ಇಂದಿನಿಂದ ರಣಜಿ ಟ್ರೋಫಿ ಹಣಾಹಣಿ: ಕರ್ನಾಟಕಕ್ಕೆ ಸೌರಾಷ್ಟ್ರ ಮೊದಲ ಸವಾಲು

web ranji
Published on

ಬೆಂಗಳೂರು: ಪ್ರತಿಷ್ಠಿತ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ 91ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ದುಲೀಪ್​ ಟ್ರೋಫಿ, ಇರಾನಿ ಟ್ರೋಫಿ ಮೂಲಕ ದೇಶೀಯ ಕ್ರಿಕೆಟ್​ ಹಬ್ಬ ಈಗಾಗಲೆ ಶುರುವಾಗಿದ್ದು, ಬುಧವಾರದಿಂದ ಇನ್ನಷ್ಟು ಮೆರುಗು ಪಡೆದುಕೊಳ್ಳಲಿದೆ. ವಿದರ್ಭ ತಂಡ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯುತ್ತಿದ್ದರೆ, 8 ಬಾರಿಯ ಚಾಂಪಿಯನ್​ ಕರ್ನಾಟಕ, 42 ಬಾರಿಯ ಚಾಂಪಿಯನ್​ ಮುಂಬೈ, ತಮಿಳುನಾಡು, ಸೌರಾಷ್ಟ್ರ, ದೆಹಲಿ ಮತ್ತು ಹಾಲಿ ರನ್ನರ್​ಅಪ್​ ಕೇರಳ ಯುವ-ಅನುಭವಿ ಆಟಗಾರರ ಮಿಶ್ರಣದೊಂದಿಗೆ ಪ್ರಶಸ್ತಿ ಪೈಪೋಟಿ ನಡೆಸಲಿವೆ. ಭಾರತದ ಯುವ ಟೆಸ್ಟ್​ ತಂಡದಲ್ಲಿ ಸ್ಥಾನ ಸಂಪಾದಿಸುವ ಕನಸಿನಲ್ಲಿರುವವರಿಗೆ ಆಯ್ಕೆಗಾರರ ಗಮನಸೆಳೆಯಲು ಇದು ಉತ್ತಮ ಅವಕಾಶವೆನಿಸಿದೆ.

11 ವರ್ಷಗಳ ಬರ ನೀಗುವುದೇ ಕರ್ನಾಟಕ?

ಮಯಾಂಕ್​ ಅಗರ್ವಾಲ್​ ಸಾರಥ್ಯದ ಕರ್ನಾಟಕ ತಂಡ ರಾಜ್​ಕೋಟ್​ನಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಅಭಿಯಾನ ಆರಂಭಿಸಲಿದ್ದು, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ಮೊದಲ ಪಂದ್ಯದಲ್ಲೇ ಸಮಾನ ಬಲಾಬಲದ ತಂಡವನ್ನು ಎದುರಿಸುವ ಸವಾಲು ರಾಜ್ಯ ತಂಡಕ್ಕಿದ್ದು, ಅನುಭವಿ-ಯುವ ಆಟಗಾರರ ಉತ್ತಮ ಮಿಶ್ರಣದೊಂದಿಗೆ ಆತ್ಮವಿಶ್ವಾಸದಲ್ಲಿದೆ. ಅನುಭವಿ ಬ್ಯಾಟರ್​ ಕರುಣ್​ ನಾಯರ್​ 3 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಲಿದೆ. ವಿಂಡೀಸ್​ ವಿರುದ್ಧ ಟೆಸ್ಟ್​ ಸರಣಿ ಮುಗಿದ ಬೆನ್ನಲ್ಲೇ ದೇವದತ್​ ಪಡಿಕ್ಕಲ್​ ಕೂಡ ರಾಜ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಜತೆಗೆ ಯುವ ಬ್ಯಾಟರ್​ಗಳಾದ ಆರ್​. ಸ್ಮರಣ್​, ನಿಕಿನ್​ ಜೋಸ್​, ವಿಕೆಟ್​ ಕೀಪರ್​ ಶ್ರೀಜಿತ್​ ಕೆಎಲ್​ ಕಳೆದ ಆವೃತ್ತಿಯ ಫಾರ್ಮ್​ ಮುಂದುವರಿಸುವ ನಿರೀಕ್ಷೆ ಇದೆ. ವೈಶಾಕ್​ ವಿಜಯ್​ಕುಮಾರ್​, ವಿದ್ವತ್​ ಕಾವೇರಪ್ಪ, ಅಭಿಲಾಷ್​ ಶೆಟ್ಟಿ, ವೆಂಕಟೇಶ್​ ಎಂ. ಒಳಗೊಂಡ ವೇಗದ ಬೌಲಿಂಗ್​ ವಿಭಾಗ ಬಲಿಷ್ಠವಾಗಿದ್ದರೆ, ಅನುಭವಿ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ಗೆ ಯುವ ಸ್ಪಿನ್ನರ್​ಗಳಾದ ಮೊಹ್ಸಿನ್​ ಖಾನ್​ ಮತ್ತು ಎಡಗೈ ಸ್ಪಿನ್ನರ್​ ಶಿಖರ್​ ಶೆಟ್ಟಿ ಸಾಥ್​ ನೀಡಲಿದ್ದಾರೆ. ಅತ್ತ ಸೌರಾಷ್ಟ್ರ ತಂಡ ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ ನಿವೃತ್ತಿಯ ನಂತರ ಹೊಸ ಅಧ್ಯಾಯಕ್ಕೆ ಸಜ್ಜಾಗಿದೆ. ಜೈದೇವ್​ ಉನಾದ್ಕತ್​ ಸಾರಥ್ಯ ವಹಿಸಿದ್ದಾರೆ. ಹಾರ್ವಿಕ್​ ದೇಸಾಯಿ, ಅರ್ಪಿತ್​ ವಸವಾಡ, ಚಿರಾಗ್​ ಜಾನಿ, ಪ್ರೇರಕ್​ ಮಂಕಡ್​, ಚೇತನ್​ ಸಕಾರಿಯಾ ಮತ್ತು ಧಮೇರ್ಂದ್ರಸಿನ್ಹಾ ಜಡೇಜಾ ತಂಡದ ಇತರ ಪ್ರಮುಖ ಆಟಗಾರರು.

*ಆರಂಭ: ಬೆಳಗ್ಗೆ 9.30

*ನೇರಪ್ರಸಾರ: ಜಿಯೋ ಹಾಟ್​ಸ್ಟಾರ್​

ಕರ್ನಾಟಕದ ಪಂದ್ಯಗಳು

ದಿನಾಂಕ :ಎದುರಾಳಿ (ಸ್ಥಳ)

ಅ.15-18: ಸೌರಾಷ್ಟ್ರ (ರಾಜ್​ಕೋಟ್)​

ಅ.25-28: ಗೋವಾ (ಶಿವಮೊಗ್ಗ)

ನ.1-4: ಕೇರಳ (ತಿರುವನಂತಪುರ)

ನ. 8-11 : ಮಹಾರಾಷ್ಟ್ರ (ನಾಸಿಕ್)​

ನ.16-19: ಚಂಡೀಗಢ (ಹುಬ್ಬಳ್ಳಿ)

ಜ.22-25:ಮಧ್ಯಪ್ರದೇಶ (ಬೆಂಗಳೂರು)

ಜ.29-ಫೆ.1: ಪಂಜಾಬ್​ (ಚಂಡೀಗಢ)

ಪ್ರಮುಖರು ಕಣಕ್ಕೆ

ರಾಷ್ಟ್ರೀಯ ತಂಡದಿಂದ ಹೊರಗಿರುವ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಈಗಾಗಲೆ ಸೂಚಿಸಿದೆ. ಇದರಿಂದ ವಿಂಡೀಸ್​ ವಿರುದ್ಧ ಸರಣಿಯಲ್ಲಿ ಆಡಿದ್ದ ಕೆಲ ಟೆಸ್ಟ್​ ಆಟಗಾರರೂ ರಣಜಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರ್ದೂಲ್​ ಠಾಕೂರ್​, ಇಶಾನ್​ ಕಿಶನ್​, ಪೃಥ್ವಿ ಷಾ, ಸ್ರಾರ್ಜ್​ ಖಾನ್​, ಅಭಿಮನ್ಯು ಈಶ್ವರನ್​, ಋತುರಾಜ್​ ಗಾಯಕ್ವಾಡ್​, ರಜತ್​ ಪಾಟೀದಾರ್​, ಅನುಭವಿಗಳಾದ ಮೊಹಮದ್​ ಶಮಿ, ಅಜಿಂಕ್ಯ ರಹಾನೆ ಕಣದಲ್ಲಿರುವ ಪ್ರಮುಖರು. ದಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಗೆ ಫಿಟ್​ ಆಗುವ ನಿರೀಕ್ಷೆಯಲ್ಲಿರುವ ವಿಕೆಟ್​ ಕೀಪರ್-ಬ್ಯಾಟರ್​ ರಿಷಭ್​ ಪಂತ್​ 2ನೇ ಸುತ್ತಿನಲ್ಲಿ ದೆಹಲಿ ಪರ ಆಡಲಿದ್ದಾರೆ ಎನ್ನಲಾಗಿದೆ.

ಯುವ ತಾರೆಯರ ಮೇಲೆ ಕಣ್ಣು

ಟೀಮ್​ ಇಂಡಿಯಾ ಸ್ಥಿತ್ಯಂತರ ಕಾಣುತ್ತಿರುವ ಸಮಯದಲ್ಲಿ ದೇಶೀಯ ಕ್ರಿಕೆಟ್​ನಲ್ಲೂ ಕೆಲ ಯುವ ಪ್ರತಿಭೆಗಳು ಗಮನಸೆಳೆಯಲು ಸಜ್ಜಾಗಿವೆ. ಭವಿಷ್ಯದಲ್ಲಿ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿರುವ ಕರ್ನಾಟಕದ ಆರ್​. ಸ್ಮರಣ್​, ತಮಿಳುನಾಡಿನ ಆಂಡ್ರೆ ಸಿದ್ಧಾರ್ಥ್​, ಗುರುಜಪ್​ನೀತ್​ ಸಿಂಗ್​, ದೆಹಲಿಯ ಯಶ್​ ಧುಲ್​, ಪ್ರಿಯಾಂಶ್​ ಆರ್ಯ, ಬಿಹಾರದ ವೈಭವ್​ ಸೂರ್ಯವಂಶಿ, ಮುಂಬೈನ ಆಯುಷ್​ ಮಹಾತ್ರೆ, ವಿದರ್ಭದ ಡ್ಯಾನಿಶ್​ ಮಾಲೆವರ್​, ಯಶ್​ ದುಬೆ, ಕೇರಳದ ಈಡನ್​ ಆಪ್ಲೆ, ರಾಜಸ್ಥಾನದ ಮಾನವ್​ ಸುಥರ್​ ಮಿಂಚುವ ನಿರೀಕ್ಷೆ ಇದೆ.

ಗುಂಪುಗಳು

ಎ: ವಿದರ್ಭ, ತಮಿಳುನಾಡು, ಬರೋಡ, ಜಾರ್ಖಂಡ್​, ಒಡಿಶಾ, ಉತ್ತರ ಪ್ರದೇಶ, ಆಂಧ್ರ, ನಾಗಾಲ್ಯಾಂಡ್​.

ಬಿ: ಕೇರಳ, ಸೌರಾಷ್ಟ್ರ, ಚಂಡೀಗಢ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್​, ಗೋವಾ.

ಸಿ: ಗುಜರಾತ್​, ಹರಿಯಾಣ, ಸರ್ವೀಸಸ್​, ಬಂಗಾಳ, ರೈಲ್ವೇಸ್​, ತ್ರಿಪುರ, ಉತ್ತರಾಖಂಡ, ಅಸ್ಸಾಂ.

ಡಿ: ಮುಂಬೈ, ಜಮ್ಮು&ಕಾಶ್ಮೀರ, ಹಿಮಾಚಲ ಪ್ರದೇಶ, ದೆಹಲಿ, ಹೈದರಾಬಾದ್​, ರಾಜಸ್ಥಾನ, ಛತ್ತೀಸ್​ಗಢ, ಪುದುಚೇರಿ.

ಪ್ಲೇಟ್​: ಬಿಹಾರ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ.

ಎರಡು ಹಂತಗಳಲ್ಲಿ ಟೂರ್ನಿ

ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್​ 19ರವರೆಗೆ ತಲಾ 5 ಲೀಗ್​ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್​ಬಾಲ್​ ಕ್ರಿಕೆಟ್​ ಟೂರ್ನಿಗಳು ಅಂದರೆ ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಟಿ20 (ನ. 26-ಡಿ.8) ಮತ್ತು ವಿಜಯ್​ ಹಜಾರೆ ಟ್ರೋಫಿ ಏಕದಿನ (ಡಿ.24-ಜ.8) ಟೂರ್ನಿಗಳು ನಡೆಯಲಿವೆ. ನಂತರ ಜ.22ರಿಂದ ರಣಜಿಯ ಕೊನೇ 2 ಲೀಗ್​ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 6ರಿಂದ ನಾಕೌಟ್​ ಪಂದ್ಯಗಳು ನಡೆಯಲಿವೆ. ಫೆಬ್ರವರಿ 24ರಿಂದ 28ರವರೆಗೆ ನಡೆಯಲಿರುವ ಫೈನಲ್​ ಪಂದ್ಯದೊಂದಿಗೆ ಹಾಲಿ ದೇಶೀಯ ಕ್ರಿಕೆಟ್​ ಋತುವಿಗೆ ತೆರೆ ಬೀಳಲಿದೆ. ಟೂರ್ನಿಯಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು 38 ತಂಡಗಳ ಪೈಕಿ ಎಲೈಟ್​ ಹಂತದಲ್ಲಿರುವ 32 ತಂಡಗಳನ್ನು ತಲಾ 8ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಉಳಿದ 6 ತಂಡಗಳು ಪ್ಲೇಟ್​ ಗುಂಪಿನಲ್ಲಿವೆ. ಎಲೈಟ್​ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್​ಗೇರಲಿವೆ. ಪ್ಲೇಟ್​ ಗುಂಪಿನ ಅಗ್ರ 2 ತಂಡಗಳು ಪ್ಲೇಟ್ ಫೈನಲ್​ನಲ್ಲಿ ಆಡಲಿವೆ. ಇವೆರಡು ತಂಡಗಳು 2026&27ರ ಸಾಲಿನಲ್ಲಿ ಎಲೈಟ್​ ಗುಂಪಿನಲ್ಲಿ ಆಡಲಿದ್ದರೆ, ಎಲೈಟ್​ ಗುಂಪಿನ 2 ಕೊನೇ ಸ್ಥಾನಿ ತಂಡಗಳು ಮುಂದಿನ ಬಾರಿ ಪ್ಲೇಟ್​ ಗುಂಪಿಗೆ ಹಿಂಬಡ್ತಿ ಪಡೆಯಲಿವೆ.

10 ಪಂದ್ಯ ಆಡಿದರೆ 1 ಕೋಟಿ ರೂ. ಬೋನಸ್​!

ರಣಜಿ ಟ್ರೋಫಿಯಲ್ಲಿ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 1.6 ಲಕ್ಷ ರೂ. ವೇತನ ನೀಡಲಾಗುತ್ತದೆ. 21ರಿಂದ 40 ಪಂದ್ಯ ಆಡಿರುವವರಿಗೆ 2 ಲಕ್ಷ ರೂ. ಮತ್ತು 40ಕ್ಕಿಂತ ಅಧಿಕ ಪಂದ್ಯ ಆಡಿರುವವರಿಗೆ ಪ್ರತಿದಿನಕ್ಕೆ 2.4 ಲಕ್ಷ ರೂ. ವೇತನ ನೀಡಲಾಗುತ್ತದೆ. ಇದರ ಜತೆಗೆ ಈ ಬಾರಿ ಫೈನಲ್​ವರೆಗೆ ಎಲ್ಲ 10 ಪಂದ್ಯಗಳಲ್ಲಿ ಆಡುವ ಆಟಗಾರರಿಗೆ 75 ಲಕ್ಷದಿಂದ 1 ಕೋಟಿ ರೂ. ತನಕ ಬೋನಸ್​ ಸಿಗಲಿದೆ. ದೇಶೀಯ ಕ್ರಿಕೆಟಿಗರಿಗೆ ಹೆಚ್ಚಿನ ಆರ್ಥಿಕ ಬಲ ತುಂಬಲು ಬಿಸಿಸಿಐ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

5 ಕೋಟಿ ರೂ. ಬಹುಮಾನ

ರಣಜಿ ಟ್ರೋಫಿಯ ವಿಜೇತ ತಂಡ 5 ಕೋಟಿ ರೂ. ಪಡೆದರೆ, ರನ್ನರ್​ಅಪ್​ ತಂಡ 3 ಕೋಟಿ ರೂ. ಗಳಿಸಲಿದೆ.

*42: ರಣಜಿಯಲ್ಲಿ ಮುಂಬೈ ದಾಖಲೆಯ 42 ಬಾರಿ ಚಾಂಪಿಯನ್​ ಪಟ್ಟವೇರಿದೆ. ಕರ್ನಾಟಕ 8 ಬಾರಿ ಗೆದ್ದಿರುವುದು ನಂತರದ ಗರಿಷ್ಠ. ದೆಹಲಿ (7), ಮಧ್ಯಪ್ರದೇಶ (5), ಬರೋಡ (5), ಸೌರಾಷ್ಟ್ರ (4), ವಿದರ್ಭ (3), ಬಂಗಾಳ (2), ತಮಿಳುನಾಡು (2), ರಾಜಸ್ಥಾನ (2), ಹೈದರಾಬಾದ್​ (2), ಮಹಾರಾಷ್ಟ್ರ (2), ರೈಲ್ವೇಸ್​ (2) ನಂತರದ ಸ್ಥಾನದಲ್ಲಿವೆ.

ಕನ್ನಡಿಗರ ವಲಸೆ

ಕರುಣ್​ ನಾಯರ್​ ಈ ಬಾರಿ ವಿದರ್ಭದಿಂದ ಕರ್ನಾಟಕ ತಂಡಕ್ಕೆ ಮರಳಿರುವ ನಡುವೆ ಇತರ ಕೆಲ ಕನ್ನಡಿಗರು ವಲಸೆ ಹೋಗಿದ್ದಾರೆ. ವೇಗಿ ವಿ. ಕೌಶಿಕ್​ ಗೋವಾ ಸೇರಿದ್ದರೆ, ಆರ್​. ಸಮರ್ಥ್​ ಈ ಬಾರಿ ವಿದರ್ಭ ತಂಡದಲ್ಲಿ ಕರುಣ್​ ಸ್ಥಾನವನ್ನು ತುಂಬಲಿದ್ದಾರೆ. ಸ್ಪಿನ್ನರ್​ ಜೆ. ಸುಚಿತ್​ ಉತ್ತರಾಖಂಡ ಪರ ಕಣಕ್ಕಿಳಿಯಲಿದ್ದಾರೆ. ಕೆಸಿ ಕಾರ್ಯಪ್ಪ ಮಿಜೋರಾಂ ಪರ ಆಡಲಿದ್ದಾರೆ. ಡಿ. ನಿಶ್ಚಲ್​, ರೋನಿತ್​ ಮೋರೆ, ಆರ್​. ಜೊನಾಥನ್​ ನಾಗಾಲ್ಯಾಂಡ್​ ಪರ ಮುಂದುವರಿಯಲಿದ್ದಾರೆ.

ಪ್ರಮುಖರ ವಲಸೆ

ಈ ಬಾರಿ ಕೆಲ ಪ್ರಮುಖ ಆಟಗಾರರು ವಲಸೆ ಹೋಗಿದ್ದಾರೆ. ಆಂಧ್ರದ ಹನುಮ ವಿಹಾರಿ ಮತ್ತು ತಮಿಳುನಾಡಿನ ವಿಜಯ್​ ಶಂಕರ್​ ತ್ರಿಪುರಕ್ಕೆ ವಲಸೆ ಹೋಗಿದ್ದರೆ, ಮುಂಬೈನ ಪೃಥ್ವಿ ಷಾ ಮಹಾರಾಷ್ಟ್ರ ತಂಡ ಸೇರಿದ್ದಾರೆ. ಹರಿಯಾಣದ ಜಯಂತ್​ ಯಾದವ್​ ಪುದುಚೇರಿಗೆ ಹೋಗಿದ್ದಾರೆ. ಜಲಜ್​ ಸಕ್ಸೇನಾ ಕೇರಳದಿಂದ ಮಹಾರಾಷ್ಟ್ರಕ್ಕೆ, ಹರ್ಷಲ್​ ಪಟೇಲ್​ ಹರಿಯಾಣದಿಂದ ಗುಜರಾತ್​ಗೆ ತೆರಳಿದ್ದಾರೆ. ಜಿತೇಶ್​ ಶರ್ಮ ವಿದರ್ಭದಿಂದ ಬರೋಡಗೆ ವಲಸೆ ಹೋಗಿದ್ದಾರೆ.

ಗಂಭೀರ ಗಾಯಕ್ಕೆ ಬದಲಿಗ

ಈ ಬಾರಿ ರಣಜಿ ಪಂದ್ಯದ ವೇಳೆ ಆಟಗಾರರಿಗೆ ಗಂಭೀರ ಗಾಯವಾದರೆ ತಂಡಕ್ಕೆ ಹಿನ್ನಡೆಯಾಗದು. ಯಾಕೆಂದರೆ ಬದಲಿ ಆಟಗಾರನಿಗೆ ಬ್ಯಾಟಿಂಗ್​&ಬೌಲಿಂಗ್​ ಅವಕಾಶವೂ ಲಭಿಸಲಿದೆ. ಬಿಸಿಸಿಐ ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಜಾರಿಗೆ ತಂದಿರುವ ಈ ನಿಯಮ ಈಗಾಗಲೆ ದುಲೀಪ್​ ಟ್ರೋಫಿಯಲ್ಲಿ ಮೊದಲ ಬಾರಿ ಬಳಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net