟ್ರ ಎದುರು ಇನಿಂಗಸ್​ ಸಹಿತ ಡ್ರಾಕ್ಕೆ ತೃಪ್ತಿಪಟ್ಟಿದ್ದ ಕರ್ನಾಟಕ, ಹಿಂದಿನ ಪಂದ್ಯದಲ್ಲಿ ತ್ರಿಪುರ ಎದುರು ಇನಿಂಗ್ಸ್​ ಜಯದೊಂದಿಗೆ ಬೋನಸ್​ ಅಂಕ ಬಾಚಿಕೊಂಡಿತು. ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 9 ಅಂಕ ಸಂಪಾದಿಸಿರುವ ರಾಜ್ಯ ತಂಡ ಸದ್ಯ ಬಿ ಗುಂಪಿನ 4ನೇ ಸ್ಥಾನದಲ್ಲಿದೆ. ಕಳೆದ ಋತುವಿನ ಮೂರನೇ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಆಗಿರುವ ಶ್ರೇಯಸ್​ ಗೋಪಾಲ್​, ದೇವದತ್​ ಪಡಿಕ್ಕಲ್​-ಆರ್​. ಸ್ಮರಣ್​ ಗೈರಿನಲ್ಲಿ ತಂಡ ಮುನ್ನಡೆಸಲಿದ್ದಾರೆ.

ಹಿರಿಯ ಆಟಗಾರರಾದ ಕೆಎಲ್​ ರಾಹುಲ್​, ದೇವದತ್​ ಪಡಿಕ್ಕಲ್​, ಪ್ರಸಿದ್ಧ ಕೃಷ್ಣ ಅಲಭ್ಯತೆಯಲ್ಲಿ ಮುಖ್ಯ ಕೋಚ್​ ಆರ್​.ವಿನಯ್​ ಕುಮಾರ್​ ಯುವ ಪ್ರತಿಭೆಗಳ ಸಾಮರ್ಥ್ಯ ಅನಾವರಣಕ್ಕೆ ಅವಕಾಶ ಕಲ್ಪಿಸಿದ್ದು, ಇದು ಪೂರಕ ಫಲಿತಾಂಶವನ್ನೇ ನೀಡಿದೆ. ಆಲ್ರೌಂಡರ್​ ಮನ್ವಂತ್​ ಕುಮಾರ್​, ಅನೀಶ್ವರ್​ ಗೌತಮ್​, ರೋಹನ್​ ಪಾಟೀಲ್​ ಹಾಗೂ ರಿತೇಶ್​ ಭಟ್ಕಳ್​ ಸಹಿತ ನಾಲ್ವರು ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗಗಳಲ್ಲಿ ಕೊಡುಗೆ ನೀಡಿದ್ದಾರೆ. ಹಾಲಿ ಋತುವಿನಲ್ಲಿ ಇನ್ನೂ ಅರ್ಧಶತಕ ಗಳಿಸದ ಮಾಜಿ ನಾಯಕ ಮಯಾಂಕ್​ ಅಗರ್ವಾಲ್​ ಲಯಕ್ಕೆ ಮರಳಬೇಕಿದ್ದು, ಅನುಭವಿ ಕರುಣ್​ ನಾಯರ್​ ತಲಾ 1 ಅರ್ಧಶತಕ, ಶತಕ ಸಹಿತ 305 ರನ್​ ಗಳಿಸಿದ್ದಾರೆ.

ಬೌಲಿಂಗ್​ ವಿಭಾಗ ಮತ್ತಷ್ಟು ಪರಿಣಾಮಕಾರಿ ಪ್ರದರ್ಶನ ತೋರಬೇಕಿದ್ದು, ಬರ್ಸಾಪುರ ಪಿಚ್​ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ. ಕರ್ನಾಟಕಕ್ಕಿಂತ ಕೇವಲ 2 ಅಂಕ ಹಿಂದೆ ಉಳಿದಿರುವ ಅಸ್ಸಾಂ, ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರ ಎದುರು ಸೋತಿದೆ. ನಾಯಕ ಡೆನಿಶ್​ ದಾಸ್​ ಜತೆಗೆ ಅನುಭವಿ ಸಿಬ್ಶಂಕರ್​ ರಾಯ್​ ಬ್ಯಾಟಿಂಗ್​ ಬಲ ಎನಿಸಿದ್ದು, ಮುಕ್ತಾರ್​ ಹುಸೇನ್​, ಹೃದೀಪ್​ ದೇಕಾ, ಮೋಹಿತ್​ ಠಾಕೂರ್​ ಒಳಗೊಂಡ ಬೌಲಿಂಗ್​ ವಿಭಾಗವೂ ರಾಜ್ಯಕ್ಕೆ ಸವಾಲೊಡ್ಡಬಹುದು.

ಪಂದ್ಯಕ್ಕೆ ಮಳೆ ಭೀತಿ ಇಲ್ಲದ ಕಾರಣ ಕರ್ನಾಟಕಕ್ಕೆ ಮತ್ತೊಮ್ಮೆ ಬೋನಸ್​ ಸಹಿತ ಅಂಕ ಗಳಿಸಲು ಈ ಪಂದ್ಯ ಉತ್ತಮ ಅವಕಾಶ ಎನಿಸಿದೆ. ಗುವಾಹಟಿಯಲ್ಲಿ ಬೇಗನೇ ಸೂರ್ಯ ಮುಳುಗುವುದರಿಂದ ದಿನದಾಟ ಬೆಳಗ್ಗೆ 8.30ಕ್ಕೆ ಆರಂಭವಾಗಿ ಸಂಜೆ 4 ಗಂಟೆಗೆ ಮುಗಿಯಲಿದೆ.

ಆರಂಭ: ಬೆಳಗ್ಗೆ 8.30, ನೇರಪ್ರಸಾರ ಇರುವುದಿಲ್ಲ