

ನವದೆಹಲಿ: ಆರ್ಸಿಬಿ ತಂಡದೊಂದಿಗೆ ಕಪ್ ಗೆಲ್ಲುವ ಕನಸನ್ನು ಕೊನೆಗೂ 18 ವರ್ಷಗಳ ಬಳಿಕ ನನಸಾಗಿಸಿಕೊಂಡಿರುವ ವಿರಾಟ್ ಕೊಹ್ಲಿ ಐಪಿಎಲ್ನಿಂದ ನಿವೃತ್ತಿ ಹೊಂದುವ ಅಥವಾ ಆರ್ಸಿಬಿ ತಂಡಕ್ಕೆ ಗುಡ್ಬೈ ಹೇಳುವ ಸಾಧ್ಯತೆಗಳು ಕಾಣಿಸಿಕೊಂಡಿವೆ.
36 ವರ್ಷದ ವಿರಾಟ್ ಕೊಹ್ಲಿ 2026ರ ಐಪಿಎಲ್ಗೆ ಪೂರ್ವಭಾವಿಯಾಗಿ ಆರ್ಸಿಬಿ ತಂಡದ ಜತೆಗಿನ ಕಮರ್ಷಿಯಲ್ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಇದು ಭವಿಷ್ಯದಲ್ಲಿ ಅವರು ಐಪಿಎಲ್ನಲ್ಲಿ ಆಡುವ ಅಥವಾ ಆರ್ಸಿಬಿ ತಂಡದಲ್ಲಿ ಮುಂದುವರಿಯುವ ಬಗ್ಗೆ ಅನುಮಾನ ಮೂಡಿಸಿದೆ.
ಕೊಹ್ಲಿ ತನ್ನ ಬ್ರಾ$್ಯಂಡ್ಅನ್ನು ಆರ್ಸಿಬಿ ಫ್ರಾಂಚೈಸಿಗೆ ಬಳಸಿಕೊಳ್ಳಲು ಅನುಮತಿ ನೀಡುವ ಒಪ್ಪಂದ ಇದಾಗಿದ್ದು, ಕಳೆದ ಕೆಲ ವರ್ಷಗಳಿಂದ ಅವರು ಈ ಒಪ್ಪಂದ ಹೊಂದಿದ್ದಾರೆ. ಆದರೆ ಈಗ ಆರ್ಸಿಬಿ ಫ್ರಾಂಚೈಸಿ ತನ್ನ ಮುಖವನ್ನು ಬಳಸಿಕೊಳ್ಳದೆ ಕಾರ್ಯನಿರ್ವಹಿಸಬೇಕೆಂದು ಕೊಹ್ಲಿ ಬಯಸಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಗೆ ಈ ರೀತಿಯ ಒಪ್ಪಂದವನ್ನು ಹೊಂದಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ಆರ್ಸಿಬಿ ತಂಡದ ಮಾರಾಟ ವರದಿಯ ನಡುವೆ ಇದು ಅಭಿಮಾನಿಗಳಿಗೆ ಮತ್ತಷ್ಟು ಆತಂಕ ತಂದಿದೆ.
ಕೊಹ್ಲಿ ಕಳೆದ ವರ್ಷ ಜೂನ್ನಲ್ಲಿ ಚುಟುಕು ಕ್ರಿಕೆಟ್ ವಿಶ್ವಕಪ್ ಗೆದ್ದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಆದರೆ ಐಪಿಎಲ್ನಲ್ಲಿ ಮಾತ್ರ ಟಿ20 ಪಂದ್ಯ ಆಡುವುದನ್ನು ಮುಂದುವರಿಸಿದ್ದರು. ಹಾಲಿ ವರ್ಷ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿರುವ ಕಾರಣ ಅವರು, ಎಲ್ಲ ಮಾದರಿಯ ಟಿ20 ಕ್ರಿಕೆಟ್ನಿಂದ ಹೊರನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಥವಾ ಅವರು ಈ ಬಾರಿ ಆರ್ಸಿಬಿ ತಂಡವನ್ನು ತ್ಯಜಿಸಿ ಬೇರೆ ತಂಡದ ಪರ ಆಡಲು ಮುಂದಾಗಬಹುದೇ ಎಂದೂ ವಿಶ್ಲೇಷಿಸಲಾಗುತ್ತಿದೆ. ಆದರೆ ನಾನು ಆರ್ಸಿಬಿ ಬಿಟ್ಟು ಬೇರೆ ತಂಡದ ಪರ ಆಡುವ ಬಗ್ಗೆ ಯೋಚಿಸಿಲ್ಲ ಎಂದು ಕೊಹ್ಲಿ ಈ ಹಿಂದೆ ಹಲವು ಬಾರಿ ಹೇಳಿದ್ದಾರೆ ಎಂಬುದು ಕೂಡ ಗಮನಾರ್ಹ.
ಹಾಲಿ ವರ್ಷ ಮೇನಲ್ಲಿ ಟೆಸ್ಟ್ ಕ್ರಿಕೆಟ್ಗೂ ವಿದಾಯ ಹೇಳಿರುವ ಕೊಹ್ಲಿ ಪ್ರಸಕ್ತ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅ.19ರಿಂದ ನಡೆಯಲಿರುವ ಆಸ್ಟ್ರೆಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಮತ್ತೆ ಕಣಕ್ಕಿಳಿಯಲಿರುವ ಕೊಹ್ಲಿ, ನಂತರ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲೂ ಕೆಲ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.